ಜನವರಿ 29ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಚಂದನವನ, ಸಿನಿ ಸುದ್ದಿ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಅವತರಣಿಕೆಗೆ ವೇದಿಕೆ ಸಜ್ಜಾಗಿದ್ದು, ಗುರುವಾರ (ಜನವರಿ 29) ಸಂಜೆ 5ಕ್ಕೆ ವಿಧಾನಸೌಧದ ಮುಂಭಾಗ ರಾಜ್ಯದ ಮುಖ್ಯಮಂತ್ರಿಗ ಸಿದ್ದರಾಮಯ್ಯ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್‍ನ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್‍ ಉಪಸ್ಥಿತರಿರಲಿದ್ದಾರೆ. ಚಿತ್ರೋತ್ಸವದ ರಾಯಭಾರಿ ಪ್ರಕಾಶ್‍ ರಾಜ್‍ ಮತ್ತು ನಟಿ ರುಕ್ಮಿಣಿ ವಸಂತ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ ಉಪಸ್ಥಿತರಿರಲಿದ್ದಾರೆ.

ಸಂಜೆ 5.30ಕ್ಕೆ ಡಾ. ಜ್ಯೋತ್ಸ್ನಾ ಶ್ರೀಕಾಂತ್‍ ಅವರ ನೇತೃತ್ವದಲ್ಲಿ 35 ಕಲಾವಿದರಿಂದ ‘ವಿಶ್ವ ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಆರು ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭವಾಗಲಿದೆ. ರಾತ್ರಿ 8ಕ್ಕೆ ಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ನೆದರ್‍ಲ್ಯಾಂಡ್‍ ದೇಶದ ‘ಪೋರ್ಟ್ ಬ್ಯಾಗೇಜ್‍’ ಚಿತ್ರವು ಉದ್ಘಾಟನಾ ಚಿತ್ರವಾಗಿ ಪ್ರದರ್ಶನವಾಗಲಿದೆ.

ಜನವರಿ 30ರಿಂದ ಫೆಬ್ರವರಿ 06ರವರೆಗೂ, ಈ ಚಿತ್ರೋತ್ಸವದಲ್ಲಿ 65 ದೇಶಗಳ ಸುಮಾರು 225 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು ಆಯಾ ದೇಶದ ಸ್ಥಿತಿ-ಗತಿ, ಜನ ಜೀವನ ಮತ್ತು ಸಂಸ್ಕೃತಿಯನ್ನು ಬಿಂಬಿಸಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು ಈ ಚಿತ್ರೋತ್ಸವದಲ್ಲಿ ‘ಬೆಂಗಳೂರಿನಲ್ಲಿ ಜಗತ್ತು’ ಎನ್ನುವ ಶೀರ್ಷಿಕೆಯಡಿ ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಈ ಬಾರಿ ರಾಷ್ಟ್ರಕವಿ ಡಾ.ಜಿ.ಎಸ್‌. ಶಿವರುದ್ರಪ್ಪನವರ ಪ್ರಸಿದ್ಧ ಗೀತೆಯಾಗಿರುವ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಸಾಲಿನೊಂದಿಗೆ ʼಸ್ತ್ರೀ ಸಂವೇದನೆ, ಸಮಾನತೆಯ ದನಿʼ ಎಂಬ ಟ್ಯಾಗ್‌ ಲೈನ್‌ ಹೊಂದಿರುವ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಇದಲ್ಲದೆ ಈ ಚಿತ್ರೋತ್ಸವದಲ್ಲಿ ಏಷಿಯನ್‌ ಸಿನಿಮಾ ಸ್ಪರ್ಧಾ ವಿಭಾಗ, ಚಿತ್ರ ಭಾರತಿ (ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ), ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ, ಕನ್ನಡ ಜನಪ್ರಿಯ ಸಿನಿಮಾ, ಫಿಪ್ರೆಸ್ಕಿ – ವಿಮರ್ಶಕರ ವಾರ, ಜೀವನ ಕಥನ ಆಧಾರಿತ ಚಿತ್ರಗಳು, ದೇಶ ಕೇಂದ್ರಿತ ವಿಶೇಷ: ಪೋಲೆಂಡ್‌, ಭಾರತೀಯ ಉಪಭಾಷಾ ಚಲನಚಿತ್ರಗಳು, ಪುನರಾವಲೋಕನ‌ ಮುಂತಾದ ವಿಭಾಗಗಳಡಿ ಹಲವು ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ಡಾ. ರಾಜಕುಮಾರ್‌ ಅಭಿನಯದ ಐದು ಮಹತ್ವದ ಕನ್ನಡ ಚಲನಚಿತ್ರಗಳ ಪ್ರದರ್ಶನ, ಪೋಲೆಂಡಿನ ಪ್ರಖ್ಯಾತ ನಿರ್ದೇಶಕ ಆಂದ್ರೆ ವಾಜ್ದಾ ಅವರ ನಿರ್ದೇಶನದ ಏಳು ಪೋಲಿಷ್‌ ಚಲನಚಿತ್ರಗಳ ಪ್ರದರ್ಶನ, ಖ್ಯಾತ ಅಭಿನೇತ್ರಿ ಸ್ಮಿತಾ ಪಾಟೀಲ್‌ ಅವರ ಹೆಸರಾಂತ ಚಲನಚಿತ್ರಗಳ ಪ್ರದರ್ಶನ, ಥಾಯ್ಲೆಂಡಿನ ಖ್ಯಾತ ನಿರ್ದೇಶಕ ಅಚಿತಪಾಂಗ್‌ ವೀರಸೆಥಕುಲ್ ಅವರ ನಾಲ್ಕು ಪ್ರಮುಖ ಚಲನಚಿತ್ರಗಳ ಪ್ರದರ್ಶನ, ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಜನಮನ್ನಣೆ ಪಡೆದ ಸಮಕಾಲೀನ ಭಾರತೀಯ ಚಲನಚಿತ್ರಗಳ ಪ್ರದರ್ಶನ, ಸಂರಕ್ಷಿಸಲ್ಪಟ್ಟ ಮಹತ್ವದ ಭಾರತೀಯ ಚಲನಚಿತ್ರಗಳ ಪ್ರದರ್ಶನ ಕೂಡಾ ನಡೆಯಲಿದೆ.

ಚಿತ್ರೋತ್ಸವ ನಡೆಯುವ ಎಂಟು ದಿನಗಳ ಕಾಲ ಪ್ರತೀ ದಿನ ಚಿತ್ರ ನಿರ್ಮಾಣ, ನಿರ್ದೇಶನ, ಚಿತ್ರಕತೆ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ಮಾಸ್ಟರ್‌ ಕ್ಲಾಸ್‌, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳಿರುತ್ತವೆ.

ಈ ಚಿತ್ರೋತ್ಸವವು ಜನವರಿ 29ರಿಂದ ಫೆಬ್ರವರಿ 06ರವರೆಗೂ ನಡೆಯಲಿದ್ದು, ಬೆಂಗಳೂರಿನ ರಾಜಾಜಿನಗರದ ಲುಲು ಮಾಲ್‍ನ ಸಿನಿಪೊಲಿಸ್‍ ಮಲ್ಟಿಪ್ಲೆಕ್ಸ್ ಅಲ್ಲದೆ, ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿ ಮತ್ತು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಚಿತ್ರಗಳು ಪ್ರದರ್ಶನವಾಗಲಿವೆ.

13 ವರ್ಷಗಳ ಹಿಂದೆ ಮಾಡಿಕೊಂಡ ಕಥೆ ಈಗ ತೆರೆಗೆ; ಪ್ರೇಮಿಗಳ ದಿನದಂದು ‘ಸೀತಾ ಪಯಣ’

Latest Posts

Discover more from KannadaScreens

Subscribe now to keep reading and get access to the full archive.

Continue reading