ಪ್ರಾಯೋಗಾತ್ಮಕ ಚಿತ್ರಗಳಿಗೆ ಸರ್ಕಾರದ ಬೆಂಬಲ ಅಗತ್ಯ. ಸರ್ಕಾರದ ಸಬ್ಸಿಡಿ ಇಲ್ಲದಿದ್ದರೆ ಅಂತಹ ಚಿತ್ರಗಳ ನಿರ್ಮಾಣ ಕಷ್ಟವಾಗುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಎಂಟನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ನ ‘ಚಿತ್ರ ಮತ್ತು ಚೇತನ – ಕನ್ನಡದ ಸೃಜನಶೀಲ ಜವಾಬ್ದಾರಿ’ ಎಂಬ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುವಾಗ ಮೊದಲು ಎದುರಾಗುವ ಸಮಸ್ಯೆ ಹಣಕಾಸಿನದ್ದು. ಈ ನಿಟ್ಟಿನಲ್ಲಿ ಸರ್ಕಾರದ 10 ಲಕ್ಷ ರೂ. ಸಬ್ಸಿಡಿ ಬಹಳ ಮುಖ್ಯವಾದದ್ದು. ನಾನು ‘ಮುನ್ನುಡಿ’ ಚಿತ್ರ ಮಾಡಿದಾಗ, ಸರ್ಕಾರ 20 ಚಿತ್ರಗಳಿಗೆ ತಲಾ 10 ಲಕ್ಷ ಕೊಡುತ್ತಿತ್ತು. ವರ್ಷದ 20 ಗುಣಮಟ್ಟದ ಚಿತ್ರಗಳಲ್ಲಿ ನನ್ನದೂ ಒಂದು ಚಿತ್ರವಾಗಬೇಕು ಎಂಬ ಹಠವಿತ್ತು. ಆದರೆ, ಈಗ 200 ಚಿತ್ರಗಳಲ್ಲಿ ಒಂದಾಗುತ್ತಿದೆ. ಅದು ಪೈಪೋಟಿ ಎಂದು ಅನಿಸಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಸಂಖ್ಯೆ ಕಡಿಮೆ ಮಾಡಿ, ಗುಣಮಟ್ಟದ ಚಿತ್ರಗಳಿಗೆ ಮಾತ್ರ ಸಬ್ಸಿಡಿ ಕೊಡುವ ಪರಿಪಾಠ ಮುಂದುವರೆಸಬೇಕು’ ಎಂದರು.
ಸಿನಿಮಾ ಭಾಷೆಯನ್ನು ಪರಿಚಯಿಸಬೇಕು ಎಂದ ಅವರು, ‘ಸಿನಿಮಾ ಎನ್ನುವುದು ಸಮೂಹ ಮಾಧ್ಯಮ. ಅದೊಂದು ಸಮೂಹ ಕಲೆ. ನಿರ್ದೇಶಕನಿಗೆ ಕ್ಯಾಪ್ಟನ್ ಆಫ್ ದಿ ಶಿಪ್ ಎಂದರೂ, ಒಂದು ಚಿತ್ರ ರೂಪುಗೊಳ್ಳುವಲ್ಲಿ ಹಲವರ ಶ್ರಮವಿರುತ್ತದೆ. ಹಾಗಾಗ, ಎಲ್ಲರೂ ಕೂಡಿ ಚರ್ಚೆ ಮಾಡಬೇಕು. ಆದರೆ, ಅದು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಕೊರತೆ ಇದೆ. ಸಿನಿಮಾಗೆ ಅದರದ್ದೇ ಆದ ಭಾಷೆ ಇದೆ. ಕ್ಯಾಮೆರಾ ಆ್ಯಂಗಲ್, ಲೈಟಿಂಗ್ ಎಲ್ಲಕ್ಕೂ ಅದರದ್ದೇ ಆದೆ ಭಾಷೆ ಇದೆ. ಅದನ್ನು ಪರಿಚಯಿಸಬೇಕು. ಆ ನಿಟ್ಟಿನಲ್ಲಿ ನಮ್ಮಲ್ಲಿ ಕೊರತೆ ಇದೆ’ ಎಂದರು.

ಐತಿಹಾಸಿಕ ಚಿತ್ರಗಳನ್ನು ಮಾಡುವಾಗ ಬಹಳ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಮಾಡಬೇಕು ಎಂದ ಅವರು, ‘ನಮ್ಮಲ್ಲಿ ಐತಿಹಾಸಿಕ ಚಿತ್ರಗಳ ಸಂಖ್ಯೆ ಕಡಿಮೆಯೇ. ಅಂತಹ ಚಿತ್ರಗಳನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕು. ‘ಕಿತ್ತೂರು ಚೆನ್ನಮ್ಮ’ ಕಥೆಯು ಬೆಳಗಾವಿಯ ಪ್ರಾಂತ್ಯದದ್ದಾರೂ ಚಿತ್ರದಲ್ಲಿ ಮೈಸೂರು ಅಥವಾ ಸಿನಿಮಾ ಕನ್ನಡವನ್ನು ಬಳಸಲಾಗಿತ್ತು. ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಪ್ರೇಮಕಥೆ ವೈಭವೀಕರಣಗೊಂಡಿತ್ತು. ಹೀಗೆ ವೈಭವೀಕರಣ ಮಾಡುವ ಮೂಲಕ ಇತಿಹಾಸವನ್ನು ತಿರುಚಬಾರದು. ಸಿನಿಮಾದಲ್ಲಿ ಸೃಜನಶೀಲ ಸ್ವಾತಂತ್ರ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಅದರಿಂದ ಇತಿಹಾಸಕ್ಕೆ ಚ್ಯುತಿ ತರಬಾರದು. ಈ ನಿಟ್ಟಿನಲ್ಲಿ ಬಹಳ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಅದರಿಂದ ಮುಂದಿನ ತಲೆಮಾರಿನವರಿಗೆ ತಪ್ಪು ಗ್ರಹಿಕೆ ಆಗಬಾರದು’ ಎಂದು ಹೇಳಿದರು.
ಈ ವಿಷಯದಲ್ಲಿ ಪೂರಕವಾಗಿ ಮಾತನಾಡಿದ ಮಾಳವಿಕಾ ಅವಿನಾಶ್, ‘ನನಗೆ ಶೇಷಾದ್ರಿ ಅವರ ಭಯ ಅರ್ಥವಾಗುತ್ತದೆ. ತಪ್ಪು ತೋರಿಸುವುದಕ್ಕಿಂತ ತೋರಿಸದಿರುವುದೇ ಒಳ್ಳೆಯದು. ಆದರೆ, ಎಲ್ಲರೂ ಆ ರೀತಿ ಮಾಡುವುದಿಲ್ಲ. ಇಮ್ಮಡಿ ಪುಲಕೇಶಿ ಚಿತ್ರದಲ್ಲಿ ಡಾ. ರಾಜಕುಮಾರ್ ಅವರ ಚಿತ್ರಣ, ಇತಿಹಾಸದಲ್ಲಿ ದಾಖಲಾಗಿರುವಂತೆಯೇ ಇದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆ ಅಗತ್ಯ. ರಂಜನೆ ಜೊತೆಗೆ ಸಂಶೋಧನೆ ಸಹ ಮುಖ್ಯ’ ಎಂದರು.
ಐತಿಹಾಸಿಕ ಚಿತ್ರಗಳ ಅವಶ್ಯಕತೆ ಹೆಚ್ಚಿದೆ ಎಂದ ಅವರು, ‘ಇತಿಹಾಸದಲ್ಲಿ ಅಕ್ಬರ್, ಬಾಬರ್ ಮುಂತಾದ ಹಲವು ಮೊಘಲರ ಉಲ್ಲೇಖವೇ ಇದೆ. ನಮಗೆ ‘ತಾನಾಜಿ’ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಸಿನಿಮಾ ನೋಡಿದ ಮೇಲೆ ಎಷ್ಟೋ ಜನರಿಗೆ ತಾನಾಜಿ ಬಗ್ಗೆ ಗೊತ್ತಾಯಿತು. ಉತ್ಪ್ರೇಕ್ಷೆ ಮತ್ತು ವೈಭವೀಕರಣದಿಂದಾಗಿ ಬಹಳಷ್ಟು ಜನರಿಗೆ ತಲುಪಿದೆ. ಕೆಲವು ಕಥೆಗಳನ್ನು ಹೇಳಲೇಬೇಕು. ಶೇಷಾದ್ರಿ ಅವರು ಮುನ್ನುಡಿ ಮಾಡಿದಾಗ ಸಾಕಷ್ಟು ಸಂಶೋಧನೆ ಮಾಡಿ ಅಧಿಕೃತವಾಗಿ ಮಾಡಿದರು. ಒಂದು ಸಮಸ್ಯೆ, ಆ ಚಿತ್ರದಿಂದ ಹಲವರಿಗೆ ತಲುಪಿದಂತಾಯಿತು’ ಎಂದರು.


