ಅದಿತಿ ಬಾಲನ್ ಈಗ ಏಜೆಂಟ್‍ ಕಾವೇರಿ; ಆಪರೇಷನ್ ಥಿಯೇಟರ್‍ಗೆ ಎಂಟ್ರಿ

ಚಂದನವನ, ಸಿನಿ ಸುದ್ದಿ

‘ಸಪ್ತ ಸಾಗರದಾಚೆ ಎಲ್ಲೋ’ ಎಂಬ ದುರಂತ ಪ್ರೇಮಕಥೆಯ ನಂತರ ಹೇಮಂತ್‍ ರಾವ್‍ ಇದೀಗ ರೆಟ್ರೋ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ‘ಆಪರೇಷನ್‍ ಡೈಮಂಡ್‍ ರಾಕೆಟ್‍’ ತರಹದ ಬಾಂಡ್‍ ಚಿತ್ರಗಳನ್ನು ನೆನಪಿಸುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಎಂಬ ಚಿತ್ರವನ್ನು ಅವರು ನಿರ್ದೇಶಿಸುತ್ತಿದ್ದಾರೆ.

ಧನಂಜಯ್‍, ಶಿವರಾಜಕುಮಾರ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ನಡೆಯುತ್ತಲೇ ಇದೆ. ಇದೀಗ ಚಿತ್ರತಂಡಕ್ಕೆ ತಮಿಳಿನ ರಾಜ್ಯ ಪ್ರಶಸ್ತಿ ಪುರಸ್ಕೃತೆ, ಅದಿತಿ ಬಾಲನ್ ಎಂಟ್ರಿ ಕೊಟ್ಟಿದ್ದಾರೆ. ಅದಿತಿ ಈ ಚಿತ್ರದಲ್ಲಿ ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಅರುವಿ’ ಎಂಬ ತಮ್ಮ ಮೊದಲ ಚಿತ್ರದಲ್ಲಿ ಅಭಿನಯದಿಂದ ಗಮನಸೆಳೆದಿದ್ದ ಅದಿತಿ, ನಂತರದ ದಿನಗಳಲ್ಲಿ ‘ಕ್ಯಾಪ್ಟನ್ ಮಿಲ್ಲರ್’, ‘ಪಡವೆಟ್ಟು’ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಶಿವರಾಜಕುಮಾರ್ ಅವರು ಏಜೆಂಟ್ ಪ್ರಕಾಶ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಏಜೆಂಟ್‍ ಶಂಕರ್‍ ಎಂಬ ಪಾತ್ರದಲ್ಲಿ ಧನಂಜಯ್‌ ನಟಿಸುತ್ತಿದ್ದಾರೆ. ಇದೀಗ ನಟಿ ಅದಿತಿ ಬಾಲನ್ ಅವರನ್ನು ಏಜೆಂಟ್ ಕಾವೇರಿಯಾಗಿ ಪರಿಚಯಿಸಿರುವುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಈ ಚಿತ್ರಕ್ಕೆ ಐದು ಹಂತಗಳ ಚಿತ್ರೀಕರಣ ನಡೆದಿದ್ದು, ಪೋಸ್ಟ್ ಪ್ರೊಡಕ್ಷನ್‍ ಕೆಲಸಗಳು ಸಹ ನಡೆಯುತ್ತಿವೆ. ಇದೇ ವರ್ಷ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

‘666 ಆಪರೇಷನ್ ಡ್ರೀಮ್ ಥಿಯೇಟರ್’ ಒಂದು ಆಕ್ಷನ್, ಡ್ರಾಮಾ ಚಿತ್ರವಾಗಿದ್ದು, ಈ ಚಿತ್ರವನ್ನು ಡಾ ವೈಶಾಖ್ ಜೆ ಗೌಡ, ವೈಶಾಖ್ ಜೆ ಫಿಲಂಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುತ್ತಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.

‘ಟಾಕ್ಸಿಕ್’ ಬಿಡುಗಡೆ ಮುಂದೂಡಿಕೆಯ ಹಿಂದಿರುವ ನಿಜವಾದ ಕಾರಣ ಏನು ಗೊತ್ತಾ?

Latest Posts

Discover more from KannadaScreens

Subscribe now to keep reading and get access to the full archive.

Continue reading