ಚಿತ್ರ: ಅಪರಿಚಿತೆ
ನಿರ್ಮಾಣ: ಸುರೇಶ್ ಕುಮಾರ್
ನಿರ್ದೇಶನ: ವಿಶ್ವನಾಥ್
ತಾರಾಗಣ: ಗೀತಪ್ರಿಯ, ಶ್ರೀನಾಥ್, ರೋಹಿತ್ ಶ್ರೀನಾಥ್, ನಿಖಿತಾ, ಸಿಂಧೂ ಲೋಕನಾಥ್ ಮುಂತಾದವರು
ಕಾಡಳ್ಳಿ ಎಂಬ ಹಳ್ಳಿಯ ಪ್ರಾಥಮಿಕ ಶಾಲೆಗೆ ಹೊಸ ಟೀಚರ್ ಬರುತ್ತಾರೆ. ಆಕೆ ಬರುವಷ್ಟರಲ್ಲಿ ಆಗಲೇ ಅರ್ಧ ವರ್ಷ ಮುಗಿದಿರುತ್ತದೆ. ಶಾಲೆಯಲ್ಲಿ ಪಾಠ ಕಲಿಯುವುದಕ್ಕೆ ಇರುವುದು ಎಂಟೇ ಮಕ್ಕಳು. ಅದರಲ್ಲೂ ಹುಡುಗರು. ಆ ಸುತ್ತಮುತ್ತಲ ಹಳ್ಳಿಗಳಲ್ಲಿ ಹೆಣ್ಣುಮಕ್ಕಳೇ ಇಲ್ಲ. ಅಷ್ಟೇ ಅಲ್ಲ, ಎಂಟು ವರ್ಷಗಳಿಂದ ಅಲ್ಲಿ ಹೆಣ್ಣು ಮಕ್ಕಳೇ ಹುಟ್ಟಿಲ್ಲ ಎಂಬ ಆಘಾತಕಾರಿ ವಿಷಯವೊಂದು ಟೀಚರ್‍ಗೆ ಗೊತ್ತಾಗುತ್ತದೆ. ಅದ್ಯಾಕೆ ಎಂದು ಗೊತ್ತಾಗಬೇಕಿದ್ದರೆ ‘ಅಪರಚಿತೆ’ಯ ಬೆನ್ನತ್ತಬೇಕು.
ಕಳೆದ ವರ್ಷ ಬಿಡುಗಡೆಯಾದ ‘ತಾಯವ್ವ’ ಎಂಬ ಸಿನಿಮಾದಲ್ಲಿ ನಟಿಸಿದ್ದ ಗೀತಪ್ರಿಯ, ಇದೀಗ ‘ಅಪರಿಚಿತೆ’ಯಾಗಿ ಬಂದಿದ್ದಾರೆ. ಆ ಚಿತ್ರದಲ್ಲೂ ಅವರು ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಹೋರಾಟ ನಡೆಸಿದ್ದರು. ಅದನ್ನು ಇಲ್ಲೂ ಮುಂದುವರೆಸಿದ್ದಾರೆ. ಆ ಚಿತ್ರದಲ್ಲಿ ಅವರು ಸೂಲಗಿತ್ತಿಯಾಗಿ ನಟಿಸಿದರೆ, ಇಲ್ಲಿ ಅವರು ಟೀಚರ್ ಪಾತ್ರ ಮಾಡಿದ್ದಾರೆ. ವಿಷಯ ಅದೇ ಆದರೂ, ದೃಷ್ಟಿಕೋನಗಳು ಬೇರೆಬೇರೆ. ಆ ಮಟ್ಟಿಗೆ ಗೀತಪ್ರಿಯಾ ಅವರ ಉತ್ಸಾಹ ಮತ್ತು ಸಾಮಾಜಿಕ ಕಳಕಳಿಯನ್ನು ಮೆಚ್ಚಬೇಕು.
‘ಅಪರಿಚಿತೆ’ ಒಂದರ್ಥದಲ್ಲಿ ಈ ಹಿಂದೆ ಬರುತ್ತಿದ್ದ ಸಾಕ್ಷರತಾ ಆಂದೋಲನದ ಕುರಿತಾದ ಸಾಕ್ಷ್ಯಚಿತ್ರಗಳ ಮುಂದುವರೆದ ಭಾಗ ಎಂದು ಬೇಕಾದರೂ ಹೇಳಬಹುದು. ಒಂದು ಸಾಕ್ಷ್ಯಚಿತ್ರಕ್ಕೆ ಬೇಕಾದ ನಿರೂಪಣೆ, ಶೈಲಿ, ವೇಗ ಈ ಚಿತ್ರದಲ್ಲೂ ಇದೆ. ಅದೇ ಕಥೆಗೆ ಒಂದಿಷ್ಟು ರೋಚಕತೆ ಮತ್ತು ಕೌತುಕತೆಯನ್ನು ತುಂಬಿ ಕಮರ್ಷಿಯಲ್ ಆಗಿಸುವ ಪ್ರಯತ್ನ ಮಾಡಲಾಗಿದೆಯಾದರೂ, ಅದು ಸಾಧ್ಯವಾಗಿಲ್ಲ.
ಗೀತಪ್ರಿಯಾ ಅವರನ್ನೇ ಗಮನದಲ್ಲಿಟ್ಟುಕೊಂಡು ಕಥೆ-ಚಿತ್ರಕಥೆ ಹಣೆದಿರುವುದರಿಂದ, ಅವರು ಚಿತ್ರವನ್ನು ಸಂಪೂರ್ಣವಾಗಿ ಆವರಿಸಿದ್ದಾರೆ. ‘ತಾಯವ್ವ’ ಮತ್ತು ‘ಅಪರಿಚಿತೆ’ಗೆ ಹೋಲಿಸಿದರೆ ಅವರ ಅಭಿನಯದಲ್ಲಿ ಅಷ್ಟೇನೂ ಬದಲಾವಣೆಗಳಿಲ್ಲ. ಅವರ ಜೊತೆಗೆ ಸಿಂಧೂ ಲೋಕನಾಥ್, ಆರ್.ಜೆ. ನಿಖಿತಾ, ಹಿರಿಯ ನಟ ಶ್ರೀನಾಥ್ ಹಾಗೂ ಶ್ರೀನಾಥ್ ಅವರ ಮಗ ರೋಹಿತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲರೂ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ಬರವಣಿಗೆ, ನಿರೂಪಣೆಯ ಜೊತೆಗೆ ತಾಂತ್ರಿಕ ವಿಭಾಗ ಇನ್ನಷ್ಟು ಬಲಗೊಳ್ಳಬೇಕಿತ್ತು. ಅನಿಲ್ ಅವರ ಹಿನ್ನೆಲೆ ಸಂಗೀತ ಚಿತ್ರದ ಮೈನಸ್‍ಗಳಲ್ಲೊಂದು. ಅಬ್ಬರದ ಹಿನ್ನೆಲೆ ಸಂಗೀತವು ಚಿತ್ರಕ್ಕೆ ಪೂರಕವಾಗುವುದಕ್ಕಿಂತ ಮಾರಕವಾಗುವುದೇ ಹೆಚ್ಚು.
‘ಅಪರಿಚಿತೆ’ ಒಂದು ಸಾಮಾಜಿಕ ಕಳಕಳಿ ಬೀರುವ ಚಿತ್ರ. ಅಂತಹ ಚಿತ್ರಗಳನ್ನು ಇಷ್ಟಪಡುವವರು ಚಿತ್ರ ನೋಡಬಹುದು.


