ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ ‘ಬಿಗ್ ಬಾಸ್’ನಿಂದ ನಿರೂಪಕ ಸುದೀಪ್ ಅವರು ಹೊರನಡೆಯುವ ಸಾಧ್ಯತೆ ಇದೆ, ಅವರ ಬದಲು ಬೇರೊಬ್ಬ ನಟ ಈ ಕಾರ್ಯಕ್ರಮವನ್ನು ಮುಂದುವರೆಸುವ ಸಾಧ್ಯತೆ ಇದೆ ಎಂಬ ಗುಸುಗುಸು ಕೆಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಆದರೆ, ಅದಕ್ಕೆ ಈಗೊಂದು ಸ್ಪಷ್ಟತೆ ಸಿಕ್ಕಿದ್ದು, ಈ ಬಾರಿ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರ ಅಭಿಮಾನಿಗಳೇ ಹೇಳುತ್ತಿದ್ದಾರೆ.
ಭಾನುವಾರ ಸಂಜೆ, ‘ಬಿಗ್ ಬಾಸ್’ ಕಾರ್ಯಕ್ರಮದ ಮೊದಲ ಪ್ರೀಮೋವೊಂದನ್ನು ಕಲರ್ಸ್ ಕನ್ನಡದ ‘ಎಕ್ಸ್’ ಖಾತೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಕಾರ್ಯಕ್ರಮ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂಬ ಸೂಚನೆಯನ್ನೂ ನೀಡಲಾಗಿದೆ. ಕಾರ್ಯಕ್ರಮದ ಕುರಿತಾಗಿ ಹಲವು ಹ್ಯಾಶ್‍ಟ್ಯಾಗ್‍ಗಳನ್ನು ಬಳಸಲಾಗಿದ್ದು, ವಿಶೇಷವೆಂದರೆ ಸುದೀಪ್ ಅವರ ಹ್ಯಾಶ್‍ಟ್ಯಾಗ್ ಬಳಸಲಾಗಿದೆ. ಈ ಮೂಲಕ ಸುದೀಪ್ ಈ ವರ್ಷ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂಬ ಸೂಚನೆ ನೀಡಲಾಗಿದೆ.
ಒಂದು ಪಕ್ಷ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡದಿದ್ದರೆ, ಅವರ ಹೆಸರನ್ನು ಯಾಕೆ ಬಳಸುತ್ತಿದ್ದರು? ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡುವುದು ಖಚಿತ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು, ಸುದೀಪ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದರಿಂದ ಅವರ ಚಿತ್ರಗಳ ಮೇಲೆ ಪರಿಣಾಮ ಬೀರುತ್ತಿದೆ, ಅವರನ್ನು ಬಿಟ್ಟು ಬಿಡ್ರೋ ಎಂದು ಕೆಲವರು ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 #BiggBossKannada11 #BBK11 #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #KicchaSudeepa pic.twitter.com/2ii8YEWNSZ
— Colors Kannada (@ColorsKannada) September 1, 2024
ಇನ್ನು, ಈ ಕಾರ್ಯಕ್ರಮ ನಡೆಸಿಕೊಡುವ ಕುರಿತು ಇತ್ತೀಚೆಗೆ ಮಾತನಾಡಿದ್ದ ಸುದೀಪ್, ‘‘ಬಿಗ್ ಬಾಸ್’ ಮಾತುಕತೆ ನಡೆಯುತ್ತಿದೆ. ನನ್ನ ಜೀವನದ ಹಲವು ದಿನಗಳನ್ನು ನನಾನು ಬಿಗ್ ಬಾಸ್‍ಗೆ ದಾನ ಮಾಡಿದ್ದೇನೆ. ಆ ಕಾರ್ಯಕ್ರಮಕ್ಕೆ ಸಾಕಷ್ಟು ಶ್ರಮ ಹಾಕಿದ್ದೇನೆ. ಎಲ್ಲರಿಗೂ ನಾನು ಕಾರ್ಯಕ್ರಮ ನಡೆಸಿಕೊಡುತ್ತೇನೆ ಎಂದಷ್ಟೇ ಗೊತ್ತಿದೆ. ಆದರೆ, ಹೇಗೆ ನಡೆಸಿಕೊಡುತ್ತೇನೆ ಎಂದು ಯಾರಿಗೂ ಗೊತ್ತಿಲ್ಲ. ಹೇಗೆ ನಿಂತಿರುತ್ತೇನೆ ಯಾರಿಗಾದರೂ ಗೊತ್ತಾ? ಇದೇ ‘ಮ್ಯಾಕ್ಸ್’ ಚಿತ್ರೀಕರಣ ಮಾಡುವಾಗ ಬೆಳಿಗ್ಗೆ ಮೂರೂವರೆಗೆ ಚಿತ್ರೀಕರಣ ಮುಗಿಸಿ, ಇಲ್ಲಿಗೆ ಬರುತ್ತಿದ್ದೆ. ನನ್ನಿಂದ ತಡವಾಗಬಾರದು ಎಂದು ಚಾರ್ಟರ್ಡ್ ಫ್ಲೈಟ್ ಬಾಡಿಗೆ ತಗೆದುಕೊಂಡಿದ್ದೆ. ಮಹಾಬಲಿಪುರಂನಿಂದ ಚೈನ್ನೈಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಬರುತ್ತಿದೆ. ಚಿತ್ರೀಕರಣ ಮುಗಿಸಿ ರಾತ್ರೋರಾತ್ರಿ ಚೆನ್ನೈಗೆ ಹೋಗಿ ಮಹಾಬಲಿಪುರಂಗೆ ಹೋಗುತ್ತಿದ್ದೆ. ಆ ಕಾರ್ಯಕ್ರಮಕ್ಕೆ ನಾನು ಸಾಕಷ್ಟು ಸಮಯ ಕೊಡುತ್ತಿದ್ದೆ. ನಾನು ಸಿನಿಮಾ ಬಗ್ಗೆ ಗಮನ ಹರಿಸಲಾ, ಕಾರ್ಯಕ್ರಮದ ಬಗ್ಗ ಗಮನ ಹರಿಸಲಾ ಅಥವಾ ನನ್ನ ಬಗ್ಗೆ ಗಮನ ಹರಿಸಲಾ?’ ಎಂದು ಅವರು ಪ್ರಶ್ನಿಸಿದ್ದರು.
ನಾವು ಜೀವನದಲ್ಲಿ ಮುನ್ನಡೆಯುತ್ತಿರಬೇಕು ಎಂದ ಸುದೀಪ್, ‘ಇಷ್ಟು ವರ್ಷ ಬಹಳ ಆಸಕ್ತಿಯಿಂದ ಕೆಲಸ ಮಾಡಿದ್ದೇನೆ, ಕಾರ್ಯಕ್ರಮಕ್ಕಾಗಿ ಸಾಕಷ್ಟು ಟೈಂ ಕೊಟ್ಟಿದ್ದೇನೆ. ಕೆಲವೊಮ್ಮೆ ನಾವು ಜೀವನದಲ್ಲಿ ಮುಂದುವರೆಯಬೇಕು. ನನಗೆ ಮಾಡುವುದಕ್ಕೆ ಆಸಕ್ತಿ ಇಲ್ಲ, ಅವರಿಗೆ ನಾನು ಬೇಡ ಎಂಬುದು ಇದ್ಯಾವುದೂ ಕಾರಣವಲ್ಲ. ಅವರು ಯಾರನ್ನಾದರೂ ಹುಡುಕಿಕೊಂಡರೆ ಒಳ್ಳೆಯದು. ಬೇರೆಯವರು ‘ಬಿಗ್ ಬಾಸ್’ ನಡೆಸಿಕೊಡುವುದನ್ನು ನೋಡೋಕೆ ನಾನು ಸಹ ಕಾಯುತ್ತಿದ್ದೇನೆ’ ಎಂದು ಹೇಳಿದ್ದರು.
ಆದರೆ, ಇದರ ನಡುವೆಯೇ ಸುದೀಪ್, ‘ಬಿಗ್ ಬಾಸ್’ ಕಾರ್ಯಕ್ರಮವನ್ನು ನಡೆಸಿಕೊಡುವುದು ಮಾತ್ರ ಖಚಿತ ಎಂಬ ಮಾತು ಕೇಳಿಬರುತ್ತಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.
ಟೀಕೆ-ಟಿಪ್ಪಣಿಗಳೆ ಮಧ್ಯೆ ‘ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ’ ಬಿಡುಗಡೆ


