ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರವು ಮುಂದಕ್ಕೆ ಹೋಗಿರುವ ವಿಷಯ ಗೊತ್ತೇ ಇದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರವು ಮಾರ್ಚ್ 19ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆಗೆ ಕೇವಲ ಎರಡು ವಾರಗಳಿರುವಾಗ, ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿರುವ ಸುದ್ದಿ ಚಿತ್ರತಂಡದಿಂದ ಬಂದು. ಮಾರ್ಚ್ 19ರ ಬದಲು, ಜೂನ್ 04ರಂದು ಬಿಡುಗಡೆಯಾಗಲಿದೆ.
ಎಲ್ಲಾ ಸರಿ, ಇಷ್ಟಕ್ಕೂ ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಮುಂದಕ್ಕೆ ಹಾಕಿದ್ದು ಯಾಕೆ? ಚಿತ್ರತಂಡದವರೇ ಹೇಳಿಕೊಂಡಂತೆ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅನಿಶ್ಚಿತತೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದ ಚಿತ್ರತಂಡದವರು. ‘ಪ್ರಸ್ತುತ ಜಗತ್ತಿನಲ್ಲಿ (ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ) ಉಂಟಾಗಿರುವ ಅನಿಶ್ಚಿತತೆಯು, ಚಿತ್ರವನ್ನು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸುವ ನಮ್ಮ ಗುರಿಯ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ, ನಮ್ಮ ಪಾಲುದಾರರ ಮತ್ತು ಪ್ರೇಕ್ಷಕರ ಹಿತದೃಷ್ಟಿಯಿಂದ, ಚಿತ್ರದ ಬಿಡುಗಡೆಯ ದಿನಾಂಕವನ್ನು ಮರುನಿಗದಿಪಡಿಸುವ ಕಠಿಣ ಹಾಗೂ ಎಚ್ಚರಿಕೆಯ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ’ ಎಂದು ಹೇಳಿಕೊಂಡಿದ್ದರು.
ಚಿತ್ರವನ್ನು ಮುಂದೂಡಲಾಗುತ್ತಿರುವುದಕ್ಕೆ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅನನಿಶ್ಚಿತತೆಯು ಒಂದು ಕಾರಣವಷ್ಟೇ. ಇದಲ್ಲದೆ ಇನ್ನೂ ಎರಡು ಪ್ರಮುಖ ಕಾರಣಗಳಿಂದ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾತು ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿದೆ. ಪ್ರಮುಖವಾಗಿ ಚಿತ್ರದ ಕೆಲಸಗಳು ಇನ್ನೂ ಮುಗಿದಲ್ಲವಂತೆ. ಚಿತ್ರದ ಬಿಡುಗಡೆಗೆ ಕೆಲವೇ ದಿನಗಳಿದ್ದರೂ, ಚಿತ್ರದ ಕೆಲಸಗಳು ಪೂರ್ತಿಯಾಗಿಲ್ಲ. ಸಂಪೂರ್ಣವಾಗುವುದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗಿರುವುದರಿಂದ ಚಿತ್ರವನ್ನು ಮುಂದೂಡಲಾಗಿದೆ.

ಚಿತ್ರ ಪೋಸ್ಟ್ಪೋನ್ ಆಗುವುದಕ್ಕೆ ಇನ್ನೊಂದು ಕಾರಣ, ‘ದುರಂಧರ್ 2’. ಕಳೆದ ವರ್ಷದ ಕೊನೆಯಲ್ಲಿ ‘ದುರಂಧರ್’ ಬಿಡುಗಡೆಯಾದಾಗ ಮತ್ತು ಎರಡನೇ ಬಾಗವು ಮಾರ್ಚ್ 19ರಂದು ‘ಟಾಕ್ಸಿಕ್’ ಎದುರು ಬಿಡುಗಡೆಯಾಗುತ್ತದೆ ಎಂದು ಘೋಷಣೆಯಾದಾಗ, ಆ ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆಗಳಿರಲಿಲ್ಲ. ಆದರೆ, ಯಾವಾಗ ‘ದುರಂಧರ್’ ಚಿತ್ರ ದೊಡ್ಡ ಹಿಟ್ ಆಯಿತೋ, ಆಗಿನಿಂದ ಎರಡನೇ ಭಾಗದ ಮೇಲೆ ಪ್ರೇಕ್ಷಕರ ನಿರೀಕ್ಷೆ ಹಾಗೂ ಕುತೂಹಲ ಹೆಚ್ಚಾಗಿದೆ. ಹಾಗೆ ನೋಡಿದರೆ, ದೇಶಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ ಚಿತ್ರದ ಬಗ್ಗೆ ಸೆಂಟಿಮೆಂಟ್ ಹೆಚ್ಚಿದೆ. ಈ ನಿಟ್ಟಿನಲ್ಲಿ ‘ಟಾಕ್ಸಿಕ್’ಗೂ ಹೆಚ್ಚೇ ಕುತೂಹಲ ಮತ್ತು ನಿರೀಕ್ಷೆ ‘ದುರಂಧರ್ 2’ ಬಗ್ಗೆ ಇದೆ. ಇಂಥ ಸಂದರ್ಭದಲ್ಲಿ ‘ದುರಂಧರ್ 2’ ಎದುರು ಬಂದು ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಚಿತ್ರವನ್ನು ಮುಂದೂಡಲಾಗಿದೆ.
‘ಟಾಕ್ಸಿಕ್’ ಚಿತ್ರ ಮುಂದೂಡಲ್ಪಡುತ್ತಿರುವುದು ಇದು ಮೊದಲೇನಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರ ವಿಳಂಬವಾದ್ದರಿಂದ, ಈ ಯುಗಾದಿಗೆ ಬಿಡುಗಡೆ ಎಂದು ಹೇಳಲಾಯ್ತು. ಈಗ ಅಂತಿಮವಾಗಿ ಚಿತ್ರವು ಜೂನ್ 04ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.
‘ಟಾಕ್ಸಿಕ್’ ಚಿತ್ರವನ್ನು KVN ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‍ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳಡಿ KVN ಮತ್ತು RSY ನಿರ್ಮಿಸುತ್ತಿದ್ದು, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹಾಲಿವುಡ್ ನಟ ಕೈಲ್ ಪಾಲ್, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ, ಶ್ರುತಿ ಹಾಸನ್, ಅನಿಲ್ ಕಪೂರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.


