ಚಿತ್ರ ತಡವಾಗಿಲ್ಲ; ಅಂದುಕೊಂಡಂತೆ ‘ಕೆಡಿ – ದಿ ಡೆವಿಲ್‍’ ಮುಗಿಸಿದ್ದೇವೆ: ಪ್ರೇಮ್

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

‘ಕೆಡಿ – ದಿ ಡೆವಿಲ್‍’ ಚಿತ್ರದ ಮುಹೂರ್ತವಾಗಿದ್ದು ನಾಲ್ಕು ವರ್ಷಗಳ ಹಿಂದೆ. ಆ ನಂತರ ಚಿತ್ರ ನಿಧಾನಕ್ಕೆ ಮುಗಿದು, ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರವು ಏಪ್ರಿಲ್ 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಕೆಲವು ಬಾರಿ ಬಿಡುಗಡೆ ಮುಂದೂಡಲ್ಪಟ್ಟ ‘ಕೆಡಿ – ದಿ ಡೆವಿಲ್’, ಏ. 30ಕ್ಕೂ ಬರುವುದು ಸಂಶಯ ಎಂಬ ಮಾತಿತ್ತು. ಆದರೆ, ಪ್ರೇಮ್‍ ಅದೇ ದಿನ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಚಿತ್ರದ ‘ಸೆರಗು ಸರಸೆ …’ ಎಂಬ ಹಾಡು ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಪ್ರೇಮ್‍ ತಮ್ಮ ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು. ಚಿತ್ರ ತಡವಾಗಿದ್ದೇಕೆ? ಎಂಬ ಪ್ರಶ್ನೆಗೆ, ಚಿತ್ರ ತಡವಾಗಿಲ್ಲ, ಅಂದುಕೊಂಡಂತೆಯೇ ಮುಗಿದಿದೆ ಎಂದರು.

‘ಚಿತ್ರ ನಿಧಾನವೇನೂ ಆಗಿಲ್ಲ. ನಾವು ಚಿತ್ರದ ಪೂಜೆ ಮಾಡಿದಾಗ, ಧ್ರುವ ಸರ್ಜಾ ಅವರ ಇನ್ನೊಂದು ಸಿನಿಮಾ ಇತ್ತು. ಪೂಜೆ ಮಾಡಿ ಒಂದೂವರೆ ವರ್ಷಗಳ ನಂತರ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಯ್ತು. ತೂಕ ಏರಿಸೋದು, ಇಳಿಸಿಕೊಳ್ಳೋಕೆ ಸ್ವಲ್ಪ ಸಮಯ ಬೇಕಾಯ್ತು. ಮಿಕ್ಕಂತೆ ಆರೆಂಟು ತಿಂಗಳು ಏರುಪೇರಾಯ್ತು ಎಂಬುದನ್ನು ಬಿಟ್ಟರೆ, ಮಿಕ್ಕಂತೆ ನಾವು ಅಂದುಕೊಂಡಂತೆ ಸಿನಿಮಾ ಮುಗಿಸಿದ್ದೇವೆ. ಸಿನಿಮಾ ತಡವಾಗಿಲ್ಲ’ ಎಂದರು ಪ್ರೇಮ್‍.

ಈ ಚಿತ್ರವನ್ನು ಮೇಲೆತ್ತುವುದಕ್ಕ ಧ್ರುವ ಸರ್ಜಾ ಸಾಕು ಎನ್ನುವ ಪ್ರೇಮ್, ‘ಅವರಿಗೆ ಒಳ್ಳೆಯ ಸಿನಿಮಾ ಮಾಡಬೇಕಷ್ಟೇ. ಒಳ್ಳೆಯ ಸಿನಿಮಾ ಮಾಡಿದರೆ, ಅವನಷ್ಟು ಕಲೆಕ್ಷನ್‍ ತರುವ ಮಾಸ್‍ ಹೀರೋ ಸದ್ಯದ ಮಟ್ಟಿಗೆ ಯಾರೂ ಇಲ್ಲ. ಅವರ ಜೊತೆಗೆ ಇನ್ನಷ್ಟು ಸಿನಿಮಾ ಮಾಡುವ ಆಸೆ ಇದೆ. ವರ್ಷಕ್ಕೊಂದಾದರೂ ಅವರ ಜೊತೆಗೆ ಸಿನಿಮಾ ಮಾಡಬೇಕು. ಈ ಚಿತ್ರವನ್ನು ಎರಡನೆಯ ಭಾಗಕ್ಕೆ ಕನೆಕ್ಟ್ ಮಾಡಿದ್ದೇವೆ. ಚಿತ್ರವನ್ನು ಮುಂದುವರೆಸಿ ಎಂದು ಕೆವಿಎನ್‍ ಸಹ ಹೇಳಿದ್ದಾರೆ’ ಎಂದರು.

ಇನ್ನು, ಬಿಡುಗಡೆಯಾಗಿರುವ ನಾಲ್ಕು ಹಾಡುಗಳಲ್ಲಿ ಪ್ರೇಮ್‍ ಹಾಡಿದ್ದಾರೆ. ಪ್ರೇಮ್ ಗಾಯಕರಾಗಿ ಬದಲಾಗುತ್ತಿದ್ದಾರಾ? ಎಂಬ ಪ್ರಶ್ನೆಗೆ, ‘ಈ ಚಿತ್ರದಲ್ಲಿ ನಾನು ಹಾಡಿರೋದು ಒಂದೇ ಹಾಡು. ಅದು ‘ಅಣ್ತಮ್ಮ …’ ಮಾತ್ರ. ಮಿಕ್ಕಂತೆ ಬೇರೆ ಹಾಡುಗಳಿಗೆ ಕೋರಸ್‍ ಆಗಿ ಹಾಡಿದ್ದೇನೆ. ‘ಕರಿಯ’ದಿಂದ ನನ್ನ ಬಹುತೇಕ ಚಿತ್ರಗಳಿಗೆ ಹಾಡಿದ್ದೇನೆ. ಕೋರಸ್‍ ಎಂದರೆ ನಾನು ಮೊದಲು ಹೋಗಿ ನಿಂತುಕೊಳ್ಳುತ್ತೇನೆ. ನನಗೆ ಕಲಿಯಬೇಕು ಎಂದು ಆಸೆ. ಅರ್ಜುನ ಕೀಬೋರ್ಡ್ ಮೇಲೆ ಕೈ ಆಡಿಸುತ್ತಿದ್ದರೆ, ‘ದೇವರು ಇವನಿಗೆ ಎಂಥಾ ಕಲೆ ಕೊಟ್ಟಿದ್ದಾನೆ ಅನಿಸುತ್ತದೆ. ನನಗೂ ಆಸೆ. ಆದರೆ, ನಮಗೆ ಅಭ್ಯಾಸವಿಲ್ಲ. ನಾವು ಪಡೆದುಕೊಂಡು ಬಂದಿಲ್ಲ. ನಾವು ಯಾವತ್ತೂ ಬೇಡುವವರು. ಅವರು ಕೊಟ್ಟಿದ್ದನ್ನು ಪಡೆದುಕೊಳ್ಳುತ್ತೇವೆ. ಅದನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ’ ಎಂದರು.

‘ಕೆಡಿ – ದಿ ಡೆವಿಲ್‍’ ಚಿತ್ರಕ್ಕೆ ಪ್ರೇಮ್‍ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್‍ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್‍, ರಮೇಶ್‍ ಅರವಿಂದ್‍, ಸಂಜಯ್‍ ದತ್‍, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್‍ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್‍ ಛಾಯಾಗ್ರಹಣ ಚಿತ್ರಕ್ಕಿದೆ.

ಚಂದನವನಕ್ಕೆ ‘ಸೆರಗು ಸರಸೆ …’ ಎನ್ನುತ್ತಾ ಬಂದ ನೋರಾ ಫತೇಹಿ

Latest Posts

Discover more from KannadaScreens

Subscribe now to keep reading and get access to the full archive.

Continue reading