ಚಿತ್ರ: ವಿಕಲ್ಪ
ನಿರ್ಮಾಣ: ಇಂದಿರ ಶಿವಸ್ವಾಮಿ
ನಿರ್ದೇಶನ: ಪೃಥ್ವಿರಾಜ್ ಪಾಟೀಲ್
ತಾರಾಗಣ: ಪೃಥ್ವಿರಾಜ್ ಪಾಟೀಲ್, ನಾಗಶ್ರೀ ಹೆಬ್ಬಾರ್, ಹರಿಣಿ ಶ್ರೀಕಾಂತ್, ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ ಮುಂತಾದವರು
ಆತನಿಗೆ ವಿಚಿತ್ರ ಭಯ. ಯಾರೋ ತನ್ನನ್ನು ಹಿಂಬಾಲಿಸುತ್ತಿರುವ, ಯಾರೋ ತನ್ನನ್ನೇ ನೋಡುತ್ತಿರುವ ಸಂಶಯ. ಇದರಿಂದ ನೆಮ್ಮದಿ ಇಲ್ಲ. ಸರಿಯಾದ ನಿದ್ದೆ ಇಲ್ಲ. ಇಷ್ಟಕ್ಕೂ ಆತನನ್ನು ಹಿಂಬಾಲಿಸುತ್ತಿರುವುದು, ಕಾಡುತ್ತಿರುವುದು ಯಾರು? ನಿಜಕ್ಕೂ ಯಾರಾದರೂ ಕಾಡುತ್ತಿದ್ದಾರಾ? ಅಥವಾ ಅದು ಕಲ್ಪನೆಯಾ? ಇಲ್ಲಾ ಭ್ರಮೆಯಾ?
ಈ ವಾರದ ಬಿಡುಗಡೆ ‘ವಿಕಲ್ಪ’, ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್‌ಡಿ) ಎಂಬ ಮಾನಸಿಕ ವ್ಯಾಧಿಯ ಎಳೆಯನ್ನು ಆಧರಿಸಿ ಚಿತ್ರ ಮಾಡಲಾಗಿದೆ. ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿರುವ ಭ್ರಮೆ ಮತ್ತು ವಾಸ್ತವದ ನಡುವಿಣ ಚಿತ್ರಣ ಈ ಚಿತ್ರದಲ್ಲಿದೆ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತವಕ-ತಲ್ಲಣಗಳನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಇದೆಲ್ಲದರಿಂದ ಆ ವ್ಯಕ್ತಿಯ ಜೀವನದಲ್ಲಿ ಏನೆಲ್ಲಾ ಏರುಪೇರುಗಳಾಗುತ್ತವೆ? ಮತ್ತು ಅಂತಿಮವಾಗಿ ಅದಕ್ಕೆ ಯಾವ ರೀತಿಯ ಪರಿಹಾರ ಸಿಗುತ್ತದೆ? ಎಂಬ ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರವಿದೆ.
ಕೆಲವೊಮ್ಮೆ ಇದು ಹಾರರ್ ಚಿತ್ರವಿರಬಹುದಾ? ಎಂಬ ಪ್ರಶ್ನೆ ಹುಟ್ಟುಹಾಕುತ್ತಲೇ, ಸೈಕಲಾಜಿಕಲ್ ಥ್ರಿಲ್ಲರ್ ಆಗಿ ‘ವಿಕಲ್ಪ’ ಅಂತ್ಯವಾಗುತ್ತದೆ. ಚಿತ್ರದಲ್ಲಿ ಹೊಡೆದಾಟ, ಮಾಸ್ ಮತ್ತು ಕಮರ್ಷಿಯಲ್ ಅಂಶಗಳನ್ನು ಹುಡುಕುವವರಿಗೆ ಈ ಚಿತ್ರ ಹಿಡಿಸದಿರಬಹುದು. ಮನೋವೈಜ್ಞಾನಿಕ ಅಂಶಗಳ ಜೊತೆಗೆ ಪ್ರೀತಿ, ತಾಯಿ ಸೆಂಟಿಮೆಂಟ್ ಎಲ್ಲವೂ ಇದೆ. ಯಕ್ಷಗಾನವನ್ನು ಒಂದು ಮುಖ್ಯ ಅಂಶವಾಗಿ ಬಳಸಿಕೊಳ್ಳಲಾಗಿದೆ. ಕೆಲವೊಮ್ಮೆ ಕಾಮಿಡಿಯನ್ನು ತುರುಕಲಾಗಿದೆ ಎಂದನಿಬಹುದು. ಅವೆಲ್ಲವನ್ನೂ ಹೊರತುಪಡಿಸಿ, ನೋಡಿಸಿಕೊಂಡು ಹೋಗುವ ಗುಣ ಚಿತ್ರಕ್ಕಿದೆ.
ಹರಿಣಿ ಶ್ರೀಕಾಂತ್ ಹೊರತುಪಡಿಸಿ, ಮಿಕ್ಕಂತೆ ಚಿತ್ರದಲ್ಲಿ ಸಾಕಷ್ಟು ಹೊಸಬರಿದ್ದಾರೆ. ಮೊದಲ ಬಾರಿಗೆ ಅಭಿನಯಿಸಿರುವ ಪೃಥ್ವಿರಾಜ್ ಪಾಟೀಲ್ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನುಳಿದ ಕಲಾವಿದರಾದ ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಪೂಜಾ, ಸ್ವರೂಪ್ ಅವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಂವತ್ಸರ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಚೆನ್ನಾಗಿವೆ.


