‘ಸುಖೀಭವ’ ಚಿತ್ರ ವಿಮರ್ಶೆ: ನಿಷ್ಕಲ್ಮಶ ಪ್ರೀತಿಯನ್ನರಸುತ್ತಾ …

ಚಂದನವನ, ಚಿತ್ರ ವಿಮರ್ಶೆ, ಸಿನಿ ಸುದ್ದಿ

ಚಿತ್ರ: ಸುಖೀಭವ
ನಿರ್ಮಾಣ: ವೇದ್ ಆರ್ಯನ್ ಫಿಲಂಸ್
ನಿರ್ದೇಶನ: ಎನ್.ಕೆ. ರಾಜೇಶ್‌ ನಾಯ್ಡು
ತಾರಾಗಣ: ಮಹೇಂದ್ರ, ಸುಶ್ಮಿತ ನಾಯಕ್, ವಿಯಾನ್‌ಶಿ ಹೆಗ್ಡೆ, ಗೌರವ್ ಶೆಟ್ಟಿ, ಶೋಭರಾಜ್, ರವಿಶಂಕರ್ ಗೌಡ, ಸುನಿಲ್ ಪುರಾಣಿಕ್, ತುಕಾಲಿ ಸಂತು, ಮೈತ್ರಿ ಜಗ್ಗಿ ಮುಂತಾದವರು

ಶಾಲೆಯಲ್ಲಿರುವಾಗಲೇ ಅವನಿಗೆ ಪ್ರೀತಿಯಾಗುತ್ತದೆ. ಇಷ್ಟಪಟ್ಟ ಹುಡುಗಿಯ ಎದುರು ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ. ‘ಐ ಲವ್‍ ಯೂ’ ಎಂದು ಮನಬಿಚ್ಚುತ್ತಾನೆ. ಅದಕ್ಕವಳು, ‘ನಾನ್ಯಾಕೆ ನಿನ್ನನ್ನು ಇಷ್ಟಪಡಬೇಕು?’ ಎಂದು ಪ್ರಶ್ನೆ ಮಾಡುತ್ತಾಳೆ. ಉತ್ತರವಿಲ್ಲದ ಅವನು ತಲೆ ಬಗ್ಗಿಸಿ ನಿಂತಿರುವಾಗ, ‘ಮೊದಲು ನಿನ್ನನ್ನು ನೀನು ಸರಿಪಡಿಸಿಕೊಂಡು ಬಂದು ಲವ್‍ ಬಗ್ಗೆ ಮಾತನಾಡು’ ಎಂದು ಸಲಹೆ ನೀಡುತ್ತಾಳೆ. ಅಲ್ಲಿಂದ ಅವನು ತಾನು ಬದಲಾಗಬೇಕೆಂದು ತೀರ್ಮಾನಿಸುತ್ತಾನೆ. ಜೀವನದಲ್ಲೇನಾದರೂ ಸಾಧನೆ ಮಾಡಬೇಕು ಎಂಬ ನಿರ್ಣಯಕ್ಕೆ ಬರುತ್ತಾನೆ.

ಪ್ರೀತಿಯ ಕುರಿತು ಹಲವು ಚಿತ್ರಗಳು ಇದುವರೆಗೂ ಬಂದಿವೆ. ನಾಯಕಿ ಬಿಟ್ಟು ಹೋದಾಗ, ನಾಯಕ ಅವಳ ನೆನಪಲ್ಲಿ ಕುಡಿದು, ಚಿತ್ತಾಗಿ ವಿಚಿತ್ರವಾಗಿ ಆಡೋದು ಆ ಚಿತ್ರಗಳ ಕಂಟೆಂಟು. ಇಲ್ಲಿ ನಿರ್ದೇಶಕ ರಾಜೇಶ್‍ ನಾಯ್ಡು ಸ್ವಲ್ಪ ಬೇರೆ ತರಹ ಯೋಚಿಸಿದ್ದಾರೆ. ಹಾಗೆ ಬಿಟ್ಟು ಹೋದ ಹುಡುಗಿಯ ನೆನಪಲ್ಲಿ ಕೊರಗದೆ, ಏನನ್ನೋ ಸಾಧಿಸುವ ಯುವಕನ ಕಥೆ ಹೇಳಿದ್ದಾರೆ. ಹಾಗೆ ಸಾಧಿಸುವ ಯುವಕನ ಜೀವನದಲ್ಲಿ ಮುಂದೆ ಯಾರೆಲ್ಲಾ ಬರುತ್ತಾರೆ, ಕೊನೆಗೆ ಅವನ ಸಂಗಾತಿಯಾಗುವುದು ಯಾರು? ಎಂಬುದು ಚಿತ್ರದ ಕಥೆ.

ಇದೇ ಮೊದಲ ಬಾರಿಗೆ ಚಿತ್ರ ನಿರ್ದೇಶಿಸಿರುವ ರಾಜೇಶ್‍ ನಾಯ್ಡು ಪ್ರೀತಿ, ಭಾವನೆಗಳು, ಹಾಸ್ಯ ಸೇರಿಸಿ ಈ ಚಿತ್ರವನ್ನು ಮಾಡುತ್ತಾರೆ. ಪ್ರೀತಿ ಮತ್ತು ಭಾವನೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವಾದರೂ, ಹಾಸ್ಯ ವಿಪರೀತ ಎನ್ನುವಷ್ಟು ಕಿರಿಕಿರಿ ಮಾಡುತ್ತದೆ. ಚಿತ್ರ ಒಂದೊಳ್ಳೆಯ ಆರಂಭ ಪಡೆಯುತ್ತದಾದರೂ, ನಂತರ ತುಕಾಲಿ ಸಂತು ಮತ್ತು ಸಿದ್ದು ಮಂಡ್ಯ ಅವರ ಕಾಮಿಡಿಯಿಂದ ತೆವಳುತ್ತಾ ಸಾಗುತ್ತದೆ. ಪ್ರೀತಿ ಮತ್ತು ಭಾವನೆಗಳು ಚಿತ್ರವನ್ನು ಒಂದು ಹೆಜ್ಜೆ ಮೇಲಕ್ಕೆತ್ತಿದರೆ, ಕಾಮಿಡಿ ಒಂದು ಹೆಜ್ಜೆ ಕೆಳಕ್ಕಿಳಿಯುತ್ತದೆ. ಹೀಗೆ ಬ್ಯಾಲೆನ್ಸ್ ಮಾಡುತ್ತಲೇ, ನಿರ್ದೇಶಕರು ಒಂದೊಳ್ಳೆಯ ಅಂತ್ಯದೊಂದಿಗೆ ಚಿತ್ರ ಮುಗಿಸುತ್ತಾರೆ. ಇಲ್ಲಿ ಪ್ರೀತಿ, ಸ್ನೇಹ, ಭಾವನೆಗಳ ಜೊತೆಜೊತೆಗೆ ಜೀವನದ ಪಯಣವೂ ಇದೆ.

ಹಾಗೆ ನೋಡಿದರೆ, ಇದೊಂದು ಸಂಪೂರ್ಣ ಪ್ರೇಮಕಥೆಯೂ ಅಲ್ಲ. ಇಲ್ಲಿ ತಂದೆ ತಂದೆ-ಮಗನ ಸೆಂಟಿಮೆಂಟಿದೆ, ಸ್ನೇಹವಿದೆ, ಕನ್ನಡ ಪ್ರೀತಿ ಇದೆ. ಅವೆಲ್ಲವನ್ನೂ ಬೆರೆಸಿ ಚಿತ್ರಕಥೆ ಬರೆದಿದ್ದಾರೆ ರಾಜೇಶ್‍. ಚಿತ್ರ ಅಲ್ಲಲ್ಲಿ ಎಳೆದಂತಾಗಿದ್ದು, ಒಂದಿಷ್ಟು ಚುರುಕು ಮಾಡುವ ಸಾಧ್ಯತೆ ಖಂಡಿತಾ ಅವರಿಗಿತ್ತು. ಒಟ್ಟಾರೆ, ಅವರು ನೀಡುವ ಸಂದೇಶ ಬಹಳ ಮುಖ್ಯವಾಗಿದ್ದು, ಆಪ್ತವೆನಿಸುತ್ತದೆ.

ಈ ಚಿತ್ರದ ಮೂಲಕ ಮಹೇಂದ್ರ ಕುಮಾರ್‍ ನಾಯಕನಾಗಿದ್ದಾರೆ. ನಟನೆಯಲ್ಲಿ ಅವರು ಇನ್ನಷ್ಟು ಪಳಗಬೇಕಾದರೂ, ಮೊದಲ ಚಿತ್ರದಲ್ಲೇ ಒಂದಿಷ್ಟು ಗಮನಸೆಳೆಯುತ್ತಾರೆ. ವಿಶಾನ್ಶಿ ಹೆಗ್ಡೆ ಮತ್ತು ಸುಶ್ಮಿತಾ ನಾಯಕ್‍ ಮುದ್ದಾಗಿ ಕಾಣಿಸುತ್ತಾರೆ. ರವಿಶಂಕರ್ ಗೌಡ, ಶೋಭರಾಜ್‍, ಸುನೀಲ್‍ ಪುರಾಣಿಕ್‍, ರವೀಂದ್ರನಾಥ್‍ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕಾಮಿಡಿಯೇ ಕೆಟ್ಟದಾಗಿರುವುದರಿಂದ ಮತ್ತು ಚಿತ್ರಕ್ಕೆ ಸಂಬಂಧವಿಲ್ಲದಿರುವುದರಿಂದ ತುಕಾಲಿ ಮತ್ತು ಸಿದ್ದು ಅವರನ್ನು ದೂಷಿಸಿ ಪ್ರಯೋಜನವಿಲ್ಲ. ಮಂಜುನಾಥ ನಾಯಕ್‍ ಅವರ ಕ್ಯಾಮೆರಾದಲ್ಲಿ ಸಕಲೇಶಪುರ ಮುಂತಾದ ಪ್ರದೇಶಗಳು ಸುಂದರವಾಗಿವೆ. ಶುಭಂ ಸಂಗೀತ ಸಂಯೋಜನೆಯಲ್ಲಿ ‘ಕತ್ತೆತ್ತು ನೋಡದ ಹುಡುಗಿ …’, ‘ಕಾಲವು ಕಳೆದೋಗಿದೆ ಬೇಗನೆ …’ ಮುಂತಾದ ಹಾಡುಗಳು ಗುನುಗುವಂತಿವೆ.

ನಾವು ನಮ್ಮ ಇತಿಹಾಸ, ಸಂಸ್ಕೃತಿ, ಮಣ್ಣಿನ ವಾಸನೆಯನ್ನು ಮರೆಯುತ್ತಿದ್ದೇವೆ: ಬಾಬು

Latest Posts

Discover more from KannadaScreens

Subscribe now to keep reading and get access to the full archive.

Continue reading