ಜನ ಯಾಕೆ ನನ್ನ ಚಿತ್ರಗಳನ್ನು ಚಿತ್ರಂದಿರಗಳಲ್ಲಿ ನೋಡುವುದಿಲ್ಲ?: ಪಿ. ಶೇಷಾದ್ರಿ ಪ್ರಶ್ನೆ

ಚಂದನವನ, ಸಿನಿ ಸುದ್ದಿ

ʼಇದು ನನ್ನ ೧೩ನೇ ಚಿತ್ರ. ಈ ಚಿತ್ರೋತ್ಸವದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ೫೦ಕ್ಕೂ ಹೆಚ್ಚು ಜನ ಆಸನಗಳಿಲ್ಲದೆ ಹೋಗಬೇಕಾಯಿತು. ನಮ್ಮ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ ಜನರೇ ಇರುವುದಿಲ್ಲ. ಚಿತ್ರೋತ್ಸವಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರ ನೋಡುವವರು, ಚಿತ್ರಮಂದಿರಗಳಿಗೇಕೆ ಬರುವುದಿಲ್ಲ ಎಂಬ ಪ್ರಶ್ನೆ ಕಾಡುತ್ತದೆʼ ಎಂದು ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಪ್ರಶ್ನಿಸಿದ್ದಾರೆ.

ಪಿ. ಶೇಷಾದ್ರಿ ನಿರ್ದೇಶನದ ೧೩ನೇ ಚಿತ್ರವಾದ ʼರೂಬಿಕ್‌ ಕ್ಯೂಬ್‌ʼ, ೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ʼರೂಬಿಕ್‌ ಕ್ಯೂಬ್‌ʼ ಕುರಿತು ಮಾತನಾಡಿದ ಅವರು, ʼ೧೯೭೦ರ ದಶಕದಲ್ಲಿ ಹಾಲೆಂಡ್‌ನಲ್ಲಿ ರೂಬಿಕ್‌ ಎನ್ನುವವರು ಕಂಡು ಹಿಡಿದರು. ಅದರಲ್ಲಿ ಹೇಗೆ ಆರು ಬಣ್ಣಗಳು ಮತ್ತು ಆರು ಮುಖಗಳು ಇರುತ್ತವೋ, ಈ ಚಿತ್ರದಲ್ಲಿ ವೈವಿಧ್ಯಮಯ ಬಣ್ಣಗಳಿರುವ ಆರು ಪಾತ್ರಗಳಿವೆ. ಆರಂಭದಿಂದಲೂ ನಮ್ಮ ದೇಶದಲ್ಲಿ ಕೌಟುಂಬಿಕ ಜೀವನಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಆದರೆ, ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ, ನಮ್ಮ ಬೇರುಗಳನ್ನು ಮರೆಯುತ್ತಿದ್ದೇವೆ. ಈ ಚುತ್ರದಲ್ಲಿ ಕೌಟುಂಬಿಕ ಮೌಲ್ಯಗಳು, ಗಂಡ-ಹೆಂಡತಿ ಸಂಬಂಧಗಳ ಕುರಿತು ಹೇಳುವ ಪ್ರಯತ್ನ ಮಾಡಿದ್ದೇನೆ. ಚಿತ್ರದಲ್ಲಿ ಎರಡು ತಲೆಮಾರನ್ನು ಪ್ರತಿನಿಧಿಸುವ ಎರಡು ದಂಪತಿಗಳಿವೆ. ಹಿರಿಯ ದಂಪತಿಯಾಗಿ ದತ್ತಣ್ಣ ಮತ್ತು ವಿದ್ಯಾ ಮೂರ್ತಿ ಇದ್ದರೆ, ಕಿರಿಯ ದಂಪತಿಯಾಗಿ ದೇವ್‌ ದೇವಯ್ಯ ಮತ್ತು ರಾಧ್ಯಾ ಇದ್ದಾರೆ. ಈ ಎರಡೂ ದಾಂಪತ್ಯದಲ್ಲಿನ ತಲ್ಲಣ, ಸಂಘರ್ಷ ಮತ್ತು ಸಂಕೀರರ್ಣತೆಯನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆʼ ಎಂದರು.

ಜಗತ್ತು ಎದುರಿಸುತ್ತಿರುವ ಆಧುನಿಕ ಸಮಸ್ಯೆ ಕುರಿತು ಚಿತ್ರ ಮಾಡಿರುವುದಾಗಿ ಹೇಳಿದ ಪಿ. ಶೇಷಾದ್ರಿ, ʼನಾನು ಇದುವರೆಗೂ ಹಲವು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ನನ್ನ ನಿದೇಶನದ ಚಿತ್ರಗಳ ಪೈಕಿ ನಾಲ್ಕು ಚಿತ್ರಗಳು, ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಆಧರಿಸಿದ್ದು. ಸುಮಾರು ೧೩ ವರ್ಷಗಳ ಹಿಂದೆ ಈ ವರದಿ ಓದಿದ್ದೆ. ಈ ಕಾಲಘಟ್ಟಕ್ಕೆ ಹೆಚ್ಚು ಪ್ರಸ್ತುತವೆನಿಸಿತು. ಇಂದಿನ ತಲೆಮಾರಿನವರ ಕಥೆಯೂ ಆಗಿರುವುದರಿಂದ, ಮಗ ಪ್ರಥಮ್‌ಗೆ ಈ ಚಿತ್ರಕಥೆ ಬರೆದು, ನಿರ್ದೇಶನ ಮಾಡುವುದಕ್ಕೆ ಹೇಳಿದ್ದೆ. ಅವನ ಚಿತ್ರಕಥೆಯನ್ನಾಧರಿಸಿ, ನಿರ್ದೇಶನ ಮಾಡಿದ್ದೇನೆʼ ಎಂದರು.

ಈ ಚಿತ್ರ ಯಾವ ತರಹದ ಪ್ರೇಕ್ಷಕರಿಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಶೇಷಾದ್ರಿ, ʼಯಾವುದೇ ಚಿತ್ರ ಮಾಡುವಾಗಲೂ ನಾವು ನಮ್ಮ ಪ್ರೇಕ್ಷಕರು ಯಾರು ಎಂಬುದನ್ನು ಮೊದಲು ಗುರುತು ಮಾಡಿಕೊಳ್ಳುತ್ತೇವೆ. ಕಮರ್ಷಿಯಲ್‌ ಚಿತ್ರಗಳನ್ನು ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಮಾಡಲಾಗುತ್ತದೆ. ಇದು ನನಗಾಗಿ ಮಾಡಿಕೊಂಡ ಚಿತ್ರ. ಈ ತರಹದ ಚಿತ್ರಗಳಿಗೆ ಪ್ರೇಕ್ಷಕರು ಇದ್ದಾರೆ. ಸಂಖ್ಯೆ ಕಡಿಮೆಯಾದರೂ, ಪ್ರೇಕ್ಷಕರು ಇದ್ದಾರೆ. ಅದನ್ನು ತಲುಪಿಸುವ ಪ್ರಯತ್ನವನ್ನು ನಾವು ಮಾಡಬೇಕು. ಇದು ಎಷ್ಟು ಯಶಸ್ಸಾಗುತ್ತದೆ? ಪ್ರೇಕ್ಷಕರಿಗೆ ಹೇಗೆ ತಲುಪಿಸಬೇಕು ಎಂಬ ಯೋಚನೆ ಬಿಡಬೇಕು. ಈಗ ಜನ ಚಿತ್ರಮಂದಿರಕ್ಕೆ ಬಂದು ಚಿತ್‌ರ ನೋಡಬೇಕು ಅಂತಿಲ್ಲ. ಯೂಟ್ಯೂಬ್‌ನಲ್ಲಿ ಬೇಕಾದರೂ ನೋಡಬಹುದು.

ʼರೂಬಿಕ್‌ ಕ್ಯೂಬ್‌ʼ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟಿ ವಿದ್ಯಾ ಮೂರ್ತಿ, ಹಿರಿಯ ಪತ್ರಕರ್ತರಾದ ಮುರಳೀಧರ್‌ ಖಜಾನೆ, ದೇವ್‌ ದೇವಯ್ಯ, ರಾಧ್ಯಾ, ಸಂಕಲನಕಾರ ಕೆಂಪರಾಜು ಮುಂತಾದವರು ಹಾಜರಿದ್ದು, ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕತೆ ಹೇಳುವ ರೀತಿಯನ್ನೇ ಬದಲಿಸುತ್ತಿರುವ ಮೈಕ್ರೋ ಸೀರೀಸ್‌ಗಳು

Latest Posts

Discover more from KannadaScreens

Subscribe now to keep reading and get access to the full archive.

Continue reading