ಎರಡನೇ ಕೇಸಿನ ಜೊತೆ ಬಂದ ಸೀತಾರಾಮ್‍; ಫೆ.20ರಂದು ಚಿತ್ರ ಬಿಡುಗಡೆ

ಚಂದನವನ, ಸಿನಿ ಸುದ್ದಿ

ವಿಜಯ್‍ ರಾಘವೇಂದ್ರ ವೃತ್ತಿಜೀವನದ 50ನೇ ಚಿತ್ರ ‘ಸೀತಾರಾಮ್‍ ಬಿನೋಯ್‍ – ಕೇಸ್‍ ನಂಬರ್‍ 18’ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿತ್ತು. ಈಗ ವಿಜಯ್‍ ರಾಘವೇಂದ್ರ ಮತ್ತೊಮ್ಮೆ ಸೀತಾರಾಂ ಆಗಿ ಬರುತ್ತಿದ್ದಾರೆ. ಖಾಕಿ ತೊಟ್ಟು ತಮ್ಮ ಎರಡನೇ ಕೇಸಿನ ಜೊತೆಗೆ ಇದೇ ಫೆಬ್ರವರಿ 20ರಂದು ಹಾಜರಾಗಲಿದ್ದಾರೆ. ಈ ಚಿತ್ರದ ಹೆಸರು ‘ಸೆಕೆಂಡ್‍ ಕೇಸ್‍ ಆಫ್‍ ಸೀತಾರಾಮ್‍’.

ಈ ಹಿಂದೆ ‘ಸೀತಾರಾಮ್‍ ಬಿನಾಯ್‍ – ಕೇಸ್‍ ನಂಬರ್‍ 18’ ಮತ್ತು ‘ಕೇಸ್‍ ಆಫ್‍ ಕೊಂಡಾನ’ ಚಿತ್ರಗಳನ್ನು ಬರೆದು ನಿರ್ದೇಶಿಸಿದ್ದ ದೇವಿ ಪ್ರಸಾದ್‍ ಶೆಟ್ಟಿ, ಈ ಮುಂದುವರೆದ ಭಾಗಕ್ಕೂ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಪವನ್‍ ಒಡೆಯರ್‍ ಅರ್ಪಿಸುತ್ತಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ರಾಘವೇಂದ್ರ, ‘’ಸೀತಾರಾಮ್ ಬಿನೋಯ್’ ನನ್ನ ವೃತ್ತಿ ಜೀವನಕ್ಕೆ ವಿಶೇಷ ಬಲ ಕೊಟ್ಟ ಸಿನಿಮಾ. ಆ ಚಿತ್ರದ ಬರವಣಿಗೆ, ನಿರೂಪಣೆ ಎಲ್ಲವೂ ಶಕ್ತಿ ನೀಡಿತ್ತು. ನಂತರ ‘ಕೇಸ್ ಆಫ್ ಕೊಂಡಾಣ’ ಮಾಡಿದೆವು. ಬಳಿಕ ಈ ಇನ್ನೊಂದು ಸೀತಾರಾಮ್ ಮಾಡಿದ್ದೇವೆ. ದೇವಿಪ್ರಸಾದ್‍ ಒಳ್ಳೆಯ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಇಡೀ ಚಿತ್ರತಂಡ ಸೇರಿಕೊಂಡು ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರ ಮಾಡಿದೆವು. ನವನೀತ್ ಶ್ಯಾಮ್ ಸಂಗೀತ ಚಿತ್ರದ ಜೀವಾಳ. ಚಿತ್ರ ಮಾಡೋದು ಎಷ್ಟೋ ಕಷ್ಟವೋ ಬಿಡುಗಡೆ ಕೂಡ ಕಷ್ಟ. ನಮಗೆ ಈ ಚಿತ್ರಕ್ಕೆ ಪವನ್ ಒಡೆಯರ್ ಬೆಂಬಲವಾಗಿ ನಿಂತಿದ್ದಾರೆ’ ಎಂದರು.

ಪವನ್ ಒಡೆಯರ್ ಮಾತನಾಡಿ, ‘’ಸೀತಾರಾಮ್ ಬಿನೋಯ್’ ಟ್ರೆಂಡ್ ಸೆಟ್ ಮಾಡಿದ ಚಿತ್ರ. ಬರವಣಿಗೆ, ಟೇಕಿಂಗ್, ಪ್ರೆಸೆಂಟೆಷನ್ ಎಲ್ಲವೂ ಚೆನ್ನಾಗಿತ್ತು. ಅದರ ಮುಂದುವರೆದ ಭಾಗ ‘ಸೆಕೆಂಡ್ ಕೇಸ್ ಸೀತಾರಾಮ್’. ನಿರ್ದೇಶಕರು ಹಾಗೂ ನಿರ್ಮಾಪಕರು ಇಬ್ಬರೂ ಪ್ಯಾಶನ್‍ ಇರುವ ವ್ಯಕ್ತಿಗಳು. ಸಿನಿಮಾ ಮೇಲೆ ಇಡೀ ತಂಡಕ್ಕೆ ತುಡಿತ ಇದೆ. ರಫ್ ಕಟ್ ನೋಡಿದಾಗ ಬಹಳ ಇಷ್ಟವಾಯ್ತು. ಈ ಚಿತ್ರವನ್ನು ಅರ್ಪಿಸುತ್ತಿರುವುದಕ್ಕೆ ತುಂಬಾ ಖುಷಿ ಇದೆ. ಬೇರೆ ಭಾಷೆಗಳ ಸಸ್ಪೆನ್ಸ್ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ಈ ಚಿತ್ರ ಒಂದು ಹೆಜ್ಜೆ ಮುಂದೆ ಇದೆ. ಈ ಸಿನಿಮಾದ ಬಗ್ಗೆ ಹೇಳುವ ಬದಲು ಅನುಭವಿಸಬೇಕು’ ಎಂದರು.

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಫ್ಲೈಯಿಂಗ್ ಎಲಿಫಂಟ್ ಸ್ಟೋರಿ ಟೆಲ್ಲರ್ಸ್ ಸಂಸ್ಥೆ ಮೂಲಕ ದೇವಿ ಪ್ರಸಾದ್ ಶೆಟ್ಟಿ ಹಾಗೂ ಸಾತ್ವಿಕ್ ಹೆಬ್ಬಾರ್ ಈ ಚಿತ್ರ ನಿರ್ಮಿಸಿದ್ದಾರೆ. ಹೇಮಂತ್ ಆಚಾರ್ಯ ಛಾಯಾಗ್ರಹಣ ಹಾಗೂ ನವನೀತ್‍ ಶ್ಯಾಮ್ ಸಂಗೀತವಿರುವ ಚಿತ್ರ ಫೆ. 20ರಂದು ಬಿಡುಗಡೆಯಾಗುತ್ತಿದೆ.

‘ತಮ್ಮ ಸುಖಾಗಮನ ಬಯಸುವ’ ಗಣೇಶ್‍; ಹೊಸ ಚಿತ್ರ ಪ್ರಾರಂಭ

Discover more from KannadaScreens

Subscribe now to keep reading and get access to the full archive.

Continue reading