ಚಿತ್ರ ವಿಮರ್ಶೆ: ಪುತ್ರನ ಉದ್ಧಾರಕ್ಕೆ ತಂದೆಯೇ ‘ಚೌಕಿದಾರ’

ಚಂದನವನ, ಚಿತ್ರ ವಿಮರ್ಶೆ, ಸಿನಿ ಸುದ್ದಿ

ಚಿತ್ರ: ಚೌಕಿದಾರ್

ನಿರ್ದೇಶನ: ಚಂದ್ರಶೇಖರ ಬಂಡಿಯಪ್ಪ

ನಿರ್ಮಾಣ: ಕಲ್ಲಹಳ್ಳಿ ಚಂದ್ರಶೇಖರ್

ತಾರಾಗಣ: ಸಾಯಿಕುಮಾರ್, ಪೃಥ್ವಿ ಅಂಬಾರ್, ಧನ್ಯಾ ರಾಮ್‌ಕುಮಾರ್, ಶ್ವೇತಾ, ಸುಧಾರಾಣಿ, ಧರ್ಮ ಹಾಗೂ ಗಿಲ್ಲಿ ನಟ ಮುಂತಾದವರು

ಯಾವುದೇ ಕೊರತೆ ಬಾರದಂತೆ ಮಗ ಬೆಳೆಯಬೇಕು, ಅವನ ಕನಸುಗಳಿಗೆಲ್ಲಾ ನೀರೆರೆದು ಪೋಷಿಸಬೇಕು ಎಂಬುದು ತಂದೆಯ ಮಹದಾಸೆ. ಜೀವನದಲ್ಲಿ ತಾನು ಕಂಡ ಕನಸುಗಳನ್ನು, ಅನುಭವಿಸದ ಸಂಗತಿಗಳನ್ನು ಮಗನಿಂದ ಸಾಕಾರಗೊಳಿಸುವುದೇ ‘ಚೌಕಿದಾರನ ಮೂಲಕ ಉದ್ದೇಶ ಮತ್ತು ಗುರಿ.

ಮಗ ಶಾಲೆಗೆ ಹೋಗುವಾಗ ಸೈಕಲ್, ಕಾಲೇಜಿಗೆ ಹೊರಟಾಗ ಬೈಕ್, ಪ್ರೇಯಸಿ ಕೈ ಕೊಟ್ಟಾಗ ‘ಕುಡಿಯಲು’ ಕರೆದುಕೊಂಡು ಹೋಗುವ ಅಪ್ಪ, ಆತನನ್ನು ‘ಸರಿ ದಾರಿಗೆ’ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗುತ್ತಾನಾ ಎಂಬುದನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ.

ಅಪ್ಪನ ಆಸೆಗೆ ಮಗ ಯಾವ ರೀತಿ ಸಹಕರಿಸಬಹುದು, ತಂದೆಗೆ ಹೇಗೆಲ್ಲ ಕೀರ್ತಿ ತಂದುಕೊಂಡಬಹುದು ಎಂದು ಊಹಿಸಿಕೊಂಡರೆ ಅದನ್ನು ತದ್ವಿರುದ್ಧವಾಗಿಸುತ್ತಾರೆ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಅಂದುಕೊಂಡಂತೆ ನಡೆದರೆ ಇದು ಮಾಮೂಲಿ ಧಾಟಿಯ ಸಿನಿಮಾ ಆಗಿಬಿಡುವ ಸಾಧ್ಯತೆಯಿದೆ ಎಂಬ ಕಾರಣದಿಂದಲೋ ಏನೋ ಕಥೆಯಲ್ಲಿ ಒಂದಷ್ಟು ತಿರುವುಗಳನ್ನು ಎದುರಾಗಿಸಿ ಕೌತುಕ ಕಾಪಾಡಿಕೊಂಡಿದ್ದಾರೆ.

ಭಾವನಾತ್ಮಕ ದೃಶ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿರುವುದು ಚಿತ್ರದ ಪ್ರಮುಖ ಅಂಶ. ಉಳಿದ ಜಾಗವನ್ನು ಬಹುತೇಕ ಆಕ್ಷನ್ ಆವರಿಸಿಕೊಂಡಿದೆ. ಫ್ಯಾಮಿಲಿ ಜತೆಗೆ ಮಾಸ್ ಅಂಶಗಳನ್ನು ಬೆರೆಸಿ ಅಚ್ಚುಕಟ್ಟಾದ ಅಡುಗೆ ಮಾಡಿ ಬಡಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ. ಹಾಗೆ ನೋಡಿದರೆ, ಸಾಯಿಕುಮಾರ್ ನಿಜವಾದ ‘ನಾಯಕ’ನಂತೆ ಕಂಗೊಳಿಸಿದ್ದಾರೆ, ಆಪ್ತವಾಗುತ್ತಾರೆ … ಅಪ್ಪನಾಗಿ ಇಷ್ಟವಾಗುತ್ತಾರೆ.

ಅಪ್ಪ ಎಂದರೆ ಆಕಾಶ ಎಂದು ಮಗನಿಗೆ ತಿಳಿಯುವ ಹೊತ್ತಿಗೆ ಕಥೆ ಸುಮಾರು ದೂರ ಸಾಗಿರುತ್ತದೆ. ಅಲ್ಲಿವರೆಗಿನ ಏರಿಳಿತ, ತಂದೆಯ ಅಪರಿಮಿತ ಪ್ರೀತಿ, ತಾಯಿಯ ಮಮತೆ, ಕಾಲೇಜು ದಿನಗಳು, ಕೈ ಕೊಟ್ಟ ಗೆಳತಿ … ಹೀಗೆ ಎಲ್ಲವೂ ನಾಯಕನನ್ನು ಒಂದು ರೌಂಡು ಹಿಂಡಿ ಹಿಪ್ಪೆ ಮಾಡಿರುತ್ತದೆ. ಆತ ಜೀವನವನ್ನು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಅಪ್ಪನ ಮಹತ್ವ ಏನೆಂಬುದು ಪ್ರೇಕ್ಷಕರಿಗೂ ಮನದಟ್ಟಾಗಿರುತ್ತದೆ.

ಸಾಯಿಕುಮಾರ್ ತಂದೆಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪೃಥ್ವಿ ಅಂಬಾರ್‌ಗಿದು ಬೇರೆ ರೀತಿಯ ಪಾತ್ರ ಪೋಷಣೆ ಹಾಗೂ ನಟಿಸಲು ಅವಕಾಶ ಸಿಕ್ಕಿರುವ ಮತ್ತೊಂದು ಸಿನಿಮಾ. ಧನ್ಯಾ ರಾಮ್‌ಕುಮಾರ್, ಶ್ವೇತಾ, ಸುಧಾರಾಣಿ, ಧರ್ಮ ಹಾಗೂ ಗಿಲ್ಲಿ ನಟ ಮುಂತಾದವರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಸಚಿನ್ ಬಸ್ರೂರು ಸಂಗೀತ ಗಮನ ಸೆಳೆಯುತ್ತದೆ.

  • ಪ್ರೀತಂ

ಸಿನಿಮಾಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು: ಸಿದ್ದರಾಮಯ್ಯ

Latest Posts

Discover more from KannadaScreens

Subscribe now to keep reading and get access to the full archive.

Continue reading