ಅದೊಂದು ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ‘ಡಾರ್ಲಿಂಗ್’ ಕೃಷ್ಣ ಅಭಿನಯದ ನಿರ್ದೇಶನದ ‘ಲವ್ ಮಾಕ್ಟೇಲ್’ ಚಿತ್ರದ ಟ್ರೇಲರನ್ನು ಸುದೀಪ್ ಬಿಡುಗಡೆ ಮಾಡಿದ್ದರು. ಎರಡನೇ ಭಾಗದ ಟ್ರೇಲರನ್ನು ರವಿಚಂದ್ರನ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಇದೀಗ ಮೂರನೇ ಭಾಗ ಇದೇ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್ ಯಾರು ಬಿಡುಗಡೆ ಮಾಡಬಹುದು ಎಂಬ ಕುತೂಹಲ ಇದ್ದೇ ಇತ್ತು. ಅದಕ್ಕೀಗ ತೆರೆ ಬಿದ್ದಿದೆ.
‘ಲವ್ ಮಾಕ್ಟೇಲ್ 3’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಕೃಷ್ಣ ಮತ್ತು ಮಿಲನಾ ದಂಪತಿಯ ಮುದ್ದಿನ ಮಗಳು ಪರಿ, ಟ್ರೇಲರ್ ಬಿಡುಗಡೆ ಮಾಡಿದ್ದಾಳೆ. ಈ ಸಂದರ್ಭದಲ್ಲಿ ನಿರ್ದೇಶಕ ಹಾಗೂ ಈ ಚಿತ್ರಕ್ಕೊಂದು ಹಾಡನ್ನು ಬರೆದಿರುವ ಶಶಾಂಕ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

‘ಲವ್ ಮಾಕ್ಟೇಲ್ 3’ ಚಿತ್ರ ರೂಪುಗೊಂಡಿದ್ದರ ಬಗ್ಗೆ ಮಾತನಾಡಿದ ಕೃಷ್ಣ, ‘ಯಾವುದೋ ಕ್ಷಣದಲ್ಲಿ ಈ ಸಿನಿಮಾದ ಒಂದೆಳೆ ಕಥೆ ಹೊಳೆಯಿತು. ಅದರ ಗುಂಗುಹತ್ತಿಸಿಕೊಂಡ ನಂತರ ಮನೆಯಲ್ಲಿ ಕಥೆ ಬರೆಯಲು ಸಾಧ್ಯವಿಲ್ಲವೆನ್ನಿಸಿ ಮೂರು ದಿನಗಳ ಕಾಲ ಗೋವಾಕ್ಕೆ ಹೋಗಿದ್ದೆ. ಅಲ್ಲಿಯೇ ಕಥೆ-ಚಿತ್ರಕಥೆಗೊಂದು ರೂಪುರೇಷೆ ಕೊಟ್ಟು ಮತ್ತೆ ಮರಳಿದ್ದೆ. ಆ ನಂತರ ಚಿತ್ರದ ಕೆಲಸಗಳು ಶುರುವಾಗಿ, ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲೆರಡು ಚಿತ್ರಗಳು ಗೆದ್ದಂತೆ ಈ ಚಿತ್ರವೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ನಂಬಿಕೆಯನ್ನು ಅವರು ಹೊರಹಾಕಿದರು.
ಮಿಲನಾ ನಾಗರಾಜ್ ಮಾತನಾಡಿ, ‘ಎಲ್ಲರೂ ದೊಡ್ಡ ಚಿತ್ರದ ಎದುರು ಇಷ್ಟೊಂದು ಆತ್ಮವಿಶ್ವಾಸದಿಂದ ಬಿಡುಗಡೆ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಅಚ್ಚರಿಯಿಂದ ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಕಾರಣವಾಗಿರೋದು ಸಿನಿಮಾ ಮೂಡಿ ಬಂದಿರುವ ರೀತಿ. ಈ ಚಿತ್ರ ಅಷ್ಟೊಂದು ಚೆನ್ನಾಗಿ ಮೂಡಿ ಬಂದಿದೆ ಎಂಬ ವಿಶ್ವಾಸವಿದೆ. ಅದನ್ನು ಎಲ್ಲರೂ ನೋಡಿ, ಸರಣಿಯ ಈ ಹಿಂದಿನ ಎರಡು ಚಿತ್ರಗಳಿಗೆ ಕೊಟ್ಟಷ್ಟೇ ಪ್ರೀತಿ, ಪ್ರೋತ್ಸಾಹ ಕೊಡುತ್ತಾರೆಂಬ ನಂಬಿಕೆ ಇದೆ’ ಎಂದರು.
ಈ ಚಿತ್ರದಲ್ಲಿ ಕೃಷ್ಣ ಜೊತೆಗೆ ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ರೆಚೆಲ್ ಡೇವೀಡ್, ಶ್ವೇತಾ ಪ್ರಸಾದ್ ಮುಂತಾದವರು ನಟಿಸಿದ್ದಾರೆ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ ಈ ಚಿತ್ರಕ್ಕಿದೆ.
‘ಕಡಲ್ ಕೋಟೆ’ಗೆ ವಸಿಷ್ಠ ಸಿಂಹ ಲಗ್ಗೆ; ಇದು ಶೋಷಣೆ ಮತ್ತು ಸಂಘರ್ಷದ ಕಥೆ


