ತಮ್ಮ ಅಜ್ಞಾನದಿಂದ ಹೊಸ ವಿವಾದ ಹುಟ್ಟುಹಾಕಿದ ರಾಮ್‍ಗೋಪಾಲ್‍ ವರ್ಮ

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ, ಸಿನಿ ಸ್ವಾರಸ್ಯ

ನಿರ್ದೇಶಕ ರಾಮ್‍ಗೋಪಾಲ್‍ ವರ್ಮ ತಮ್ಮ ವಿವಾದಾತ್ಮಕ ಹೇಳಿಕೆಗಳಿಗೆ ಜನಪ್ರಿಯರು. ಒಂದಲ್ಲ ಒಂದು ಕಾರಣಗಳಿಗೆ ವಿವಾದಕ್ಕೆ ಸಿಲುಕುವ ವರ್ಮ, ಇದೀಗ ಇನ್ನೊಂದು ಹೊಸ ವಿವಾದಕ್ಕೆ ಸಿಲುಕಿದ್ದಾರೆ.

ಇತ್ತೀಚೆಗೆ ಮಾತನಾಡುವ ಭರದಲ್ಲಿ ದಕ್ಷಿಣದ ನಟರಾದ ಎನ್‍.ಟಿ. ರಾಮರಾವ್‍, ರಾಜಕುಮಾರ್‍, ರಜನಿಕಾಂತ್‍, ಚಿರಂಜೀವಿ ಮುಂತಾದ ನಟರು ಅಮಿತಾಭ್‍ ಬಚ್ಚನ್‍ ಅವರ ಯಶಸ್ವಿ ಚಿತ್ರಗಳನ್ನು ತಮ್ಮ ಭಾಷೆಗಳಲ್ಲಿ ರೀಮೇಕ್‍ ಮಾಡಿ ಜನಪ್ರಿಯರಾದರು ಎಂದು ಹೇಳಿಕೆ ನೀಡಿ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಅವರ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಇತ್ತೀಚೆಗೆ ಕಮಲ್‍ ಹಾಸನ್‍, ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬ ಅಜ್ಞಾನದ ಹೇಳಿಕೆಯನ್ನು ನೀಡಿದ್ದರು. ವರ್ಮ ಸಹ ಅದೇ ತರಹದ ಅಜ್ಞಾನ ಮೆರೆದು ಟೀಕೆಗೊಳಗಾಗಿದ್ದಾರೆ. ರಾಮ್‍ ಗೋಪಾಲ್‍ ವರ್ಮ ಹೇಳಿದಂತೆ ರಜನಿಕಾಂತ್, ಎನ್‍.ಟಿ. ರಾಮರಾವ್‍ ಮತ್ತು ಚಿರಂಜೀವಿ, ಅಮಿತಾಭ್ ಬಚ್ಚನ್‍ ಅಭಿನಯದ ಕೆಲವು ತೆಲುಗು ರೀಮೇಕ್‍ಗಳಲ್ಲಿ ನಟಿಸಿದ್ದಾರೆ.

ಆದರೆ, ಅಮಿತಾಭ್‍ ಬಚ್ಚನ್‍ ಅಭಿನಯದ ಯಾವೊಂದು ಕನ್ನಡ ರೀಮೇಕ್‍ನಲ್ಲೂ ಡಾ. ರಾಜಕುಮಾರ್‍ ನಟಿಸಿಲ್ಲ. ಬದಲಿಗೆ ರಾಜಕುಮಾರ್‍ ಅಭಿನಯದ ‘ಶಂಕರ್‍ ಗುರು’ ಚಿತ್ರದ ಹಿಂದಿ ರೀಮೇಕ್‍ ‘ಮಹಾನ್‍’ ಚಿತ್ರದಲ್ಲಿ ಅಮಿತಾಭ್ ಬಚ್ಚನ್‍ ನಟಿಸಿದ್ದರು. ಅದು ಗೊತ್ತಿಲ್ಲದ ವರ್ಮ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೊಳಗಾಗಿದ್ದಾರೆ. ಡಾ. ರಾಜಕುಮಾರ್‍ ಚಿತ್ರಗಳು ಮತ್ತು ಅಭಿನಯದ ಬಗ್ಗೆ ಯಾವುದೇ ಜ್ಞಾನವಿಲ್ಲದ ವರ್ಮಾ ಹೀಗೆ ಮಾತನಾಡಿರುವ ಸಾಧ್ಯತೆ ಇದೆ.

ವರ್ಮ ಹೇಳಿಕೆ ಟೀಕೆಗಳು ವ್ಯಕ್ತವಾಗುತ್ತಿವೆ. ಪ್ರತಿಕ್ರಿಯೆ ನೀಡಿರುವ ನಟ ಗಣೇಶ್‍, ಈ ಕುರಿತು ಪ್ರತಿಕ್ರಿಯೆ ನೀಡುವುದೇ ತಪ್ಪು ಎಂದು ಹೇಳಿದ್ದಾರೆ. ‘ವರ್ಮ ಅವರ ಹೇಳಿಕೆಗೆ ನಾವು ರಿಯಾಕ್ಷನ್‌ ಕೊಡೋದೇ ತಪ್ಪು. ಕನ್ನಡ ಅಂದರೆ ಡಾ. ರಾಜ್‌ಕುಮಾರ್.‌ ಡಾ. ರಾಜ್‌ಕುಮಾರ್‌ ಅಂದ್ರೆ ಕನ್ನಡ. ಆಕಾಶ ನೋಡಿ ಉಗಿದರೆ ನಮ್ಮ ಮೇಲೆ ಬೀಳುತ್ತದೆ. ಹಾಗಾಗಿ ಅಣ್ಣಾವ್ರ ಬಗ್ಗೆ ಮಾತನಾಡಿದರೆ, ಆಕಾಶ ನೋಡಿ ಉಗಿದ ಹಾಗೆ. ಆರ್‌ಜಿವಿ ಆಗಿರಲಿ ಅಥವಾ ಯಾರೇ ಆಗಿರಲಿ’ ಎಂದು ಹೇಳಿದ್ದಾರೆ.

500 ವರ್ಷಗಳ ಹಿಂದಿನ ದೇವಗಿರಿಯಲ್ಲೊಂದು ಸುತ್ತು …

Latest Posts

Discover more from KannadaScreens

Subscribe now to keep reading and get access to the full archive.

Continue reading