5 ಕೋಟಿಗೆ 4 ಕೋಟಿ ಬಡ್ಡಿ; ಇವ ನಗರದ ‘ಕಿರಾತಕ’

ಚಂದನವನ, ಸಿನಿ ಸುದ್ದಿ

‘ಕಿರಾತಕ’ ನಿರ್ದೇಶಿಸಿ ಯಶಸ್ಸು ಕಂಡಿದ್ದ ನಿರ್ದೇಶಕ ಪ್ರದೀಪ್‍ ರಾಜ್‍ಗೆ ‘ಕಿರಾತಕ 2’ ಚಿತ್ರ ಮಾಡಬೇಕು ಎಂಬ ಕನಸಾಗಿತ್ತು. ಅದರಂತೆ ಚಿತ್ರ ಮಾಡಿದರು. ಆದರೆ, ಚಿತ್ರೀಕರಣ ಮುಗಿದು ಸ್ವಲ್ಪ ದಿನಕ್ಕೆ ಅನಾರೋಗ್ಯಕ್ಕೀಡಾಗಿ ನಿಧನರಾದರು. ಅವರ ಅನುಪಸ್ಥಿತಿಯಲ್ಲೇ ಇಂದು ‘ಕಿರಾತಕ 2’ ಚಿತ್ರ ಬಿಡುಗಡೆಯಾಗುತ್ತಿದೆ.

‘ಕಿರಾತಕ’ ಚಿತ್ರವು ಗ್ರಾಮೀಣ ಪ್ರದೇಶದಲ್ಲಿರುವ ಒಬ್ಬ ಕಿರಾತಕನ ಕಥೆಯಾದರೆ, ‘ಕಿರಾತಕ 2’ ಚಿತ್ರವು ನಗರದ ಕಿರಾತಕನೊಬ್ಬನ ಸುತ್ತ ಸುತ್ತುತ್ತದಂತೆ. ಒಬ್ಬ ಯುವಕನ ಜೀವನದಲ್ಲಿ ನಡೆಯಬಹುದಾದ ಒಂದಿಷ್ಟು ಘಟನೆಗಳನ್ನಿಟ್ಟುಕೊಂಡು ಈ ಚಿತ್ರವನ್ನು ರೂಪಿಸಲಾಗಿದೆಯಂತೆ.

‘ಕಿರಾತಕ 2’ ಚಿತ್ರವನ್ನು ಜನ ಚಿತ್ತ ಎಂಟರ್‍ಟೈನ್‍ಮೆಂಟ್‍ ಬ್ಯಾನರ್‍ನಡಿ ನಿರ್ಮಿಸಿರುವುದು ಎಂ.ಬಿ. ಬೈಂದೂರು. ಈ ಚಿತ್ರದ ಕುರಿತು ಮಾತನಾಡುವ ಅವರು, ‘ನಿರ್ದೇಶಕರು ಎಲ್ಲ ಕೆಲಸ ಮುಗಿಸಿಕೊಟ್ಟರು. ಆ ನಂತರ ಮಿಸ್‍ ಆದರು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರಮಂದಿರದವರೇ ಕೇಳಿ ತೆಗೆದುಕೊಳ್ಳುತ್ತಿದ್ದಾರೆ. ಸುಮಾರು 80 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಯಾವುದೇ ಹಕ್ಕುಗಳು ಮಾರಾಟವಾಗಿಲ್ಲ. ಬೇಡಿಕೆ ಬಂದರೆ ಮಾರಾಟ ಮಾಡುತ್ತೇನೆ. ನಾವು ಚಾನಲ್‍ಗಳ ಬಳಿ ಹೋದಾಗ, ಯಾರೂ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಸಿನಿಮಾ ಮಾಡಿಕೊಂಡು ಬನ್ನಿ, ಆಮೇಲೆ ನೋಡುವ ಎನ್ನುತ್ತಾರೆ. ಇದರಿಂದ ನಿರ್ಮಾಪಕರು ಬೆಳೆಯುವುದು ಹೇಗೆ? ಏನೋ ಸಾಧನೆ ಮಾಡಬೇದೆಂದು ಬಂದಿರುತ್ತಾರೆ. ನಿರ್ಮಾಪಕರು ಮನೆ-ಮಠ ಮಾರಿಕೊಂಡು ಹೋಗುವ ಪರಿಸ್ಥಿತಿ ಬರುತ್ತದೆ’ ಎಂದರು.

ಹೊಸಬರ ಚಿತ್ರವಾದರೂ, ಈ ಚಿತ್ರಕ್ಕೆ ಒಂಬತ್ತು ಕೋಟಿ ಖರ್ಚಾಗಿದೆಯಂತೆ. ‘ಚಿತ್ರ ಕೋವಿಡ್‍ ಸಮಯದಲ್ಲೇ ತಯಾರಾಗಿತ್ತು. ಕಾರಣಾಂತರಗಳಿಂದ ವಿಳಂಬವಾಯಿತು. ನನಗೆ ಬೇರೆ ಬ್ಯುಸಿನೆಸ್‍ ಇದೆ. ಇದನ್ನೇ ನಂಬಿಕೊಂಡಿಲ್ಲ. ವರ್ಷಕ್ಕೆ 36 ಲಕ್ಷ ವರಮಾನವಿದೆ. ಬಾಡಿಗೆಯೇ ಐದಾರು ಲಕ್ಷ ಬರುತ್ತದೆ. ದೇವರು ಕಡಿಮೆ ಮಾಡಿಲ್ಲ. ಹಾಗಾಗಿ, ಐದು ವರ್ಷವಾದರೂ ಹೆಚ್ಚು ವ್ಯತ್ಯಾಸ ಕಾಣಲಿಲ್ಲ. ಬ್ಯಾಂಕ್‍ಗೆ ಬಡ್ಡಿ ಕಟ್ಟಿದ್ದಷ್ಟೇ ಬಂತು. ಐದು ಕೋಟಿಗೆ ನಾಲ್ಕು ಕೋಟಿ ಬಡ್ಡಿಯನ್ನೇ ಕಟ್ಟಿದ್ದೇನೆ. ಆದರೂ ಇಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಪ್ರದೀಪ್‍ ರಾಜ್‍ ಚೆನ್ನಾಗಿ ಚಿತ್ರ ಮುಗಿಸಿಕೊಟ್ಟರು. ಎಲ್ಲರೂ ಒಳ್ಳೆಯ ಕೆಲಸ ಮಾಡಿದ್ದಾರೆ. ಚಿತ್ರಮಂದಿರಕ್ಕೇ ಬಂದು ಚಿತ್ರ ನೋಡಿ ಪ್ರೋತ್ಸಾಹಿಸಿ. ಈ ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ’ ಎಂದರು.

‘ಕಿರಾತಕ 2’ ಚಿತ್ರ ಶುರುವಾದಾಗ ನಾಯಕ ಯಾರು ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಬಹುಶಃ ಯಶ್‍ ಶೆಟ್ಟಿ ಇರಬಹುದು ಇರಬಹುದು ಎಂಬ ಮಾತಿತ್ತು. ಆದರೆ, ಯಶ್‍ ಶೆಟ್ಟಿ ಇದರಲ್ಲಿ ನೆಗೆಟಿವ್‍ ಪಾತ್ರ ಮಾಡಿದ್ದಾರೆ. ಆರ್.ಕೆ. ತೇಜಸ್‍ ನಾಯಕನಾಗುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರಿಗೆ ನಾಯಕಿಯಾಗಿ ಶಿವಾನಿ ನಟಿಸಿದ್ದಾರೆ. ಯಶ್‍ ಶೆಟ್ಟಿ, ರವಿಶಂಕರ್‍ ಗೌಡ, ಸುಧಾರಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರದ್ಯೋತ್ತನ್‍ ಅವರ ಸಂಗೀತ ಮತ್ತು ಸುಜಯ್‍ ಕುಮಾರ್‍ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಅದೇ ಹೀರೋ, ಅದೇ ವಿಲನ್‍; ಆದರೂ ವಿಭಿನ್ನ ಕಥೆ …

Discover more from KannadaScreens

Subscribe now to keep reading and get access to the full archive.

Continue reading