ಈ ಹಿಂದೆ ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಚಂದ್ರಮೌಳಿ, ಕಳೆದ ವರ್ಷ ‘ದಿಲ್‍ಮಾರ್’ ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿದ್ದರು. ಇದೀಗ ಅವರ ನಿರ್ದೇಶನದ ಎರಡನೇ ಚಿತ್ರ ‘ವೈಲ್ಡ್ ಟೈಗರ್ ಸಫಾರಿ’ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದ ಟೀಸರ್ ಇತ್ತೀಚೆಗೆ ದುಬೈನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಯಾಗಿದೆ.
‘ವೈಲ್ಡ್ ಟೈಗರ್ ಸಫಾರಿ’ ಚಿತ್ರದಲ್ಲಿ ಶಿಥಿಲ್ ಪೂಜಾರಿ ನಾಯಕನಾಗಿ ಅಭಿನಯಿಸಿದ್ದಾರೆರೆ. ಶಿಥಿಲ್‍ಗೆ ಇದು ಮೊದಲ ಕನ್ನಡ ಸಿನಿಮಾ. ನಾಯಕಿಯಾಗಿ ನಿಮಿಕಾ ರತ್ಮಾಕರ್ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿಯಲ್ಲೂ ಬಿಡುಗಡೆ ಆಗುತ್ತಿದೆ. ವಿಕೆಫಿಲ್ಮ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿ ಬಂದಿದ್ದು ದುಬೈನಲ್ಲೆ ನೆಲೆಸಿರುವ ವಿನೋದ್ ಕುಮಾರ್, ಕಿಶೋರ್ ಕಮಾರ್, ಪ್ರಸನ್ನ ಕುಮಾರ್ ಮತ್ತು ಗುರುದತ್ ಗಾಣಿಗ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.

ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿರುವ ‘ವೈಲ್ಡ್ ಟೈಗರ್ ಸಫಾರಿ’ ಚಿತ್ರದ ಟೀಸರ್ ದುಬೈನ ಸುಪ್ರಸಿದ್ಧ ಗ್ಲೋಬಲ್ ವಿಲೇಜ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಗ್ಲೋಬಲ್ ವಿಲೇಜ್‌ನಲ್ಲಿ ನಡೆದ ಮೊದಲ ಸಿನಿಮಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಲಿವುಡ್‌ನ ಯಾವ ಸ್ಟಾರ್‌ಗಳಿಗೂ ಸಿಗದ ಈ ಜಾಗ ‘ಕನ್ನಡದ ಟೈಗರ್ ಸಫಾರಿ’ ಟೀಸರ್ ಲಾಂಚ್‌ಗೆ ಸಿಕ್ಕಿರುವುದು ವಿಶೇಷ. ಬಾಲಿವುಡ್‍ನ ಜನಪ್ರಿಯ ನೃತ್ಯ ನಿರ್ದೇಶಕ ರೆಮೋ ಡಿ’ಸೋಜ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಸದ್ಯ ಬಿಡುಗಡೆ ಆಗಿರುವ ಟೀಸರ್‍ನಲ್ಲಿ ನಾಯಕ ಶಿಥಿಲ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಆ್ಯಕ್ಷನ್ ಚಿತ್ರವಾಗಿದ್ದು, ‘ಕೆಜಿಎಫ್’ ಚಿತ್ರದಲ್ಲಿ ಮಿಂಚಿದ್ದ ನಟ ಅವಿನಾಶ್ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ಬಾಲಿವುಡ್‍ನಲ್ಲಿ ನಟರಾಗಿ ಹಾಗೂ ನ್ಯತ್ಯ ಸಂಯೋಜಕರಾಗಿ ಜನಪ್ರಿಯರಾಗಿರುವ ಧರ್ಮೇಶ್ ಮತ್ತು ಸುಶಾಂತ್ ಪೂಜಾರಿ ಕೂಡ ನಟಿಸಿದ್ದಾರೆ.
ಸಚಿನ್ ಬಸ್ರೂರು ಸಂಗೀತ, ಗುರುಪ್ರಸಾದ್ ನಾರ್ನಾಡ್ ಛಾಯಾಗ್ರಹಣವಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.


