ವಿಜಯ್ ರಾಘವೇಂದ್ರ ನಟನೆಯ ಹೊಸ ಸಿನಿಮಾ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ದ ಟೀಸರ್ ಬಿಡುಗಡೆಯಾಗಿದೆ. ನಟಿ ಭಾವನ ಮೆನನ್, ಶಿವರಾಜಕುಮಾರ್, ಧನಂಜಯ್, ಉನ್ನಿ ಮುಕುಂದ್ ಹಾಗೂ ನವೀನ್ ಶಂಕರ್ ಸೋಷಿಯಲ್ ಮೀಡಿಯಾದಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
2021ರಲ್ಲಿ ತೆರೆಕಂಡ ವಿಜಯ್ ರಾಘವೇಂದ್ರ ಅಭಿನಯದ ‘ಸೀತಾರಾಮ್ ಬಿನೋಯ್’ ಸಿನಿಮಾದ ಸೀಕ್ವೆಲ್ ಇದಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದ ವಿಜಯ ರಾಘವೇಂದ್ರ ಬಳಿಕ ‘ಕೇಸ್ ಆಫ್ ಕೊಂಡಾನ’ ಚಿತ್ರದಲ್ಲಿ ನಟಿಸಿದ್ದರು. ಇದನ್ನು ದೇವಿಪ್ರಸಾದ್ ಶೆಟ್ಟಿ ಅವರೇ ನಿರ್ದೇಶಿಸಿದ್ದರು. ಇದೀಗ ಮತ್ತೊಮ್ಮೆ ದೇವಿ ಪ್ರಸಾದ್ ಶೆಟ್ಟಿ ಜೊತೆ ಸಿನಿಮಾ ಮಾಡಿದ್ದಾರೆ.
ದೇವಿಪ್ರಸಾದ್ ಅವರೇ ಈ ಸಿನಿಮಾದ ಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿ ಸಾತ್ವಿಕ್ ಹೆಬ್ಬಾರ್ ಜೊತೆ ಕೈಜೋಡಿಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಸಿನಿಮಾವನ್ನು ಪ್ರಸ್ತುಪಡಿಸಲಿದ್ದಾರೆ.
‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರಕ್ಕೆ ಹೇಮಂತ್ ಆಚಾರ್ ಛಾಯಾಗ್ರಹಣ, ನವನೀತ್ ಶ್ಯಾಮ್ ಸಂಗೀತ ನಿರ್ದೇಶನ, ಶಶಾಂಕ್ ನಾರಾಯಣ್ ಸಂಕಲನವಿದೆ. ವಿಜಯ್ ರಾಘವೇಂದ್ರ ಅಲ್ಲದೆ, ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


