ಸೋಲು, ಗೆಲುವು ಮೀರಿ ಕೆಲಸ ಮಾಡುತ್ತಿರಬೇಕು: ಯಶ್‍

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

‘ರಾಮಾಯಣ’ ಚಿತ್ರವು ನವೆಂಬರ್ 05ರಂದು ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು, ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದರ ಜೊತಗೆ ಚಿತ್ರದ ಪ್ರಚಾರ ಕೆಲಸಗಳನ್ನು ಚಿತ್ರತಂಡ ಬೆಂಗಳೂರಿಂದ ಆರಂಭಿಸಿದೆ. ನಗರದ ಒರಾಯನ್ ಮಾಲ್ ನಲ್ಲಿ ಇಡೀ ‘ರಾಮಾಯಣ’ ಚಿತ್ರತಂಡ ಭಾಗಿಯಾಗಿ ಚಿತ್ರದ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದೆ. ನಾಯಕನಟ ರಣಬೀರ್ ಕಪೂರ್, ರಾವಣ ಪಾತ್ರ ಮಾಡಿರುವ ಯಶ್, ನಾಯಕಿ ಸಾಯಿ ಪಲ್ಲವಿ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಯಶ್‍, ‘ನಾನ್ಯಾಕೆ ರಾವಣನ ಪಾತ್ರ ಮಾಡಿದೆ ಎಂಬ ಬಹಳಷ್ಟು ಜನ ಕೇಳಿದ್ದಾರೆ. ಒಂದು ವಿಷಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮಗೆ ಸಿಕ್ಕ ಅವಕಾಶದ ಜೊತೆಗೆ ಉದ್ಯಮಕ್ಕೂ ಏನಾದರೂ ಮಾಡಬೇಕಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ‘ಪ್ರೇಮದ ಊರಲಿ’ ಎಂಬ ಚಿತ್ರ ದೊಡ್ಡ ಹಿಟ್‍ ಆಗಿದೆ. ಚಿತ್ರರಂಗಕ್ಕೆ ಎರಡೂ ಬೇಕು. ಒಂದು ಹೊರಗಡೆ ಹೋಗಿ ಎಲ್ಲೆಲ್ಲಿ ಬೇಲಿಗಳಿದೆಯೋ, ಗೋಡೆಗಳಿವೆಯೋ ಅದನ್ನು ಒಡೆಯುವ ಕೆಲಸ ಮಾಡಬೇಕು. ಅದರ ಜೊತೆಗೆ ನಮ್ಮ ಅಡಿಪಾಯವನ್ನೂ ಗಟ್ಟಿ ಮಾಡಿಕೊಳ್ಲುವ ಕೆಲಸವನ್ನು ಮಾಡಬೇಕು. ಹೊಸ ಪ್ರತಿಭೆಗಳು, ನಿರ್ದೇಶಕರು, ನಟರು ಬರಬೇಕು. ಚಿಕ್ಕ ಪ್ರಯತ್ನಗಳಾದರೂ ಗೆಲ್ಲಬೇಕು. ಕನ್ನಡಿಗರು ಈ ಮಟ್ಟದ ಯಶಸ್ಸು ಕೊಟ್ಟಿರುವುದು ನಮಗೆ ಧೈರ್ಯ ಮತ್ತು ಉತ್ಸಾಹ ಕೊಡುತ್ತದೆ’ ಎಂದರು.

ಇತ್ತೀಚೆಗೆ ಬಿಡುಗಡೆಯಾದ ‘ಟಾಕ್ಸಿಕ್‍’ ಚಿತ್ರದ ಹೆಸರು ಹೇಳದೆಯೇ ಮಾತನಾಡಿದ ಯಶ್‍, ‘ಜನ ಯಾವ ಮಟ್ಟಿಗೆ ಪ್ರೀತಿ ತೋರಿಸಿದರೆಂದು ನಾನೂ ಗಮನಿಸಿದೆ. ಎಷ್ಟರ ಮಟ್ಟಿಗೆ ಹೊಡೆದಾಡಿದಿರಿ, ಅಷ್ಟಾದರೂ ಆ ಚಿತ್ರವನ್ನು ನೋಡಿದಿರಿ ಎಂದು ಗೊತ್ತಿದೆ. ಆ ಋಣವನ್ನು ನಾನು ತೀರಿಸುವುದಕ್ಕೆ ಸಾಧ್ಯವಿಲ್ಲ. ಜನ ಕೊಟ್ಟಿರುವ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸುತ್ತೇನೆ. ಈ ಚಿತ್ರ ವಿಶ್ವದಾದ್ಯಂತ ದೊಡ್ಡ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ಭಾರತದ ಪರವಾಗಿ ನಾವು ಹೊರಟಿದ್ದೇವೆ. ಕನ್ನಡಿಗರ ಪರವಾಗಿ ನಾನು ನಿಂತಿದ್ದೇನೆ’ ಎಂದರು.

ಇಂತಹ ಕಥೆಗಳನ್ನು ಇಡೀ ಭಾರತೀಯ ಚಿತ್ರೋದ್ಯಮ ಒಟ್ಟಾಗಿ ಮಾಡಬೇಕಾಗುತ್ತದೆ ಎಂದ ಯಶ್, ‘ಈಗ ಕನ್ನಡಿಗನಾದ ನನಗೂ ಈ ಚಿತ್ರದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ನಾವು ಯಾರೂ ಕೂಡ ಈ ಸಿನಿಮಾವನ್ನು ಕೇವಲ ಒಂದು ಸಿನಿಮಾವಾಗಿ ನೋಡಿಲ್ಲ. ಬದಲಾಗಿ ಭಕ್ತಿಯಿಂದ ಶ್ರದ್ದೆಯಿಂದ ಕೆಲಸ ಮಾಡಿದ್ದೇವೆ. ನಮ್ಮ ಕಥೆಯನ್ನು ನಮ್ಮ ದೇಶದ ಕಥೆಯನ್ನು ಜಗತ್ತಿಗೆ ಹೇಳಬೇಕೆಂಬ ಹಂಬಲದೊಂದಿಗೆ ಈ ಸಿನಿಮಾ ಮಾಡಿದ್ದೇವೆ’ ಎಂದರು.

ಕೆಲವೊಮ್ಮೆ ಗಡಿ ದಾಟಿ, ಸೋಲು-ಗೆಲುವುಗಳನ್ನು ಮೀರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಎಂದ ಯಶ್‍, ‘ಆ ಪ್ರಯತ್ನಗಳು ಇತಿಹಾಸದಲ್ಲಿ ಮೈಲಿಗಲ್ಲಾಗುತ್ತವೆ. ಕೆಲವೊಮ್ಮೆ ಮೇಲೆ ಹತ್ತುವವರಿಗೆ ಅದು ಮೆಟ್ಟಿಲು ಕೂಡ ಆಗುತ್ತವೆ. ಈ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕು. ನಾವು ಜಗತ್ತು ಗೆಲ್ಲಬೇಕಾದರೆ ಎಲ್ಲರೂ ಒಟ್ಟಾಗಿ ಪ್ರೋತ್ಸಾಹಿಸಬೇಕು ಕೆಲವೊಮ್ಮೆ ನಾನು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿದ್ದೇನೆ. ಆ ಸಿನಿಮಾದ ಗ್ರಾಫಿಕ್ ಸರಿಯಿಲ್ಲ, ಆ ಸಿನಿಮಾ ನಟ ಸರಿ ಇಲ್ಲ ಎಂಬ ಟೀಕೆಗಳು ಬರುತ್ತವೆ. ಅದರ ಬದಲು ಒಳ್ಳೆಯ ಸಿನಿಮಾಕ್ಕೆ ಎಲ್ಲರೂ ಒಟ್ಟಾಗಿ ಪ್ರೋತ್ಸಾಹಿಸಿದಾಗ ನಾವು ಜಗತ್ತು ಗೆಲ್ಲಲು ಸಾಧ್ಯ. ಸೋಲು, ಗೆಲುವು ಏನೇ ಇದ್ದರೂ ಹೊಸತನದಿಂದ ಕೆಲಸ ಮಾಡುತ್ತಿರಲೇಬೇಕು. ಆಗ ಅದು ಇನ್ನೊಂದಷ್ಟು ಮಂದಿಗೆ ಪ್ರೋತ್ಸಾಹ ನೀಡುತ್ತದೆ’ ಎಂದರು.

ರಾಷ್ಟ್ರ ಪ್ರಶಸ್ತಿ ಪಡೆದ ಪುಸ್ತಕದ ಸುತ್ತ ಹಲವು ಅನುಮಾನಗಳು!

Discover more from KannadaScreens

Subscribe now to keep reading and get access to the full archive.

Continue reading