ಈ ಹಿಂದೆ ‘ಹಾಫ್ ಮೆಂಟ್ಲು’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಸಂದೀಪ್ ನಾಗರಾಜ್, ಇದೀಗ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಈ ಬಾರಿ ಅವರು ‘ಕವಳ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಈ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದೆ.
ರಾಧಾಕೃಷ್ಣ ಆರ್ಟ್ಸ್ ಹಾಗೂ ಡ್ರೀಮ್ ವರ್ಲ್ಡ್ ಸಿನಿಮಾಸ್ ಮೂಲಕ ಲೋಕೇಶ್ ಬಿ ಹಾಗೂ ಅಡವಯ್ಯ ಪೂಜಾರ್ ನಿರ್ಮಿಸುತ್ತಿರುವ, ‘ದುನಿಯಾ’ ವಿಜಯ್ ಅಭಿನಯದ ‘RX ಸೂರಿ’, ರಾಧಿಕಾ ಕುಮಾರಸ್ವಾಮಿ ಅಭಿನಯದ ‘ಭೈರಾದೇವಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀಜೈ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ‘ಕವಳ’ ಚಿತ್ರ ಇತ್ತೀಚೆಗೆ ಅಧಿಕೃತವಾಗಿ ಪ್ರಾರಂಭವಾಗಿದೆ. ಈ ಚಿತ್ರಕ್ಕೆ ರವಿಚಂದ್ರನ್ ಚಾಲನೆ ನೀಡಿದ್ದಾರೆ.
ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ಮಾಡಲಾಗುತ್ತಿದೆ ಎಂದ ಶ್ರೀ ಜಯ್, ‘ಒಂದಷ್ಟು ನೈಜಘಟನೆಗಳನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆದಿದ್ದೇನೆ. ಒಂದು ಗಟ್ಟಿ ಕಾರಣಕ್ಕೆ ಇಲ್ಲಿ ರಕ್ತ ಹರಿಯುತ್ತದೆ. ಈ ಚಿತ್ರಕ್ಕೆ ಕವಳನ ಕಥೆ ಸ್ಪೂರ್ತಿಯಾಗಿರಬಹುದು. ಅದರೆ ಇದು ಆತನದೇ ಕಥೆಯಲ್ಲ. ಯುಗಾದಿ ನಂತರ ಚಿತ್ರೀಕರಣ ಆರಂಭಿಸಿ ಕಾಶಿ, ಹೈದರಾಬಾದ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಚಿತ್ರೀಕರಣ ಮಾಡುವ ಯೋಜನೆಯಿದೆ. ತಮಿಳು ನಟ-ನಿರ್ದೇಶಕ ಸಮುದ್ರಖಣಿ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ‍್ಳುತ್ತಿದ್ದಾರೆ. ಹೊರರಾಜ್ಯದಿಂದ ಬಂದವರು ಹೇಗೆ ಕನ್ನಡ ಮಾತಾಡುತ್ತಾರೋ, ಚಿತ್ರದಲ್ಲಿ ಅವರು ಮಾತನಾಡುವ ಶೈಲಿ ಅದೇ ರೀತಿ ಇರುತ್ತದೆ’ ಎಂದರು.

ನಂತರ ಸಮುದ್ರಖಣಿ ಮಾತನಾಡಿ, ‘ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ಜತೆ ಎರಡು ಸಿನಿಮಾ ಮಾಡಿದ್ದು ಮರೆಯಲಾಗದ ಅನುಭವ. ನನಗೆ ಕನ್ನಡ ಸ್ವಲ್ಪ ಬರುತ್ತೆ. ಇದರಲ್ಲಿ ಒಂದು ನೆಗೆಟಿವ್ ಪಾತ್ರ ಮಾಡುತ್ತಿದ್ದೇನೆ. ಪಾತ್ರಕ್ಕಾಗಿ ಕನ್ನಡ ಕಲಿಯುತ್ತಿದ್ದೇನೆ’ ಎಂದರು.
ಸಂದೀಪ್ ನಾಗರಾಜ್ ಈ ಚಿತ್ರಕ್ಕೆ ಸುಮಾರು 18 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ‘ನಾನು ಈ ಪಾತ್ರ ಮಾಡುತ್ತೇನೆ ಎಂದು ನನ್ನ ನಂಬಿ ಇಂಥ ದೊಡ್ಡ ಪಾತ್ರ ಕೊಟ್ಟಿದ್ದಾರೆ. ಶಕ್ತಿ ಮೀರಿ ನ್ಯಾಯ ಸಲ್ಲಿಸುತ್ತೇನೆ’ ಎಂದರು.
‘ಕವಳ’ ಚಿತ್ರಕ್ಕೆ ಎ. ಕರುಣಾಕರನ್ ಅವರ ಛಾಯಾಗ್ರಹಣ, ಕೆಕೆ. ಸೆಂಥಿಲ್ ಪ್ರಸಾದ್ ಅವರ ಸಂಗೀತವಿದ್ದು, ಚಿತ್ರದಲ್ಲಿ ಹಿರಿಯ ನಟರಾದ ಅಚ್ಯುತ್ ಕುಮಾರ್, ರಂಗಾಯಣ ರಘು, ನಾಜರ್, ಈಶ್ವರಿ ರಾವ್, ಬಲ ರಾಜವಾಡಿ, ಕಿಶೋರ್, ಶ್ರವಣ್, ಗಿಲ್ಲಿ, ಪ್ರಕಾಶ್ ತುಮ್ಮಿನಾಡ್ ಮುಂತಾದವರು ನಟಿಸುತ್ತಿದ್ದಾರೆ.
ಬಾಲಿವುಡ್ಗೆ ಇಂದ್ರಜಿತ್ ಲಂಕೇಶ್; ‘ಜೈ ಹಿಂದ್ ಜೈ ಸಿಂಧ್’ ಚಿತ್ರದ ನಿರ್ದೇಶನ


