- ಚೇತನ್ ನಾಡಿಗೇರ್
ಇತ್ತೀಚೆಗೆ ಕೇರಳದಲ್ಲಿ ಒಂದು ಘಟನೆ ನಡೆಯಿತು. ಭಾರತದ ಅತೀ ದೊಡ್ಡ ಮಲ್ಟಿಪ್ಲೆಕ್ಸ್ ಚೈನ್ ಆದ PVR-INOX ಮತ್ತು ಕೇರಳ ಚಲನಚಿತ್ರ ನಿರ್ಮಾಪಕರ ಸಂಘದ ನಡುವೆ ಒಂದು ಗಲಾಟೆ ನಡೆಯಿತು. ಮಲಯಾಳಂ ಚಿತ್ರಗಳನ್ನು ಇನ್ನು ತನ್ನ ಮಲ್ಟಿಪ್ಲೆಕ್ಸ್ನಲ್ಲಿ ಪ್ರದರ್ಶಿಸುವುದಿಲ್ಲ ಎಂಬ ತೀರ್ಮಾನವನ್ನು PVR-INOX ತೆಗೆದುಕೊಂಡಿತು. ಅದಕ್ಕೆ ಕಾರಣವೂ ಇದೆ. ಚಿತ್ರಮಂದಿರಗಳಲ್ಲಿ UFO, CUBE ಮುಂತಾದ Service Providerಗಳು ಚಿತ್ರ ಪ್ರದರ್ಶನ ಮಾಡುವುದಕ್ಕೆ ನಿರ್ಮಾಪಕರು ಮತ್ತು ವಿತರಕರಿಂದು ದುಡ್ಡು ಪಡೆಯುತ್ತವೆ. ಅದಕ್ಕೆ Virtual Print Fee ಎಂದು ಕರೆಯಲಾಗುತ್ತದೆ. ಈ ಶುಲ್ಕ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿದೆ. ಕರ್ನಾಟಕದಲ್ಲೂ ಬಹಳ ದುಬಾರಿ ಶುಲ್ಕವಿದೆ ಎಂಬ ಮಾತು ಕೇಳಿಬರುತ್ತಿದೆಯಾದರೂ, ಯಾರೂ ಇದರ ವಿರುದ್ಧ ಹೆಜ್ಜೆ ಇಟ್ಟಿಲ್ಲ. ಆದರೆ, ಕೇರಳ ಚಲನಚಿತ್ರ ನಿರ್ಮಾಪಕರ ಸಂಘವು ಕೆಲವು ವರ್ಷಗಳ ಹಿಂದೆಯೇ, Producers Digital Cinema ಎಂಬ ವೇದಿಕೆಯನ್ನು ಹುಟ್ಟುಹಾಕಿತು. ಈ ವೇದಿಕೆಯ ಮೂಲಕ ನಿರ್ಮಾಪಕರಿಗೆ ಹೊರೆಯಾಗದಂತೆ ದರ ನಿಗದಿ ಮಾಡಲಾಗಿದೆ. ಆದರೆ, ಪಿವಿಆರ್-ಐನಾಕ್ಸ್ ತರಹದ ದೊಡ್ಡ ಮಲ್ಟಿಪ್ಲೆಕ್ಸ್ಗಳು ಬೇರೆಯವರ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಈ ವೇದಿಕೆಯ ಜೊತೆಗೆ ಸಂಪೂರ್ಣವಾಗಿ ಕೈಜೋಡಿಸಿರಲಿಲ್ಲ.
ಹೀಗಿರುವಾಗಲೇ, ಕೊಚ್ಚಿಯ ಫೋರಂ ಮಾಲ್ ಮತ್ತು ಕೋಜಿಕೋಡ್‍ನ ಮಿರಾಜ್ ಸಿನಿಮಾಸ್‍ನಲ್ಲಿ PVR-INOX ಹೊಸ ಮಲ್ಟಿಪ್ಲೆಕ್ಸ್ ಶುರು ಮಾಡಿದೆ. ಈ ಮಲ್ಟಿಪ್ಲೆಕ್ಸ್ನಲ್ಲಿ PDCಯಡಿ ಚಿತ್ರ ಪ್ರದರ್ಶಿಸಬೇಕು ಎಂಬುದು ನಿರ್ಮಾಪಕರ ಕೂಗಾಗಿತ್ತು. ಆದರೆ, ಪಿವಿಆರ್-ಐನಾಕ್ಸ್ ಇದಕ್ಕೆ ಒಪ್ಪಲಿಲ್ಲ. ಯಾವಾಗ ಒಮ್ಮತಕ್ಕೆ ಬರಲಾಗಲಿಲ್ಲವೋ, ಆಗ ಪಿವಿಆರ್-ಐನಾಕ್ಸ್ನವರು ತಮ್ಮ ಮಲ್ಟಿಪ್ಲೆಕ್ಸ್ಗಳಲ್ಲಿ ಮಲಯಾಳಂ ಚಿತ್ರಗಳನ್ನು ಪ್ರದರ್ಶಿಸುವುದನ್ನು ನಿಲ್ಲಿಸಿದರು. ಒಂದು ಕಡೆ ಹೊಸ ಚಿತ್ರಗಳು ಈ ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗಲಿಲ್ಲ. ಸಾಲದ್ದಕ್ಕೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ‘ಮಂಜುಮೆಲ್ ಬಾಯ್ಸ್’, ‘ಆಡುಜೀವಿತಂ’, ‘ಪ್ರೇಮಲು’ ಮುಂತಾದ ಚಿತ್ರಗಳ ಪ್ರದರ್ಶನವನ್ನು ನಿಲ್ಲಿಸಲಾಯಿತು. ಅಷ್ಟೇ ಅಲ್ಲ, ಬೇರೆ ರಾಜ್ಯಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದ ಮಲಯಾಳಂ ಚಿತ್ರಗಳನ್ನು ಸಹ ತಡೆಹಿಡಿಯಲಾಯಿತು.
ಯಾವಾಗ ಈ ಪ್ರಕರಣ ಅತಿರೇಕಕ್ಕೆ ಹೋಯಿತೋ, ಕೇರಳ ಚಲನಚಿತ್ರ ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, Film Employees Federation of Kerala (FEFKA) ಮುಂತಾದ ಸಂಘ-ಸಂಸ್ಥೆಗಳು ಜೊತೆಯಾದವು. FEFKA ಪತ್ರಿಕಾಗೋಷ್ಠಿ ಕರೆದು, ಇದು ಕೇವಲ ಚಲನಚಿತ್ರ ವ್ಯವಹಾರದ ಪ್ರಶ್ನೆ ಮಾತ್ರವಲ್ಲ, ಮಲಯಾಳಿಗಳ ಆತ್ಮಾಭಿಮಾನದ ಪ್ರಶ್ನೆ ಎಂಧು ಹೇಳಿತು. ಈ ಪತ್ರಿಕಾಗೋಷ್ಠಿಯಲ್ಲಿ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ ಚಿತ್ರಗಳ ನಿರ್ದೇಶಕರೂ ಹಾಜರಿದ್ದರು. ವಿಷು, ರಂಜಾನ್ ಹಬ್ಬದ ದಿನಗಳಲ್ಲಿ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಚಿತ್ರಗಳನ್ನು ತೆಗೆದು ಹಾಕಿದ್ದ ಕ್ರಮವನ್ನು ಉಗ್ರವಾಗಿ ಖಂಡಿಸಿದ ಮಲಯಾಳಂ ಚಿತ್ರೋದ್ಯಮ, ಮುಂದೆ ಈ ಮಲ್ಟಿಪ್ಲೆಕ್ಸ್‌ಗಳಿಗೆ ಚಿತ್ರಗಳನ್ನು ನೀಡುವುದಿಲ್ಲ ಎಂದು ಪ್ರಕಟಿಸಿತು. ಚಿತ್ರವನ್ನು ತೆಗೆದು ಹಾಕಿದ ದಿನದಿಂದ ಆದ ನಷ್ಟವನ್ನು ತುಂಬಿಕೊಡಬೇಕು ಎಂದು FEFKA ಒತ್ತಾಯಿಸಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಮನಗಂಡು, ಕೊನೆಗೆ ಲುಲು ಗ್ರೂಪ್‍ನ ಯೂಸಫ್ ಅಲಿ ಅವರ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿದಿದೆ. ಎರಡೂ ಮಲ್ಟಿಪ್ಲಕ್ಸ್ಗಳಲ್ಲಿ PDCಯಡಿ ಚಿತ್ರ ಪ್ರದರ್ಶಿಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ ಮತ್ತು 2025ರ ಜನವರಿಯಿಂದ ಬೇರೆ Service Providerಗಳೀಗೆ Virtual Print Fee ಕೊಡಬಾರದು ಎಂದು ತೀರ್ಮಾನಿಸಲಾಗಿದೆ. ಅಲ್ಲಿಗೆ ಮಲಯಾಳಂ ಚಿತ್ರರಂಗದ ಹಲವು ಸಂಘ-ಸಂಸ್ಥೆಗಳ ಒಗ್ಗಟ್ಟಿನಿಂದ ಪ್ರಕರಣ ಸುಖಾಂತ್ಯವಾಗಿದೆ
ಈಗ್ಯಾಕೆ ಈ ವಿಷಯವೆಂದರೆ, ಎಲ್ಲಾ ಚಿತ್ರರಂಗಗಳಲ್ಲೂ ಅದರದ್ದೇ ಆದ ಸಮಸ್ಯೆಗಳಿವೆ ಮತ್ತು ಆ ಸಮಸ್ಯೆಗಳನ್ನು ಅಲ್ಲಿನ ಸಂಘ-ಸಂಸ್ಥೆಗಳು ಮುಂದೆ ನಿಂತು ಬಗೆಹರಿಸಿಕೊಳ್ಳುತ್ತಿವೆ. ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರರಂಗವೊಂದನ್ನು ಬಿಟ್ಟರೆ ಮಿಕ್ಕಂತೆ ಮೂರು ಚಿತ್ರರಂಗಗಳು ಬಹಳ ಸದೃಢವಾಗಿವೆ. ಅದಕ್ಕೆ ಕಾರಣ, ಅಲ್ಲಿನ ಸಂಘ-ಸಂಸ್ಥೆಗಳು. ಕರ್ನಾಟಕದಲ್ಲಿ ಮಾತ್ರ ವೃತ್ತಿಪರತೆ, ಬದ್ಧತೆ ಮಾಯವಾಗಿದೆ. ಆ ವಿಷಯದಲ್ಲಿ ಬರೀ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೊಂದೇ ಅಲ್ಲ, ಕನ್ನಡ ಚಿತ್ರರಂಗದ ಬಹುತೇಕ ಸಂಘ-ಸಂಸ್ಥೆಗಳು ಸಕ್ರಿಯವಾಗಿಲ್ಲ. ಸಕ್ರಿಯವಾಗಿದ್ದರೂ ಅದಕ್ಕೊಂದು ಗಟ್ಟಿ ಧ್ವನಿ ಇಲ್ಲ. ಯಾವುದಕ್ಕೂ ಒಂದು ಘನವಾದ ನಾಯಕತ್ವವಿಲ್ಲ. ಮೇಲಾಗಿ ಈ ಯಾವ ಸಂಘ-ಸಂಸ್ಥೆಗಳ ನಡುವೆಯೂ ಹೊಂದಾಣಿಕೆಯೇ ಇಲ್ಲ. ಹಾಗಾಗಿ, ಯಾವ ಸಮಸ್ಯೆಯನ್ನೂ ಬಗೆಹರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ವಿಚಿತ್ರವೆಂದರೆ, ಅರ್ಹರು, ಜನಪ್ರಿಯರು, ಯಾವುದೇ ವಿಭಾಗದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದವರು ಇಂಥ ಸಂಘ-ಸಂಸ್ಥೆಗಳ ಹತ್ತಿರ ಕೂಡಾ ಸುಳಿಯುವುದಿಲ್ಲ. ಅಷ್ಟೊಂದು ಚಿತ್ರಗಳನ್ನು ನಿರ್ಮಿಸಿದ ದ್ವಾರಕೀಶ್, ಪಾರ್ವತಮ್ಮ ರಾಜಕುಮಾರ್, ರಾಮು ಮುಂತಾದವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಥವಾ ನಿರ್ಮಾಪಕರ ಸಂಘದಲ್ಲಿ ಕೆಲಸ ಮಾಡಿದ್ದು ಎಲ್ಲಾದರೂ ಕೇಳಿದ್ದೀರಾ? ಯೋಗರಾಜ್ ಭಟ್, ಎಸ್. ನಾರಾಯಣ್, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರು ನಿರ್ದೇಶಕರ ಸಂಘದಲ್ಲಿ ಗುರುತಿಸಿಕೊಂಡಿದ್ದು ನೋಡಿದ್ದೀರಾ? ಖಂಡಿತಾ ಇಲ್ಲ. ಅವರು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಅವರಿಗೆ ಇಲ್ಲಿನ ರಾಜಕೀಯ ಆಗಿಬರುವುದಿಲ್ಲ. ಈ ಸಂಘ-ಸಂಸ್ಥೆಗಳಲ್ಲಿರುವ ಬಹಳಷ್ಟು ಜನ ಬೇರೆ ಕೆಲಸವಿಲ್ಲದವರು ಎಂಬಂತಾಗಿಬಿಟ್ಟಿದೆ. ಒಂದೋ, ಎರಡೋ ಚಿತ್ರ ಮಾಡಿದವರು, ಹೇರಳವಾಗಿ ಸಮಯವಿರುವವರು, ಕೆಲಸ ಇಲ್ಲದವರು ಮಾತ್ರ ಇಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತವೆ. ಅವರಿಗೆ ಸಮಸ್ಯೆಯ ಅರಿವೂ ಇರುವುದಿಲ್ಲ, ದೂರದೃಷ್ಟಿಯೂ ಇಲ್ಲ, ಸಂಘಟಿಸುವ ಶಕ್ತಿಯೂ ಇಲ್ಲ.
ಹಾಗಾಗಿಯೇ, ಚಿತ್ರರಂಗ ಇವತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದಿಷ್ಟು ಕೆಲಸಗಳಾಗಬೇಕಿವೆ. ಒಂದೋ ಚಿತ್ರರಂಗದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇರಬೇಕು, ಇಲ್ಲ ಚಿತ್ರರಂಗದವರಿಗಾದರೂ ಇರಬೇಕು. ಹಾಗಾದರೆ, ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಬೇರೆ ರಾಜ್ಯಗಳಲ್ಲಿ ಎರಡೂ ಕಡೆ ಆ ಕಾಳಜಿ ಕಾಣಿಸುತ್ತಿದೆ. ಏನೂ ಇಲ್ಲವೆಂದರೆ ಕರ್ನಾಟಕದಲ್ಲಿ ಮಾತ್ರ. ಕನ್ನಡ ಚಿತ್ರರಂಗವನ್ನು ಉಳಿಸಬೇಕು ಎಂಬ ಆಸಕ್ತಿ ಸರ್ಕಾರಕ್ಕೂ ಇಲ್ಲ. ಹೋಗಲಿ, ಉಳಿಸಿಕೊಳ್ಳಬೇಕು ಎಂಬ ಹಠ ಚಿತ್ರರಂಗದವರಿಗೂ ಇಲ್ಲ.
ಕನ್ನಡ ಚಿತ್ರರಂಗ ಈಗ ಎದುರಿಸುತ್ತಿರುವ ಸಮಸ್ಯೆ ಹೊಸದೇನಲ್ಲ. ಬೇರೆ ಚಿತ್ರರಂಗಗಳು ಸಹ ಎದುರಿಸಿವೆ. ಉದಾಹರಣೆಗೆ, ಆಂಧ್ರದಲ್ಲೂ ಕರ್ನಾಟಕದ ತರಹವೇ ಒಂದೊಂದು ಚಿತ್ರಮಂದಿರದಲ್ಲೂ ಒಂದೊಂದು ದರವಿತ್ತು. ಇಷ್ಟ ಬಂದ ಹಾಗೆ ಟಿಕೆಟ್ ದರಗಳು ಬದಲಾಗುತ್ತಿದ್ದವು. ದೊಡ್ಡ ಚಿತ್ರಕ್ಕೊಂದು ದರ, ಚಿಕ್ಕ ಚಿತ್ರಕ್ಕೊಂದು ದರವಿತ್ತು. ಇದರಿಂದ ನಿರ್ಮಾಪಕರು ಮತ್ತು ವಿತರಕರಿಗೆ ಲಾಭವಾಗುತ್ತಿದ್ದರಿಂದ ನಟರೂ ದರ ಹೆಚ್ಚಳಿಕೆಯ ಪರವಾಗಿದ್ದರು. ಆದರೆ, ಹೀಗೆ ಮಾಡುವುದರಿಂದ ಸಾಮಾನ್ಯ ಪ್ರೇಕ್ಷಕರಿಗೆ ಹೊರೆಯಾಗುತ್ತದೆ ಎಂದು ಆಂಧ‍್ರ ಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇದಕ್ಕೆ ಕಡಿವಾಣ ಹಾಕಿದರು. ಟಿಕೆಟ್ ದರ ಇಷ್ಟ ಬಂದಂತೆ ಏರಿಸುವಂತಿಲ್ಲ ಎಂದು ನಿಯಮ ಮಾಡಿದರು. ಈ ಸಂಬಂಧ ಚಿರಂಜೀವಿ, ಪ್ರಭಾಸ್, ಮಹೇಶ್ ಬಾಬು, ರಾಜಮೌಳಿ ಮುಂತಾದವರು ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಆದರೆ, ಮುಖ್ಯಮಂತ್ರಿಗಳು ಮಾತ್ರ ಸಿನಿಮಾ ಎಲ್ಲರಿಗೂ ಸಿಗಬೇಕೆಂಬ ಕಾರಣಕ್ಕೆ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಲಿಲ್ಲ. ಬೇಕಾದರೆ ದೊಡ್ಡ ಬಜೆಟ್ ಚಿತ್ರಗಳಾದಾಗ, ಟಿಕೆಟ್ ದರ ಹೆಚ್ಚಿಸೋಣ, ಮಿಕ್ಕಂತ ಇಡೀ ರಾಜ್ಯದಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪ ದರ ಇರಲಿ ಎಂಬ ತೀರ್ಮಾನಕ್ಕೆ ಬಂದರು. ಇಂಥದ್ದೊಂದು ಬದ್ಧತೆ, ಕರ್ನಾಟಕದ ಯಾವುದೇ ಸರ್ಕಾರ ಇದುವರೆಗೂ ಪ್ರದರ್ಶಿಸಿಲ್ಲ.
ಕರ್ನಾಟಕದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೊಳಗಾದ ವಲಯವೆಂದರೆ ಅದು ಚಿತ್ರರಂಗ. ಹಲವು ವರ್ಷಗಳಿಂದ ಚಿತ್ರರಂಗ ಹಲವು ಬೇಡಿಕೆಗಳನ್ನು ಇಡುತ್ತಿದೆ. ಆದರೆ, ಯಾವುದೇ ಸರ್ಕಾರ ಬಂದರೂ, ಚಿತ್ರರಂಗಕ್ಕೆ ದೊಡ್ಡ ಪ್ರಯೋಜನವಾಗಿಲ್ಲ. ಹಲವು ಹಿಂದಿನ ಸಮಸ್ಯೆಗಳ ಜೊತೆಗೆ, ಈಗ ಇನ್ನಷ್ಟು ಹೊಸ ಸಮಸ್ಯೆಗಳು ಹುಟ್ಟಿಕೊಂಡಿವೆ. ಆದರೆ, ಯಾವುದೇ ಸರ್ಕಾರ ಬಂದರೂ ಇದುವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈ ಬಾರಿ ಬಜೆಟ್ ಮಂಡನೆಗೂ ಮುನ್ನ ಎರಡೆರೆಡು ನಿಯೋಗಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದವು. ಚಿತ್ರರಂಗ ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಗಮನಸೆಳೆದಿದ್ದವು. ಆದರೆ, ಈ ಬಾರಿ ಸಿಕ್ಕದ್ದೇನು ಎಂದರೆ ಅದೇ ಆಶ್ವಾಸನೆಯೇ ಹೊರತು ಮಿಕ್ಕಂತೆ ಏನೂ ಇಲ್ಲ.
ಇಂಥ ಸಮಯದಲ್ಲಿ ಚಿತ್ರರಂಗದವರು ಎಚ್ಚೆತ್ತುಕೊಳ್ಳಬೇಕು, ಒಗ್ಗಟ್ಟಾಗಬೇಕು. ತಮ್ಮ ಹಕ್ಕಿಗಾಗಿ ಶ್ರಮ ಹಾಕಬೇಕು. ಆದರೆ, ಕನ್ನಡ ಚಿತ್ರರಂಗದಲ್ಲಿ ಅದು ಸಾಧ್ಯವಾ?


