ಚಿತ್ರ: ಪೀಟರ್
ನಿರ್ಮಾಣ: ರವಿ ಹೀರೆಮಠ್ ಮತ್ತು ರಾಕೇಶ್ ಹೆಗಡೆ
ನಿರ್ದೇಶನ: ಸುಕೇಶ್ ಶೆಟ್ಟಿ
ತಾರಾಗಣ: ರಾಜೇಶ್ ಧ್ರುವ, ಜಾಹ್ನವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ಮುಂತಾದವರು
ಭಯದಿಂದ ದಿಡಗ್ಗನೆ ಎದ್ದು ಕುಳಿತುಕೊಳ್ಳುತ್ತಾನೆ ಪೀಟರ್. ಆ ನಂತರ ತಾನು ಕಂಡಿದ್ದು ಕನಸು ಎಂದು ಅವನಿಗೆ ಸ್ಪಷ್ಟವಾಗುತ್ತದೆ. ಆ ತರಹದ ಕನಸನ್ನು ಒಂದು ವರ್ಷದಿಂದ ಅವನು ಪ್ರತೀ ರಾತ್ರಿ ಕಾಣುತ್ತಲೇ ಇರುತ್ತಾನೆ, ಬೆಚ್ಚಿ ಏಳುತ್ತಲೇ ಇರುತ್ತಾನೆ. ಹೀಗೆ ಒಂದು ವರ್ಷ ಭಯದಿಂದಲೇ ಕಾಸರಗೋಡಿನಲ್ಲಿ ಕಳೆಯುವ ಪೀಟರ್, ತನ್ನ ಹುಟ್ಟೂರಿಗೆ ವಾಪಸ್ಸು ಹೋಗುವುದಕ್ಕೆ ತಯಾರಾಗುತ್ತಾನೆ. ವಾಪಸ್ಸಾದ ನಂತರ ಅವನ ಜೀವನದಲ್ಲಿ ನಡೆಯುವ ಕೆಲವು ಘಟನೆಗಳಿಂದ ನಿಜಕ್ಕೂ ತಾನೇಕೆ ಊರು ಬಿಡಬೇಕಾಯಿತು ಎಂಬುದು ಅವನಿಗೆ ಸ್ಪಷ್ಟವಾಗುತ್ತಾ ಹೋಗುತ್ತದೆ. ಇಷ್ಟಕ್ಕೂ ಪೀಟರ್ ಊರು ಬಿಟ್ಟಿದ್ದು ಯಾಕೆ? ಎಂಬ ರಹಸ್ಯ ಗೊತ್ತಾಗಬೇಕಿದ್ದರೆ ‘ಪೀಟರ್’ ನೋಡಬೇಕು.
ಈ ಹಿಂದೆ ‘ದೂರದರ್ಶನ’ ಚಿತ್ರದಲ್ಲಿ ಸಣ್ಣ ಹಳ್ಳಿಯೊಂದಕ್ಕೆ ಟಿವಿ ಬಂದರೆ, ಅಲ್ಲಿ ಏನೆಲ್ಲಾ ಆಗುತ್ತದೆ ಎಂದು ತೋರಿಸಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ, ಈ ಬಾರಿ ಚೆಂಡೆ ಮೇಳದ ಹಿನ್ನೆಲೆಯ ಕಥೆಯನ್ನು ಮಡಿಕೇರಿಯ ಸುಂದರ ಪರಿಸರದಲ್ಲಿ ಹಿಡಿದಿಟ್ಟಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಚಿತ್ರವಾಗಿದ್ದು, ಸ್ನೇಹ, ಪ್ರೀತಿ, ತಾಯಿ-ಮಗನ ಸೆಂಟಿಮೆಂಟ್, ರೋಚಕತೆ ಎಲ್ಲವನ್ನೂ ಬೆರೆಸಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಚಿತ್ರಗಳಲ್ಲಿ ಒಂದಿದ್ದರೆ ಇನ್ನೊಂದು ಇರುವುದಿಲ್ಲ. ಆದರೆ, ‘ಪೀಟರ್’ ಚಿತ್ರದಲ್ಲಿ ಒಳ್ಳೆಯ ಅಭಿನಯ, ಹಾಡುಗಳು, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ರೋಚಕತೆ, ಎಲ್ಲವೂ ಇದೆ. ಇದೆಲ್ಲವೂ ಇರುವುದರ ಹೊರತಾಗಿಯೂ ಏನೋ ಮಿಸ್ ಆಗಿದೆ. ಚಿತ್ರ ಒಂದೊಳ್ಳೆಯ ಕುತೂಹಲದಿಂದ ಪ್ರಾರಂಭವಾಗುತ್ತದಾದರೂ, ನಂತರ ವೇಗ ಕಳೆದುಕೊಳ್ಳುತ್ತದೆ. ವಿಭಿನ್ನ ಪರಿಸರ, ಒಂದಿಷ್ಟು ಪಾತ್ರಗಳು, ಕುತೂಹಲ ಹೆಚ್ಚಿಸುವ ತಿರುವುಗಳು … ಎಲ್ಲವೂ ಇದ್ದರೂ ಪ್ರೇಕ್ಷಕರನ್ನು ತಟ್ಟದೆ ತನ್ನ ಪಾಡಿಗೆ ಸಾಗುತ್ತದೆ. ತಾಯಿ-ಸೆಂಟಿಮೆಂಟ್ ಚಿತ್ರಗಳು ಸಾಕಷ್ಟು ಬಂದಿವೆಯಾದರೂ, ಇಲ್ಲಿನ ಆಯಾಮ ಬೇರೆಯದೇ ಇದೆ. ಆದರೆ, ಅದ್ಯಾವುದೂ ಗಾಢವಾಗಿ ತಟ್ಟುವುದಿಲ್ಲ. ಇಂಥದ್ದೊಂದು ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಬೇಕಾದ ಓಘ ಮತ್ತು ವೇಗ ಎರಡೂ ಮಿಸ್ ಆಗಿವೆ. ಹಾಗಾಗಿಯೇ 141 ನಿಮಿಷಗಳ ಚಿತ್ರ ಸುಧೀರ್ಘ ಎನಿಸುತ್ತದೆ. ಬಹುಶಃ ಚಿತ್ರವನ್ನು ಇನ್ನಷ್ಟು ಚುರುಕಾಗಿಸಿದ್ದರೆ, ‘ಪೀಟರ್’ ಬೇರೆಯದೇ ಸ್ತರದಲ್ಲಿ ನಿಲ್ಲುತ್ತಿದ್ದ.
ʻಪೀಟರ್ʼ ಆಗಿ ನಟಿಸಿರುವ ರಾಜೇಶ್ ಧ್ರುವ ಪಾತ್ರಕ್ಕೆ ಎರಡು ಆಯಾಮಗಳಿವೆ. ಎರಡೂ ಶೇಡ್‍ಗಳನ್ನು ಚೆನ್ನಾಗಿ ಅಭಿವ್ಯಕ್ತಗೊಳಿಸಿದ್ದಾರೆ ರಾಜೇಶ್. ಎರಡು ಶೇಡ್‍ಗಳಲ್ಲಿ ಬರೀ ಅವರ ಹೇರ್‍ಸ್ಟೈಲ್ ಅಷ್ಟೇ ಬದಲಾಗಿಲ್ಲ, ಎರಡೂ ಪರಿಸ್ಥಿತಿಗಳಿಗೆ ತಕ್ಕುದಾದ ಅಭಿನಯ ಮಾಡಿದ್ದಾರೆ. ಅವರ ತಾಯಿಯಾಗಿ ಕಾಣಿಸಿಕೊಂಡಿರುವ ಪ್ರತಿಮಾ ನಾಯಕ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪಕ್ಕದ ಮನೆಯ ರಾಧಾ ಟೀಚರ್ ಆಗಿ ಜಾನ್ವಿ ರಾಯಲ, ಸ್ನೇಹಿತನಾಗಿ ರಾಮ್ ನಾಡಗೌಡ, ಪ್ರೇಮಿಯಾಗಿ ರವೀಕ್ಷಾ ಶೆಟ್ಟಿ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಡೀನಾ ಪೂಜಾರಿ ಕೆಲವು ದೃಶ್ಯಗಳಲ್ಲಿ ಭಯಹುಟ್ಟಿಸುತ್ತಾರೆ.
ಚಿತ್ತದ ಪ್ಲಸ್‌ಗಳೆಂದರೆ ಅದು ರಿತ್ವಿಕ್ ಮುರಳೀಧರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಹಾಗೂ ಗುರುಪ್ರಸಾದ್ ನಾರ್ನಾಡ್ ಛಾಯಾಗ್ರಹಣ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಿದೆ. ರವಿ ಹೀರೆಮಠ್ ತಮ್ಮ ಸೌಂಡ್ ಡಿಸೈನ್‍ನಿಂದ ಗಮನಸೆಳೆಯುತ್ತಾರೆ.
ಪ್ರತಿಕ್ರಿಯೆ ಚೆನ್ನಾಗಿದೆ, ಪ್ರದರ್ಶನ ಸಿಗುತ್ತಿಲ್ಲ; ‘ನಾನು ಕರುಣಾಕರ’ ಚಿತ್ರತಂಡದವರ ಬೇಸರ


