ಚಿತ್ರ: ಸೂಪರ್ ಹಿಟ್
ನಿರ್ಮಾಣ: ಉಮೇಶ್
ನಿರ್ದೇಶನ: ವಿಜಯಾನಂದ್
ತಾರಾಗಣ: ಗಿಲ್ಲಿ ನಟ, ಗೌರವ್ ಶೆಟ್ಟಿ, ಶ್ವೇತಾ, ಸಾಧು ಕೋಕಿಲ, ಪ್ರಮೋದ್ ಶೆಟ್ಟಿ, ಡ್ರಾಗನ್ ಮಂಜು, ಗೋವಿಂದೇಗೌಡ, ಗಿರಿ, ಟೆನ್ನಿಸ್ ಕೃಷ್ಣ ಮುಂತಾದವರು
ಅವನು ಕಾರು ಶುರು ಮಾಡುತ್ತಿದ್ದಂತೆ, ಅವಳು ಬಂದು ಸೇರಿಕೊಳ್ಳುತ್ತಾಳೆ. ಸ್ವಲ್ಪ ಹೊತ್ತಿಗೆ ಮೂರನೆಯವನು ಬಂದು ಕುಳಿತುಕೊಳ್ಳುತ್ತಾನೆ. ಮೂವರಿಗೂ ಪರಸ್ಪರ ಪರಿಚಯವಿಲ್ಲ. ಆದರೂ, ಮೂವರೂ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಡುತ್ತಾರೆ. ಮಧ್ಯೆ ಒಂದಿಷ್ಟು ಘಟನೆಗಳು. ಒಂದು ಕಳೆದು ಹೋದ ಪೆನ್ ಡ್ರೈವ್, ಒಂದು ಕಿಡ್ನಾಪ್, ಒಂದು ಮದುವೆ ಪ್ರಕರಣ, ಕಾರ್ ಕಳ್ಳತನ, ಕೋರ್ಟ್ ಕೇಸ್ … ಇವೆಲ್ಲಾ ಸೇರಿ ಆ ಪ್ರಯಾಣ ಯಾವ ತಿರುವು ಪಡೆಯುತ್ತದೆ ಎಂದು ಹಾಸ್ಯಮಯವಾಗಿ ಹೇಳುವ ಪ್ರಯತ್ನವನ್ನು ‘ಸೂಪರ್ ಹಿಟ್’ ಮೂಲಕ ಮಾಡಿದ್ದಾರೆ ನಿರ್ದೇಶಕ ವಿಜಯಾನಂದ್.
ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ, ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಗಿಲ್ಲಿ ನಟ ಮತ್ತು ಯೂಟ್ಯೂಬ್‍ನಲ್ಲಿ ಜನಪ್ರಿಯರಾಗಿರುವ ಗೌರವ್ ಶೆಟ್ಟಿ. ಇಬ್ಬರೂ ಇದಕ್ಕೂ ಮೊದಲು ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಇದೇ ಮೊದಲ ಬಾರಿಗೆ ಹೀರೋಗಳಾಗುತ್ತಿದ್ದಾರೆ. ಕಾಮಿಡಿಯಲ್ಲಿ ಗುರುತಿಸಿಕೊಂಡಿರುವ ಇಬ್ಬರು ಜನಪ್ರಿಯ ನಟರನ್ನು ಸೇರಿಸ ಕಾಮಿಡಿ ಚಿತ್ರ ಮಾಡುವ ಪ್ರಯತ್ನವೇ ‘ಸೂಪರ್ ಹಿಟ್’.
ಇಲ್ಲಿ ಗಿಲ್ಲಿ ಮತ್ತು ಗೌರವ್ ಅಷ್ಟೇ ಅಲ್ಲ, ಸಾಧು ಕೋಕಿಲ, ಟೆನ್ನಿಸ್ ಕೃಷ್ಣ, ಗಿರಿ, ಗೋವಿಂದೇಗೌಡ ಸೇರಿದಂತೆ ಹಲವು ನಗೆನಟರಿದ್ದಾರೆ. ಜೊತೆಗೆ ಡ್ರಾಗನ್ ಮಂಜು, ವಿ. ನಾಗೇಂದ್ರ ಪ್ರಸಾದ್ ಮತ್ತು ಪ್ರಮೋದ್ ಶೆಟ್ಟಿ ಅವರಿಂದಲೂ ನಗಿಸುವ ಪ್ರಯತ್ನ ಮಾಡಲಾಗಿದೆ. ಇಲ್ಲಿ ಎಲ್ಲವೂ ಹೇರಳವಾಗಿಯೇ ಇದೆ. ಕೊರತೆ ಇರುವುದು ನಗು ಮಾತ್ರ. ಕೆಲವು ಸಂಭಾಷಣೆಗಳನ್ನು ಹೊರತುಪಡಿಸಿದರೆ, ನಗುವ ಅವಕಾಶಗಳು, ಸನ್ನಿವೇಶಗಳು ಕಡಿಮೆಯೇ. ಚಿತ್ರದಲ್ಲಿ ಸಂಭಾಷಣೆಗಳು ನೂರಾರು ಪುಟಗಳಷ್ಟು ಇವೆ. ಅವುಗಳಲ್ಲಿ ಪಂಚಿಂಗ್ ಎನ್ನುವ, ನಗು ತರಿಸುವ ಸಂಭಾಷಣೆಗಳು ಕೆಲವು ಮಾತ್ರ.
ಹೇಳಿಕೇಳಿ ಇದೊಂದು ಪ್ರಯಾಣದ ಚಿತ್ರ. ಒಂದು ಪ್ರಯಾಣದಲ್ಲಿರಬೇಕಾದ ಲವಲವಿಕೆ ಮತ್ತು ವೇಗ ಇಲ್ಲಿ ಮಿಸ್ ಆಗಿದೆ. ದಾರಿಯಲ್ಲಿ ಹಲವು ರೋಡ್‍ಹಂಪ್‍ಗಳು ಸಿಕ್ಕಂತೆ, ಚಿತ್ರದಲ್ಲೂ ಹಲವು ರೋಡ್‍ಹಂಪ್‍ಗಳಿವೆ. ಇಲ್ಲಿ ಸಂಕಲನಕ್ಕಿಂತ ಹೆಚ್ಚಾಗಿ ಬರವಣಿಗೆಯಲ್ಲೇ ಇನ್ನಷ್ಟು ಗಟ್ಟಿತನ ಬೇಕಿತ್ತು. ಆಗ ‘ಸೂಪರ್ ಹಿಟ್’ ಆಗುವ ಎಲ್ಲಾ ಲಕ್ಷಣಗಳು ಈ ಚಿತ್ರದಲ್ಲಿರುತ್ತಿತ್ತು.
ಗಿಲ್ಲಿ ನಟ ಮತ್ತು ಗೌರವ್ ಶೆಟ್ಟಿ ಪ್ರಾಮಾಣಿಕವಾಗಿ ತಮ್ಮ ಕೆಲಸ ಮಾಡಿದ್ದಾರಾದರೂ, ಅವರ ಪ್ರತಿಭೆ ಇಲ್ಲಿ ಪೂರ್ಣಪ್ರಮಾಣವಾಗಿ ಹೊರಬಂದಿಲ್ಲ. ಇಬ್ಬರೂ ಚಿತ್ರದುದ್ದಕ್ಕೂ ಇದ್ದಾರೆ ಮತ್ತು ತಮ್ಮ ಶಕ್ತ್ಯಾನುಸಾರ ಮಜ ಕೊಡುವ ಪ್ರಯತ್ನವನ್ನು ಮಾಡುತ್ತಾರೆ. ಶ್ವೇತಾ ಮುದ್ದಾಗಿ ಕಾಣುತ್ತಾರೆ. ಮಿಕ್ಕಂತೆ ನಗೆನಟರ ದೊಡ್ಡ ದಂಡಿದೆ. ಎಲ್ಲರೂ ತಮ್ಮ ಕೆಲಸವನ್ನು ಮಾಡಿದ್ದಾರಾದರೂ, ಅವರ ಕೆಲಸ ಫಲ ಕೊಡುತ್ತದೆ ಎಂದು ಹೇಳುವುದು ಕಷ್ಟ. ಬರೀ ಹೊಡೆದಾಟಕ್ಕೆ ಸೀಮಿತವಾಗಿದ್ದ ಡ್ರಾಗನ್ ಮಂಜು ಇಲ್ಲಿ ಬೇರೆ ತರಹದ ಪಾತ್ರ ಸಿಕ್ಕಿದೆ. ಚಿತ್ರವನ್ನು ನಾಗೇಂದ್ರ ಪ್ರಸಾದ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಹಾಗೂ ನಾಗಾರ್ಜುನ್ ಅವರ ಛಾಯಾಗ್ರಹಣ ಶ್ರೀಮಂತವಾಗಿಸಿದೆ.


