‘ಲವ್ ಮಾಕ್ಟೇಲ್ 3’ ಚಿತ್ರದ ದ್ವಿತೀಯಾರ್ಧವನ್ನು ತಮ್ಮ ಕಥೆಯಿಂದ ನಟ-ನಿರ್ದೇಶಕ ‘ಡಾರ್ಲಿಂಗ್’ ಕೃಷ್ಣ ಕದ್ದಿದ್ದಾರೆ ಎಂದು ನಿರ್ದೇಶಕ ರಾಘವೇಂದ್ರ ನಾಯ್ಕ್ ಆರೋಪಿಸಿದ್ದರು. ಕೆಲವು ವರ್ಷಗಳ ಹಿಂದೆ ತಾವು ಕೃಷ್ಣಗೆ ಒಂದು ಕಥೆ ಹೇಳಿದ್ದು, ಅದನ್ನು ಅನುಮತಿ ಇಲ್ಲದೆ ‘ಲವ್ ಮಾಕ್ಟೇಲ್ 3’ ಚಿತ್ರದ ದ್ವಿತೀಯಾರ್ಧದಲ್ಲಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣ, ಈ ಆರೋಪ ದೊಡ್ಡ ಜೋಕ್ ಎಂದು ಹೇಳಿದ್ದಾರೆ.
ಬುಧವಾರ ಈ ಕುರಿತು ಪತ್ರಿಕಾಗೋಷ್ಠಿ ಮಾಡಿ ಮಾತನಾಡಿರುವ ಅವರು, ‘ಈ ಆರೋಪ ಸಂಪೂರ್ಣ ಆಧಾರರಹಿತ ಮತ್ತು ಸೃಜನಾತ್ಮಕ ಪ್ರಯತ್ನಕ್ಕೆ ಮಾಡಿದ ಅವಮಾನ. ಈ ಆರೋಪ ದೊಡ್ಡ ಜೋಕ್. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದರೆ ಅದು ಮೂರು ವರ್ಷಗಳ ಬರವಣಿಗೆಯ ಫಲ. ಇದು ಇಷ್ಟು ಸುಲಭವಾಗಿದ್ದರೆ, ನಾವು ಇದಕ್ಕೆ ವರ್ಷಗಳ ಕಾಲ ಕಷ್ಟಪಡಬೇಕಿತ್ತೇ? ನಾನು ಯಾವಾಗಲೂ ನನ್ನದೇ ಬರವಣಿಗೆಯನ್ನು ಅವಲಂಬಿಸಿದ್ದೇನೆ ಮತ್ತು ಬೇರೆಯವರ ಕಥೆಯನ್ನು ಬಳಸುವ ಅಗತ್ಯ ನನಗೆ ಬಂದಿಲ್ಲ’ ಎಂದರು.
‘ಲವ್ ಮಾಕ್ಟೇಲ್ 3’ ಚಿತ್ರವು ನೈಜ ಘಟನೆಯೊಂದನ್ನು ಆಧರಿಸಿದ ಚಿತ್ರ ಎಂದ ಕೃಷ್ಣ, ‘2011ರಲ್ಲಿ ಲಕ್ನೋದಲ್ಲಿ ನಡೆದ ಕೇಸ್ ಒಂದನ್ನು ರಾಘವೇಂದ್ರ ನಾಯಕ್ ವಿವರಿಸಿದ್ದರು. ಗೂಗಲ್‍ನಲ್ಲಿ ಹುಡುಕಿದರೆ ಆ ಘಟನೆ ಬಗ್ಗೆ ವಿಷಯ ಗೊತ್ತಾಗುತ್ತದೆ. ಗೂಗಲ್‍ನಿಂದ ಕದ್ದ ಕಥೆಯನ್ನು ತನ್ನದು ಎಂದು ಆರೋಪ ಮಾಡುತ್ತಿದ್ದಾರೆ. ಅವರು ಬಂದು ಬರೆದಿರುವ ಸ್ಕ್ರಿಪ್ಟ್ ತೋರಿಸಲಿ. ಅದರಲ್ಲಿರುವ ಯಾವ ದೃಶ್ಯ ಅಥವಾ ಸಂಭಾಷಣೆಯನ್ನು ನಾವು ಕದ್ದಿದ್ದೇವೆ ಎಂದು ಸಾಬೀತು ಮಾಡಲಿ’ ಎಂದು ಸವಾಲು ಹಾಕಿದರು.

ರಾಘವೇಂದ್ರ ನಾಯ್ಕ್ ಅವರಿಗೆ ಬೆನ್ನಿಗೆ ನಿಂತಿರುವ ಗುರು ದೇಶಪಾಂಡೆ ತಮ್ಮ ಸ್ನೇಹಿತರಲ್ಲ ಎಂದಿರುವ ಕೃಷ್ಣ, ‘ನಾನು ಇಲ್ಲಿಯ ತನಕ ಹೇಗೆ ಬೆಳೆದೆ, ಅವರು ಹೇಗೆ ಬೆಳೆದರು ಅನ್ನೋದು ಚಿತ್ರರಂಗದಲ್ಲಿರುವವರಿಗೆ ಚೆನ್ನಾಗಿ ಗೊತ್ತಿದೆ. ಈ ಪ್ರಕರಣದ ಕುರಿತು ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದೇನೆ. ಕಾನೂನು ಹೋರಾಟ ಸಹ ನಡೆಸುತ್ತೇನೆ. ರಾಜಿಯಾಗುವ ಪ್ರಶ್ನೆಯೇ ಇಲ್ಲ. ರಾಜಿಯಾದರೆ ನನ್ನ ಮರ್ಯಾದೆ ವಾಪಸ್ಸು ಬರುತ್ತದಾ?’ ಎಂದು ಪ್ರಶ್ಮಮಿಸಿದರು.
ಈ ಪ್ರಕರಣದಿಂದ ಸಾಕಷ್ಟು ನೋವಾಗಿದ್ದು, ಎರಡು ದಿನಗಳಿಂದ ನಿದ್ದೆ ಮಾಡಿಲ್ಲ ಎಂದ ಕೃಷ್ಣ, ‘ನನ್ನ ತಂದೆ ಎಸಿಪಿಯಾಗಿದ್ದವರು. ನನ್ನನ್ನು ಅತ್ಯಂತ ಶಿಸ್ತುಬದ್ಧವಾಗಿ ಬೆಳೆಸಿದ್ದಾರೆ. ನೋ ಪಾರ್ಕಿಂಗ್ ಜೋನ್‍ನಲ್ಲಿ ಗಾಡಿ ನಿಲ್ಲಿಸೋಕ್ ನನಗೆ ಧೈರ್ಯ ಇಲ್ಲ. ಹಾಗಿರುವಾಗ ನಾನು ಕಥೆ ಕದಿಯುತ್ತೀನಾ? ನನ್ನ ಮೇಲೆ ಮಾಡಿರುವ ಆರೋಪಕ್ಕೆ ಬಹಳ ನೋವಾಗಿದೆ. ಎರಡು ದಿನಗಳಿಂದ ನಾನು ನಿದ್ದೆ ಮಾಡಿಲ್ಲ’ ಎಂದರು.
ನಾನು ಪ್ರತೀ ವರ್ಷ ಹಲವು ಕಥೆಗಳನ್ನು ಕೇಳುತ್ತಿರುತ್ತೇನೆ ಎಂದ ಕೃಷ್ಣ, ‘ನಾನು ಒಂದು ಕಥೆಯನ್ನು ಸ್ವೀಕರಿಸದಿದ್ದರೆ, ಕೆಲವರು ನಾವು ಅವರ ಕಲ್ಪನೆಯನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ಭಾವಿಸುತ್ತಾರೆ. ಒಮ್ಮೆ ತಿರಸ್ಕಾರವಾದರೆ, ಕೆಲವರು ತುಂಬಾ ನೆಗೆಟಿವ್ ಆಗಿ ಆಡುತ್ತಾರೆ. ಹಾಗಾಗಿ, ಹೆಚ್ಚು ಕಥೆಗಳನ್ನು ಕೇಳುವುದು ಕೂಡ ವೃತ್ತಿಪರವಾಗಿ ಅಪಾಯವಾಗಿ ಪರಿಣಮಿಸಿದೆ’ ಎಂದರು.
ಪ್ರತಿಯೊಬ್ಬ ಭಾರತೀಯನೂ ನೋಡಬೇಕಾದ ಚಿತ್ರ ‘ದುರಂಧರ್ 2’ ಎಂದ ರಜನಿಕಾಂತ್


