‘ತಮ್ಮ ಸುಖಾಗಮನ ಬಯಸುವ’ ಗಣೇಶ್‍; ಹೊಸ ಚಿತ್ರ ಪ್ರಾರಂಭ

ಚಂದನವನ, ಸಿನಿ ಸುದ್ದಿ

ಕಳೆದ ಒಂದೂವರೆ ವರ್ಷಗಳಲ್ಲಿ ಗಣೇಶ್‍ ಅಭಿನಯದ ನಾಲ್ಕು ಚಿತ್ರಗಳು ಸೆಟ್ಟೇರಿ, ವಿವಿಧ ಹಂತಗಳಲ್ಲಿವೆ. ಇದೀಗ ಗಣೇಶ್‍ ಅಭಿನಯದ ಐದನೇ ಚಿತ್ರ, ಭಾನುವಾರ ಮಹಾ ಶಿವರಾತ್ರಿ ಅಂಗವಾಗಿ ಸೆಟ್ಟೇರಿದೆ. ‘ಹೊಂದಿಸಿ ಬರೆಯಿರಿ’ ಮತ್ತು ‘ತೀರ್ಥರೂಪ ತಂದೆಯವರಿಗೆ’ ಚಿತ್ರಗಳನ್ನು ನಿರ್ದೇಶಿಸಿರುವ ರಾಮೇನಹಳ್ಳಿ ಜಗನ್ನಾಥ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ‘ತಮ್ಮ ಸುಖಾಗಮನ ಬಯಸುವ’ ಎಂಬ ಹೆಸರು ಇಡಲಾಗಿದೆ.

ವೈಷ್ಣವಿ ಫಿಲಂಸ್ ಬ್ಯಾನರ್‍ ಅಡಿ ವಿಜಯ್ ಲೋಹಿತ್ ನಿರ್ಮಿಸುತ್ತಿರುವ, ಸತೀಶ್ ಎಚ್. ಗೌಡ ಅವರ ಸಹ ನಿರ್ಮಾಣವಿರುವ ‘ತಮ್ಮ ಸುಖಾಗಮನ ಬಯಸುವ’ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಶಿಲ್ಪಾ ಗಣೇಶ್ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

ಇಂದು ನನ್ನ ‘ಗೋಲ್ಡನ್’ ದಿನ ಎಂದು ಮಾತು ಶುರು ಮಾಡಿದ ನಿರ್ದೇಶಕ ಜಗನ್ನಾಥ, ‘2006ರಲ್ಲಿ ‘ಮುಂಗಾರು ಮಳೆ’ ಬಿಡುಗಡೆ ಆದಾಗ, ನಾನು ಎಂಜಿನಿಯರಿಂಗ್ ವಿದ್ಯಾರ್ಥಿ. ಆ ಚಿತ್ರವನ್ನು ಎಷ್ಟು ಬಾರಿ ನೋಡಿದ್ದೇನೊ ಲೆಕ್ಕ ಇಲ್ಲ. ಇಂದು ಗಣೇಶ್‍ ಜೊತೆಗೆ ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯಾಗಿದೆ. ಇದು ಗಣೇಶ್ ಅವರ 20 ವರ್ಷಗಳ ಜರ್ನಿಯನ್ನು ಸಂಭ್ರಮಿಸುವ ಸಮಯ’ ಎಂದರು.

ಇದು ಗಣೇಶ್‍ ಅವರಿಗಾಗಿಯೃ ಬರೆದಿರುವ ಕಥೆ ಎನ್ನುವ ಜಗನ್ನಾಥ, ‘‘ತೀರ್ಥರೂಪ ತಂದೆಯವರಿಗೆ’ ಚಿತ್ರದ ಚಿತ್ರೀಕರಣ ಸಮಯದಲ್ಲಿ ಸ್ನೇಹಿತನ ಮೂಲಕ ಗಣೇಶ್ ಅವರನ್ನು ಸಂಪರ್ಕ ಮಾಡಿ ಈ ಚಿತ್ರದ ಕಥೆ ಹೇಳಿದ್ದೆ. ಇದು ಗಣೇಶ್ ಅವರಿಗಾಗಿಯೇ ಬರೆದಿರುವ ಕಥೆ. ಈ ಕಥೆಗೆ ಅವರೇ ಸೂಕ್ತ ನಾಯಕ. ಇದೊಂದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಹಾಗೂ ಎಮೋಷನಲ್ ಡ್ರಾಮ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಉಳಿದ ತಾರಾಬಳಗ ಹಾಗೂ ತಂತ್ರಜ್ಞರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ. ಇನ್ನೂ, ಶೀರ್ಷಿಕೆಯ ಬಗ್ಗೆ ಹೇಳುವುದಾದರೆ, ಶೀರ್ಷಿಕೆ ಬಳಕೆಗೆ ಹತ್ತಿರವಾಗಿರಬೇಕು. ಜನರಿಗೆ ಆಪ್ತವಾಗಬೇಕು. ನನ್ನ ಹಿಂದಿನ ಎರಡು ಚಿತ್ರಗಳ ಶೀರ್ಷಿಕೆಗಳು ಹಾಗೆಯೇ ಇತ್ತು. ಈ ಶೀರ್ಷಿಕೆ ಕೂಡ ಜನರಿಗೆ ಆಪ್ತವಾಗುತ್ತದೆ ಜೊತೆಗೆ ಕಥೆ ಹಾಗೂ ಪಾತ್ರಗಳಿಗೂ ಪೂರಕವಾಗಿದೆ’ ಎಂದರು.

’ಮುಂಗಾರು ಮಳೆ’ 2006ರಲ್ಲಿ ಬಿಡುಗಡೆಯಾಯಿತು. ಈಗ 2026. 20 ವರ್ಷಗಳು ಹೇಗೆ ಕಳೆಯಿತು ಗೊತ್ತಾಗಲಿಲ್ಲ. ದೇವರು ನನಗೆ ಒಳ್ಳೆಯ ನಿರ್ಮಾಪಕರು, ನಿರ್ದೇಶಕರು, ಬರಹಗಾರರು ಹಾಗೂ ನಿಮ್ಮೆಲ್ಲರ ಪ್ರೀತಿ ಕೊಟ್ಟಿದ್ದಾನೆ. ಇದು ಹೀಗೆ ಮುಂದುವರೆಯಲಿ’ ಎಂದ ಗಣೇಶ್‍, ‘ಸ್ನೇಹಿತರೊಬ್ಬರು ಫೋನ್ ಮಾಡಿ ನನ್ನ ಸ್ನೇಹಿತ ಒಂದು ಸ್ಕ್ರಿಪ್ಟ್ ಮಾಡಿಕೊಂಡಿದ್ದಾನೆ. ಅದು ನಿಮಗಾಗಿಯೇ ಮಾಡಿರುವ ಕಥೆಯಂತೆ ಎಂದರು. ನಾನು ಯಾರು ಅಂತ ಕೇಳಿದೆ. ‘ಹೊಂದಿಸಿ ಬರೆಯಿರಿ’ ಚಿತ್ರದ ನಿರ್ದೇಶಕರು ಎಂದರು. ನಾನು ಆ ಸಿನಿಮಾ ನೋಡಿದ್ದೆ. ಚಿತ್ರ ಚೆನ್ನಾಗಿತ್ತು. ಮನುಷ್ಯನ ಭಾವನೆಗಳನ್ನು ಆ ಚಿತ್ರದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ ಅಂದೆ. ಆನಂತರ ಜಗನ್ನಾಥ ಅವರು ಬಂದು ಕಥೆ ಹೇಳಿದರು’ ಎಂದರು.

ಕಥೆ ಕೇಳುವಾಗಲೇ ಗಣೇಶ್‍ಗೆ ಸಂತೋಷದಿಂದ ಅಳು ಬಂತಂತೆ. ‘ಅಂತಹ ಅಪರೂಪದ ಕಥೆ ಇದು. ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾದರೂ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನಿರ್ದೇಶಕರ ಹಿಂದಿನ ಎರಡು ಚಿತ್ರಗಳ ಶೀರ್ಷಿಕೆಗಳು ಬಹಳ ಚೆನ್ನಾಗಿತ್ತು. ನಮ್ಮ ಚಿತ್ರಕ್ಕೂ ಇಂತಹ ಶೇರ್ಷಿಕೆಯನ್ನೇ ಆಯ್ಕೆ ಮಾಡಿ ಎಂದು ಹೇಳಿದ್ದೆ. ‘ತಮ್ಮ ಸುಖಾಗಮನ ಬಯಸುವ’ ಎಂದು ಎಲ್ಲರಿಗೂ ಪ್ರಿಯವಾಗುವ ಶೀರ್ಷಿಕೆ ಇಟ್ಟಿದ್ದಾರೆ. ಚಿತ್ರವನ್ನು ಸಹ ಚೆನ್ನಾಗಿ ಮಾಡುತ್ತಾರೆ ಎಂಬ ಭರವಸೆ ಇದೆ. ಅರ್ಜುನ್ ಜನ್ಯ ಹಾಗೂ ನನ್ನ ಕಾಂಬಿನೇಶನ್‍ನಲ್ಲಿ ಸಾಕಷ್ಟು ಜನಪ್ರಿಯ ಹಾಡುಗಳು ಬಂದಿದೆ. ಈ ಚಿತ್ರದಲ್ಲೂ ಸುಮಧುರ ಹಾಡುಗಳಿರಲ್ಲಿದೆ’ ಎಂದು ನಾಯಕ ಗಣೇಶ್ ತಿಳಿಸಿದರು.

ಸಬ್ಸಿಡಿ ಬೇಕಾ? ಬೇಡವಾ? ಕನ್ನಡ ಚಿತ್ರರಂಗದಲ್ಲಿ ಬಿಸಿಬಿಸಿ ಚರ್ಚೆ …

Latest Posts

Discover more from KannadaScreens

Subscribe now to keep reading and get access to the full archive.

Continue reading