ಸಿನಿಮಾಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು: ಸಿದ್ದರಾಮಯ್ಯ

ಚಂದನವನ, ಸಿನಿ ಸುದ್ದಿ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಆವೃತ್ತಿಗೆ ಗುರುವಾರ ಸಂಜೆ ವಿಧ್ಯುಕ್ತವಾಗಿ ಚಾಲನೆ ಸಿಕ್ಕಿದೆ. ವಿಧಾನಸೌಧದ ಮುಂಭಾಗ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಚಿತ್ರೋತ್ಸವದ ರಾಯಭಾರಿ ಬಹುಭಾಷಾ ನಟ ಪ್ರಕಾಶ್‍ ರಾಜ್‍ ಮತ್ತು ನಟಿ ರುಕ್ಮಿಣಿ ವಸಂತ್ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಚಿತ್ರೋತ್ಸವದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಚಲನಚಿತ್ರಗಳು ಮನರಂಜನೆಗೆ ಮಾತ್ರ ಸೀಮಿತವಾಗದೆ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು. ಸಮಾಜದಲ್ಲಿರುವ ಅಸಮಾನತೆ, ಬಡತನ, ಸಿರಿತನ, ದಲಿತರು, ಹಿಂದುಳಿದವರು, ರೈತರು, ಕಾರ್ಮಿಕರು, ಅಲ್ಪಸಂಖ‍್ಯಾತರು, ಮಹಿಳೆಯರು ಕುರಿತಾಗಿ ಚಿತ್ರಗಳನ್ನು ಮಾಡಬೇಕು. ಸಮಾಜದಲ್ಲಿನ ವಾಸ್ತವ ಸ್ಥಿತಿ ತೋರಿಸಬೇಕು. ಡಾ. ರಾಜಕುಮಾರ್ ಸಿನಿಮಾಗಳಲ್ಲಿ ಇವೆಲ್ಲವನ್ನೂ ನೋಡುವುದಕ್ಕೆ ಸಾಧ್ಯ. ಈ ಚಿತ್ರೋತ್ಸವಗಳಿಂದ ಬೇರೆ ದೇಶಗಳ ಜೀವನ, ರಾಜಕೀಯ ಮತ್ತು ಸಮಾಜ ಅರ್ಥವಾಗುತ್ತದೆ. ಅಸಮಾನತೆ, ಸಮಾನತೆ ಅರ್ಥ ಮಾಡಿಕೊಳ‍್ಳುವುದು ಅವಶ್ಯಕ. ಅದಕ್ಕೆ ಇದೊಂದು ಸುವರ್ಣಾವಕಾಶ. ಅದನ್ನು ಉಪಯುಕ್ತವಾಗಿ ಬಳಸಿಕೊಂಡು ಸಮಾಜದಲ್ಲಿ ಬದಲಾವಣೆ ತರಬೇಕು. ಬದಲಾವಣೆ ಆಗದಿದ್ದರೆ, ಸಿನಿಮಾ ಬರೀ ಮನರಂಜನೆಗೆ ಸೀಮಿತ ಆಗುತ್ತದೆ. ನಾವು ಮನುಷ್ಯರು, ನಾವು ಮಾನವರಾಗಿ ಬಾಳುವುದು ಅವಶ್ಯಕ. ಪ್ರತಿ ವ್ಯಕ್ತಿಯನ್ನು ಪ್ರೀತಿಯಿಂದ, ಸ್ನೇಹದಿಂದ ಕಾಣಬೇಕು. ಆಗ ಮಾತ್ರ ಸಮಸಮಾಜ ಕಟ್ಟುವುದಕ್ಕೆ ಸಾಧ್ಯ. ಬೇಧ, ಭಾವ, ಅಸಮಾನತೆ ಹೋಗಲಾಡಿಸುವ ಕೆಲಸ ಸಿನಿಮಾದ ಮೂಲಕ ಮಾಡಬೇಕು. ನಮ್ಮ ಸರ್ಕಾರ ಚಲನಚಿತ್ರ ಅಭಿವೃದ್ಧಿಗೆ ಸಹಕಾರ, ಬೆಂಬಲ ಕೊಡುತ್ತೇವೆ. ಬದುಕನ್ನು ಹಸನು ಮಾಡುವ ಕೆಲಸ ಕನ್ನಡ ಚಿತ್ರಗಳನ್ನು ಮಾಡಲಿ’ ಎಂದು ಚಿತ್ರೋತ್ಸವಕ್ಕೆ ಶುಭ ಹಾರೈಸಿದರು.

ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ, ವಿತರಕನಾಗಿ, ಈಗ ಚಿತ್ರೋತ್ಸವದ ರಾಯಭಾರಿಯಾಗಿ ನಿಂತಿರುವುದಾಗಿ ಮಾತು ಪ್ರಾರಂಭಿಸಿದ ಚಿತ್ರೋತ್ಸವದ ರಾಯಭಾರಿ ಪ್ರಕಾಶ್‍ ರಾಜ್‍, ‘ಒಂದು ಅಂತಾರಾಷ್ಟ್ರೀಯ ಚಿತ್ರೋತ್ಸವ ಆಗಿರಬಹುದು ಅಥವಾ ಸಾಹಿತ್ಯ ಉತ್ಸವ ಆಗಿರಬಹುದು, ಇಲ್ಲಿ ಬೇರೆಬೇರೆ ವಿಚಾರಗಳು, ಅನುಭವಗಳು ಹಂಚಿಕೊಳ್ಳುವುದಕ್ಕೆ, ಮಾನವೀಯ ಬಾಂಧವ್ಯ ಬೆಳೆಯುವುದಕ್ಕೆ ಕಾರಣ ಆಗುತ್ತದೆ. ಆದರೆ, ಇತ್ತೀಚೆಗೆ ಇದರಲ್ಲಿ ರಾಜಕೀಯ ಪ್ರವೇಶ ಮಾಡಿದೆ.  ಅದ್ಭುತವಾಗಿ ನಡೆದುಕೊಂಡು ಬರುತ್ತಿದ್ದ ಉತ್ಸವಕ್ಕೆ ಪ್ಯಾಲಸ್ತೇನಿ ಚಿತ್ರಗಳನ್ನು ಕೇಂದ್ರ ಸರ್ಕಾರ ಪ್ರದರ್ಶನ ಮಾಡುವುದಕ್ಕೆ ಬಿಡುತ್ತಿಲ್ಲ. ಇದರ ಪ್ರತಿರೋಧ ಹೇಗೆ ಮಾಡಬೇಕು? ಸರ್ಕಾರವಾಗಿ, ಮುಖ್ಯಮಂತ್ರಿಗಳಾಗಿ ನೀವು ನಿಲುವನ್ನು ತೆಗೆದುಕೊಳ್ಳಬೇಕು ಎಂದು ಒಬ್ಬ ರಾಯಭಾರಿಯಾಗಿ ಕೇಳಿಕೊಳ್ಳುತ್ತಿದ್ದೇನೆ’ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ನಮ್ಮ ನಾಡಿನ, ನಮ್ಮ ಮಣ್ಣಿನ, ಕಣ್ಣೀರಿನ, ಸಂತಸದ ಕಥೆಗಳಿರುವ ಪುಸ್ತಕವೊಂದು ಬೇರೆ ಭಾಷೆಗೆ ತರ್ಜುಮೆಯಾಗಿ ಬುಕರ್ ಪ್ರಶಸ್ತಿ ಪಡೆದರೆ ಸಂಭ್ರಮಿಸುವ ನಾವು, ನಮ್ಮ ನೆಲಕ್ಕೆ ಇನ್ನೊಬ್ಬರ ಕಥೆಗಳನ್ನು ತರುವುದಕ್ಕೆ ಆಗುವುದಿಲ್ಲ ಎಂದರೆ ಹೇಗೆ ಒಪ್ಪಿಕೊಳ್ಳುವುದಕ್ಕೆ ಸಾಧ್ಯ ಎಂದು ಪ್ರಶ್ನಿಸಿದ ಪ್ರಕಾಶ್‍ ರಾಜ್, ‘ಕೇರಳದ ಚಿತ್ರೋತ್ಸವದಲ್ಲೂ ಪ್ಯಾಲಸ್ತೇನಿ ಚಿತ್ರಗಳ ಪ್ರದರ್ಶನಕ್ಕೆ ಅನುಮತಿ ಇರಲಿಲ್ಲ. ಆದರೆ, ಅಲ್ಲಿನ ಸರ್ಕಾರ ಪ್ರದರ್ಶನಗಳಿಗೆ ಅನುವು ಮಾಡಿಕೊಟ್ಟಿತು. ಆ ತರಹದ ಪ್ರತಿರೋಧವನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ, ನಿಮ್ಮ ರಾಜಕೀಯದ ಹುನ್ನಾರ ನಡೆಯುವುದಿಲ್ಲ ಎಂದು ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರತಿರೋಧಿಸಬೇಕು ಮತ್ತು ಪ್ರತಿಭಟಿಸಬೇಕು. ನಮ್ಮ ಕಣ್ಣೀರಿನ ಪರಿಚಯ ಬರೀ ನಮ್ಮ ಕೆನ್ನೆಗೆ ಇದ್ದರೆ ಸಾಲದು, ಬೇರೆಯವರ ಕೆನ್ನೆಗೂ ಪರಿಚಯ ಮಾಡಿದಾಗಲಷ್ಟೇ ನಾವು ಮನುಷ್ಯರಾಗುವುದು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ, ‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಕನ್ನಡ ಚಿತ್ರರಂಗಕ್ಕೆ ಅನುಕೂಲಕರವಾದ ಹಲವು ಕೆಲಸಗಳನ್ನು ಮಾಡುತ್ತಿದೆ. ಕನ್ನಡ ಒಟಿಟಿ, ಮೈಸೂರಿನಲ್ಲಿ ಚಿತ್ರನಗರಿ, ಕಮರ್ಷಿಯಲ್ ಸಿನಿಮಾ ಕಾಂಪ್ಲೆಕ್ಸ್‌ಗೆ ಈಗಾಗಲೇ ಸರ್ಕಾರ ಚಾಲನೆ ಕೊಟ್ಟಿದೆ. ಪ್ರತೀ ವರ್ಷ ಕನ್ನಡದಲ್ಲಿ ೩೦೦ಕ್ಕೂ ಅಧಿಕ ಸಿನಿಮಾಗಳು ತಯಾರಾಗುತ್ತಿದ್ದು, ಈ ಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ಪಡೆಯುವುದಕ್ಕೆ ಹಲವು ಕಡೆ ಓಡಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲವೂ ಒಂದೇ ಜಾಗದಲ್ಲಿ ಅನುಮತಿ ಸಿಗುವಂತೆ ಏಕ ಗವಾಕ್ಷಿ ಪದ್ಧತಿಯನ್ನು ಜಾರಿಗೆ ತರುವಂತೆ’ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅದಕ್ಕೂ ಮುನ್ನ ಡಾ. ಜ್ಯೋತ್ಸ್ನಾ ಶ್ರೀಕಾಂತ್‍ ಅವರ ನೇತೃತ್ವದಲ್ಲಿ 35 ಕಲಾವಿದರಿಂದ ‘ವಿಶ್ವ ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್‍ನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶಾಸಕ ರಿಜ್ವಾನ್‍ ಅರ್ಷದ್‍, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್‍, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್‍ ನಿಂಬಾಳ್ಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್‍ ವಿನೋದ್‍ ಚಂದ್ರ, ಚಿತ್ರೋತ್ಸವದ ಕಲಾತ್ಮಕ ನಿರ್ದೇಕರಾದ ಮುರಳಿ ಪಿ.ಬಿ, ನಟಿ ಮತ್ತು ಮಾಜಿ ಸಚಿವೆ ಡಾ. ಜಯಮಾಲ, ಉಮಾಶ್ರೀ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಮುಖ್ಯಮಂತ್ರಿ ಚಂದ್ರು, ಚೇತನ್‍ ಅಹಿಂಸ, ಪೂಜಾ ಗಾಂಧಿ, ಶ್ರೀನಗರ ಕಿಟ್ಟಿ, ಶರತ್‍ ಲೋಹಿತಾಶ್ವ, ಅನು ಪ್ರಭಾಕರ್, ರಘು ಮುಖರ್ಜಿ, ರಾಕ್‍ಲೈನ್‍ ವೆಂಕಟೇಶ್‍, ಸುಂದರ್ ರಾಜ್‍ ಮುಂತಾದವರು ಹಾಜರಿದ್ದರು. ಉದ್ಘಾಟನಾ ವೇದಿಕೆಯಲ್ಲಿ ನೆದರ್‍ಲ್ಯಾಂಡ್‍ ದೇಶದ ‘ಪೋರ್ಟ್ ಬ್ಯಾಗೇಜ್‍’ ಚಿತ್ರವು ಉದ್ಘಾಟನಾ ಚಿತ್ರವಾಗಿ ಪ್ರದರ್ಶನವಾಯಿತು.

 

ಜನವರಿ 29ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

Latest Posts

Discover more from KannadaScreens

Subscribe now to keep reading and get access to the full archive.

Continue reading