ಕರ್ನಾಟಕ ಸರ್ಕಾರವು ಇತ್ತೀಚೆಗಷ್ಟೇ ಎಲ್ಲಾ ಮಲ್ಟಿಪ್ಲೆಕ್ಸ್ ಮತ್ತು ಏಕಪರದೆಯ ಚಿತ್ರಮಂದಿರಗಳಿಗೆ ಏಕರೂಪದ ದರ ನಿಗದಿಪಡಿಸಿ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಅದರಂತೆ, ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಮತ್ತು ಏಕಪರದೆಯ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಮತ್ತು ಎಲ್ಲಾ ಪ್ರದರ್ಶನಗಳ ಟಿಕೆಟ್ ದರವನ್ನು ಗರಿಷ್ಠ 200 ರೂ.ಗೆ ನಿಗದಿ ಪಡಿಸಲಾಗಿತ್ತು. ಇದರ ವಿರುದ್ಧ ಮಲ್ಟಿಪ್ಲೆಕ್ಸ್ ಒಕ್ಕೂಟ ತಕರಾರು ತೆಗೆದಿದ್ದು, ಹೈಕೋರ್ಟ್ ಸಹ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಸರ್ಕಾರ ನಿಗದಿ ಮಾಡಿರುವ 200 ರೂಪಾಯಿ ಕಾನೂನು ಬಾಹಿರ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಹೊಂಬಾಳೆ ಫಿಲಂಸ್ ಕೋರ್ಟ್ ಮೆಟ್ಟಿಲೇರಿದ್ದವು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿದ್ದವು. ಇಂದು ವಿಚಾರಣೆ ನಡೆದಿದ್ದು, ಮಲ್ಟಿಪ್ಲೆಕ್ಸ್ ಗಳಿಗೆ ದರ ಮಿತಿ ಆದೇಶಕ್ಕೆ ತಡೆ ನೀಡಲಾಗಿದೆ. ನ್ಯಾ. ರವಿ ಹೊಸಮನಿ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಚಿತ್ರಗಳ ಟಿಕೆಟ್ ದರವನ್ನು ಗರಿಷ್ಠ 200 ರೂ. ನಿಗದಿಪಡಿಸಿ ಸರ್ಕಾರ ಕೆಲವು ದಿನಗಳ ಹಿಂದೆ ಆದೇಶ ಹೊರಡಿಸಿತ್ತು. ಕನ್ನಡ ಮತ್ತು ಎಲ್ಲಾ ಭಾಷೆಗಳ ಚಿತ್ರಗಳಿಗೆ ಈ ಆದೇಶ ಅನ್ವಯವಾಗಲಿದ್ದು, 75 ಮತ್ತು ಅದಕ್ಕಿಂತ ಕಡಿಮೆ ಇರುವ ಆಸನಗಳ ಮಲ್ಟಿಪ್ಲೆಕ್ಸ್ಗಳಿಗೆ ಈ ನಿಯಮದಿಂದ ವಿನಾಯ್ತಿ ನೀಡಲಾಗಿತ್ತು.
ಇದಕ್ಕೂ ಮೊದಲು, ಪರಭಾಷಾ ಚಿತ್ರಗಳು ಬಿಡುಗಡೆಯಾದ ಸಂದರ್ಭದಲ್ಲಿ ಟಿಕೆಟ್ ದರಕ್ಕೆ ಯಾವುದ ನಿಯಂತ್ರವಿರಲಿಲ್ಲ. ಕೆಲವು ಚಿತ್ರಗಳ ಟಿಕೆಟ್ ದರ ಒಂದು ಸಾವಿರ ಮೀರುತ್ತಿತ್ತು. ಅಕ್ಕಪಕ್ಕದ ರಾಜ್ಯಗಳಂತೆ ಕರ್ನಾಟಕದಲ್ಲೂ ಟಿಕೆಟ್ ದರವನ್ನು ನಿಗದಿ ಮಾಡಬೇಕು ಎಂಬ ಮನವಿಯನ್ನು ಚಿತ್ರರಂಗ ಇಟ್ಟಿತ್ತು. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಕಾರಣಾಂತರಗಳಿಂದ ಅದು ಜಾರಿಯಾಗಿರಲಿಲ್ಲ. ಈಗ ಸರ್ಕಾರ ಆದೇಶ ಹೊರಡಿಸಿದ್ದರೂ, ಅದಕ್ಕೆ ತಡೆಯಾಜ್ಞೆ ಸಿಕ್ಕಿದೆ.


