ಪ್ರಜ್ವಲ್ ದೇವರಾಜ್ ಅಭಿನಯದ ಮೂರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಮಧ್ಯೆ, ಅವರು ಇನ್ನೊಂದು ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿವೆ.
ಗುರು ದೇಶಪಾಂಡೆ ನಿರ್ಮಾಣದ ಹಾಗೂ ಬಿ.ಎಂ. ಗಿರಿರಾಜ್ ನಿರ್ದೇಶನದ ‘ರಾಮರಸ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ಗುರುಸಿದ್ಧ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಅಲೆಮಾರಿ ಪರಂಪರೆಯಾದ ಸುಡುಗಾಡು ಸಿದ್ಧ ಸಮುದಾಯದ ಹಿನ್ನೆಲೆಯನ್ನು ಈ ಪಾತ್ರ ಹೊಂದಿದೆ. ಇತ್ತೀಚೆಗೆ ಅವದೂತ ವಿನಯ್ ಗುರೂಜಿ ಈ ಪಾತ್ರದ ಟೀಸರ್ ಅನಾವರಣ ಮಾಡಿ ‘ರಾಮರಸ’ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಕುರಿತು ಮಾತನಾಡಿದ ನಿರ್ಮಾಪಕ ಗುರು ದೇಶಪಾಂಡೆ, ‘’ಜಂಟಲ್‍ಮ್ಯಾನ್’ ಚಿತ್ರದ ನಂತರ ಪ್ರಜ್ವಲ್ ನಮ್ಮ ಸಂಸ್ಥೆಯ ಚಿತ್ರದಲ್ಲಿ ನಟಿಸಿದ್ದಾರೆ. ಗುರುಸಿದ್ದ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರ ಪವಾಡ ಪುರುಷರು ಎಂದೇ ಕರೆಯಲ್ಪಡುವ ಸುಡುಗಾಡು ಸಿದ್ದರ ಪಾತ್ರವಾಗಿರುತ್ತದೆ. ಅವರು ಪರಮಶಿವನ ಪರಮ ಭಕ್ತರು. ಒಂದೇ ಕಡೆ ಇರದ ಸಿದ್ದರು, ಹಳ್ಳಿಹಳ್ಳಿಗೆ ಸಂಚಾರ ಮಾಡುವುದರ ಜೊತೆಗೆ, ಭವಿಷ್ಯ ನುಡಿಯುವುದು ಮತ್ತು ಅಪರೂಪದ ಗಿಡಮೂಲಿಕೆಗಳ ಮೂಲಕ ಚಿಕಿತ್ಸೆ ನೀಡುವುದು ಮುಂತಾದ ಜನಾನುರಾಗಿ ಕೆಲಸಗಳನ್ನು ಮಾಡುತ್ತಾರೆ. ಈ ಚಿತ್ರದ ಕೊನೆಯ 20 ನಿಮಿಷಗಳ ಕ್ಲೈಮ್ಯಾಕ್ಸ್ ಅನ್ನು ಜನರು ಚಪ್ಪಲಿ ಬಿಟ್ಟು ನೋಡುವುದಂತು ಖಂಡಿತ. ಅಷ್ಟು ಅದ್ಭುತವಾಗಿ ಮೂಡಿಬಂದಿದೆ’ ಎಂದರು.
ಈ ಚಿತ್ರವನ್ನು ಗುರು ದೇಶಪಾಂಡೆ ಅವರು ಅದು ಹೇಗೆ ಕಡಿಮೆ ಬಜೆಟ್ ನಲ್ಲಿ ಮಾಡೋಣ ಅಂದುಕೊಂಡರೊ ಗೊತ್ತಿಲ್ಲ ಎಂದ ಪ್ರಜ್ವಲ್, ‘ಇದೊಂದು ಬಿಗ್ ಬಿಗ್ ಬಜೆಟ್ ಸಿನಿಮಾ. ನನ್ನ ಪಾತ್ರ ಕೂಡ ಚೆನ್ನಾಗಿದೆ. VFX ಅದ್ಬುತವಾಗಿದೆ. ಇದು ಈ ವರ್ಷದ ದೊಡ್ಡ ಚಿತ್ರವಾಗಲಿದೆ’ ಎಂದು ಪ್ರಜ್ವಲ್ ದೇವರಾಜ್ ಹೇಳಿದರು.
ಈ ಸಂದರ್ಭದಲ್ಲಿ ಚಿತ್ರದ ನಾಯಕ ಕಾರ್ತಿಕ್ ಮಹೇಶ್, ಛಾಯಾಗ್ರಾಹಕ ಕೃಷ್ಣಕುಮಾರ್, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ, ಗೀತರಚನೆಕಾರರಾದ ವಿ.ನಾಗೇಂದ್ರ ಪ್ರಸಾದ್, ಪುನೀತ್ ರಂಗಸ್ವಾಮಿ, ಸಾಹಸ ನಿರ್ದೇಶಕ ಅರ್ಜುನ್ ಮಾಸ್ಟರ್, ನಟಿ ಯಮುನಾ ಶ್ರೀನಿಧಿ ಮುಂತಾದವರು ಹಾಜರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ‘ಜಂಟಲ್‍ಮ್ಯಾನ್’ ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿರುವ ಪ್ರಜ್ವಲ್ ದೇವರಾಜ್ ಅವರನ್ನು ಸನ್ಮಾನಿಸಲಾಯಿತು. ಆ ಚಿತ್ರದ ನಿರ್ದೇಶಕ ಜಡೇಶ್ ಹಂಪಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
ರಸ್ತೆಯಲ್ಲಿ ಹುಟ್ಟಿದ ಹಾಡು ಇದು; ‘ಲೈಫ್ ಟುಡೇ’ ಚಿತ್ರದ ‘ನೀನೇ ನೀನೇ …’ ಬಿಡುಗಡೆ


