‘ದೇವಸಸ್ಯ’ ಚಿತ್ರೀಕರಣ ಮುಕ್ತಾಯ; ಚಿತ್ರದಲ್ಲಿ ಸಿದ್ದಿ ಸಂಸ್ಕೃತಿಯ ಅನಾವರಣ

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಶಿರಸಿ ತಾಲ್ಲೂಕು ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ  ನೆಲೆಸಿರುವ ಸಿದ್ದಿ ಜನಾಂಗದ  ಸಂಸ್ಕೃತಿ, ಆಚಾರ, ವಿಚಾರಗಳ ಕುರಿತು‌ ನಿರ್ದೇಶಕ ಕಾರ್ತಿಕ್‍ ಭಟ್ ಕಥಾಹಂದರ ಹೆಣೆದಿರುವ ಚಿತ್ರ ‘ದೇವಸಸ್ಯ’. ಅಪರೂಪದ ಗಿಡವೊಂದರ ಸುತ್ತ ಈ ಚಿತ್ರಕಥೆ ಸಾಗಲಿದೆ. ಕನ್ನಡ, ತೆಲುಗು, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ.

ಅನಂತ ಫಿಲಂಸ್ ಅಡಿ ಅನಂತಮೂರ್ತಿ ಎಂ ಹೆಗಡೆ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಾರ್ತಿಕ್ ಭಟ್  ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಸಿನಿಮಾದ ಕೊನೆಯ ದಿನದ ಚಿತ್ರೀಕರಣ ಮಾಗಡಿ ರಸ್ತೆಯಲ್ಲಿರುವ ಪುಟ್ಟಣ್ಣ ಕಣಗಾಲ್ ಸ್ಟುಡಿಯೋದಲ್ಲಿ ನಡೆಯಿತು.

1995ರ ಕಾಲಘಟ್ಟದಲ್ಲಿ ನಡೆಯುವ ಮಣ್ಣಿನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಟ್ರಾಕ್ಟರ್ ಓಡಿಸುತ್ತಿದ್ದ ಸಿದ್ಧಿ ಸಮುದಾಯದ ಯುವಕ ಸೆಲ್ವಿನ್ ದೇಸಾಯಿ ಈ ಚಿತ್ರದ ಪ್ರಮುಖ ಪಾತ್ರಧಾರಿ. ನಿರ್ದೇಶಕರು ಈತನಿಗೆ ಎರಡು ವರ್ಷಗಳ‌ ಕಾಲ ತರಬೇತಿ ನೀಡಿ ಬಣ್ಣ ಹಚ್ಚಿಸಿದ್ದಾರೆ.  ರಂಗಪ್ರತಿಭೆ ಆಹಾನ್‌ಗೌಡ ಮತ್ತು ಬಿಂಬಿಕಾ ಜೆ. ರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಲ್ಲದೆ, 150ಕ್ಕೂ ಹೆಚ್ಚು ಸಿದ್ಧಿ ಕಲಾವಿದರು ನಟಿಸಿರುವುದು ಈ ಚಿತ್ರದ ವಿಶೇಷ. ಈ ಚಿತ್ರಕ್ಕಾಗಿ 1995ರ ಕಾಲಘಟ್ಟದ ಹಳ್ಳಿಯೊಂದರ ಸೆಟ್ ಹಾಕಿ ಅಲ್ಲಿ, 93 ದಿನಗಳ ಕಾಲ ಚಿತ್ರೀಕರಿಸಲಾಗಿದೆ.

‘ದೇವಸಸ್ಯ’ ಚಿತ್ರದ ಕುರಿತು ಮಾತನಾಡುವ ಕಾರ್ತಿಕ್‍ ಭಟ್‍, ‘ಶಿರಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ. ಇದು ಕಥೆಯಲ್ಲ, ಹೊಸ ಜಗತ್ತು.ಉತ್ತರ ಕನ್ನಡದಲ್ಲಿ ಮಲೆನಾಡು, ಬಯಲುಸೀಮೆ ಎರಡೂ ಇದೆ. ಅದರಲ್ಲಿ ಸಾಕಷ್ಟು ಕಥೆಗಳಿದ್ದು, ಅದರಲ್ಲಿ ಇದೂ ಒಂದು. ‌ನಿರ್ಮಾಪಕರಿಗೆ ಕಥೆ ಹೇಳಿದಾಗ ಅವರು ತುಂಬಾ ಇಷ್ಟಪಟ್ಟು ಚಿತ್ರ ನಿರ್ಮಿಸಿದ್ದಾರೆ. ಎರಡು ಊರುಗಳ ಮಧ್ಯೆ ನಡೆಯುವ ಕಥೆಯಿದು’ ಎಂದರು.

ನಟ ಸೆಲ್ವಿನ್ ಮಾತನಾಡಿ, ‘ನಾನು ಊರಲ್ಲಿ ಟ್ರಾಕ್ಟರ್ ಓಡಿಸಿಕೊಂಡಿದ್ದೆ. ನನಗೆ ಕನ್ನಡ ಚೆನ್ನಾಗಿ ಬರುತ್ತದೆ. ನಿರ್ದೇಶಕರು ಬಂದು ಸಿನಿಮಾದಲ್ಲಿ ನಟಿಸುತ್ತೀಯಾ ಎಂದು ಕೇಳಿದರು. ನನ್ನಂಥವನಿಂದ ಸಾಧ್ಯವಾ ಅಂತ ನಕ್ಕಿದ್ದೆ. ನಂತರ ಅವರೇ ಕರೆದುಕೊಂಡು ಹೋಗಿ ಅಭಿನಯ ಕಲಿಸಿದರು’ ಎಂದು ವಿವರಿಸಿದರು.

ಈ ಚಿತ್ರಕ್ಕೆ ಯಶವಂತ್ ಅವರ ಛಾಯಾಗ್ರಹಣ, ಹರಿ ಅಜಯ್ ಅವರ ಸಂಗೀತ ಸಂಯೋಜನೆ, ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಸೆಲ್ವಿನ್ ದೇಸಾಯಿ, ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅಯ್ಯಪ್ಪ ಶರ್ಮ, ರವಿ ಮೂರೂರು, ಮಂಜುನಾಥ ಹೆಗಡೆ, ಗೀತಾ ಸಿದ್ಧಿ ಮುಂತಾದವರು ನಟಿಸಿದ್ದಾರೆ.

ಮುಗ್ಧ ಹುಡುಗ ಮತ್ತು ವಾಚಾಳಿ ಹುಡುಗಿಯ ಪ್ರೇಮಕಥೆ ‘ಕೃಷ್ಣವಂಶಿ’

Latest Posts

Discover more from KannadaScreens

Subscribe now to keep reading and get access to the full archive.

Continue reading