‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ‘ಹೇ ಹೂ ಆರ್ ಯೂ …’ ಹಾಡು, ‘ಶಾಂತಿ ಕ್ರಾಂತಿ’ ಚಿತ್ರದ ‘ಮಧ್ಯರಾತ್ರಿಲೀ ಹೈವೇ ರಸ್ತೇಲಿ …’ ಹಾಡನ್ನು ಹೋಲುವಂತಿದೆ ಎಂದು ಲಹರಿ ಮ್ಯೂಸಿಕ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದ್ದು ನೆನಪಿರಬಹುದು. ಇದೀಗ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಅಂಥದ್ದೇ ಒಂದು ಪ್ರಕರಣದಲ್ಲಿ ಸಿಲುಕಿದ್ದು, ಕಾಪಿರೈಟ್ ಕಾಯ್ದೆ ಉಲ್ಲಂಘಿಸಿದ್ದಿಕ್ಕೆ ದೆಹಲಿ ಹೈ ಕೋರ್ಟ್ ಅವರಿಗೆ 25 ಲಕ್ಷ ರೂ. ದಂಡ ವಿಧಿಸಿದೆ.
ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಕಾಪಿರೈಟ್ ಕಾಯ್ದೆ ಉಲ್ಲಂಘಿಸಿ, ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಹಾಡುಗಳನ್ನು ಯಾವುದೇ ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ ಎಂದು ಎಂ.ಆರ್.ಟಿ ಮ್ಯೂಸಿಕ್ ಸಂಸ್ಥೆಯು ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಕಾಪಿರೈಟ್ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸುವುದರ ಜೊತೆಗೆ ರಕ್ಷಿತ್ ಶೆಟ್ಟಿಗೆ 25 ಲಕ್ಷ ರೂ. ದಂಡ ವಿಧಿಸಲಾಗಿದೆ.
‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಎರಡು ಹಾಡುಗಳ ಕೆಲವು ಭಾಗಗಳನ್ನು ಹಕ್ಕುದಾರರಾದ MRT ಮ್ಯೂಸಿಕ್ ಅವರ ಅನುಮತಿ ಪಡೆಯದೆ ಬಳಸಕೊಳ್ಳಲಾಗಿದೆ. ಎರಡೂ ಹಾಡುಗಳನ್ನು ಅಲ್ಪಾವಧಿಗೆ ಬಳಿಸಿಕೊಳ್ಳಲಾಗಿರುವುದರಿಂದ, ಕಾಯ್ದೆಯನ್ನು ಉಲ್ಲಂಘಿಸಿಲ್ಲ ಎಂದು ರಕ್ಷಿತ್ ಶೆಟ್ಟಿ ಪರ ವಕೀಲರು ವಾದಿಸಿದ್ದರು. ಹಾಡುಗಳು ಕೆಲವೇ ಕ್ಷಣಗಳ ಕಾಲ ಕೇಳಿಬಂದರೂ, ಕಾಪಿರೈಟ್ ಹೊಂದಿದ ಯಾವುದೇ ವಿಷಯವನ್ನು ಬಳಸಲು ಮುಂಚಿತ ಅನುಮತಿ ಅಗತ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅದರ ಜಜೊತೆಗೆ 20 ಲಕ್ಷ ರೂ.ಗಳನ್ನು ಕಾಪಿರೈಟ್ ಉಲ್ಲಂಘನೆಗಾಗಿ ವಿಧಿಸಲಾದರೆ, ಮುಂಚಿನ ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಕಾರಣಕ್ಕೆ ಹೆಚ್ಚುವರಿ 5 ಲಕ್ಷ ರೂ.ಗಳನ್ನು ಸೇರಿಸಲಾಗಿದೆ. ಇದಕ್ಕೂ ಮೊದಲು ನ್ಯಾಯಾಲಯದ ಆದೇಶಗಳನ್ನು ಪಾಲಿಸುವಲ್ಲಿ ವಿಳಂಬವಾದುದರಿಂದ, ಜೈಲು ಶಿಕ್ಷೆಯಂತಹ ಗಂಭೀರ ಪರಿಣಾಮಗಳ ಸಾಧ್ಯತೆಯೂ ಇತ್ತು. ಆದರೆ, ರಕ್ಷಿತ್ ಶೆಟ್ಟಿ ಮತ್ತು ಅವರ ತಂಡವು ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದರಿಂದ, ನ್ಯಾಯಾಲಯವು ಆರ್ಥಿಕ ದಂಡ ವಿಧಿಸಿದೆ.


