ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದಲ್ಲಿ ರುಕ್ಮಿಣಿ ವಸಂತ್ ಅಭಿನಯಿಸುತ್ತಿರುವ ಸುದ್ದಿ ಕೆಲವು ತಿಂಗಳುಗಳ ಹಿಂದೆಯೇ ಕೇಳಿ ಬಂದಿತ್ತು. ಆದರೆ, ಚಿತ್ರತಂಡದವರಾಗಲೀ, ರುಕ್ಮಿಣಿ ಆಗಲೀ ಈ ವಿಷಯವನ್ನು ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ರುಕ್ಮಿಣಿ ಎದುರಿಗೆ ಈ ಪ್ರಶ್ನೆ ಇಟ್ಟಾಗಲೆಲ್ಲಾ ಅವರು ಕಿರುನಗೆಯಿಂದಲೇ ಪರೋಕ್ಷವಾಗಿ ಉತ್ತರಿಸುತ್ತಿದ್ದರು. ಇದೀಗ ಚಿತ್ರದಲ್ಲಿ ರುಕ್ಮಿಣಿ ಅಭಿನಯಿಸುತ್ತಿರುವ ಸುದ್ದಿಯನ್ನು ಚಿತ್ರತಂಡದವರೇ ಅಧಿಕೃತವಾಗಿ ಘೋಷಿಸಿದ್ದಾರೆ.
‘ಟಾಕ್ಸಿಕ್’ ಚಿತ್ರದ ಪಾತ್ರಗಳನ್ನು ಕೆಲವು ದಿನಗಳಿಂದ ಪೋಸ್ಟರ್‍ಗಳ ಮೂಲಕ ಪರಿಚಯಿಸಲಾಗಿದೆ. ಈಗಾಗಲೇ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ಅವರ ಪಾತ್ರಗಳನ್ನು ಪರಿಚಯಿಸುವ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ರುಕ್ಮಿಣಿ ವಸಂತ್ ಅವರ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದ್ದು, ಈ ಚಿತ್ರದಲ್ಲಿ ಮೆಲ್ಲಿಸಾ ಎಂಬ ಪಾತ್ರದಲ್ಲಿ ರುಕ್ಮಿಣಿ ನಟಿಸುತ್ತಿದ್ದಾರೆ. ಇದುವರೆಗೂ ಪಕ್ಕದ್ಮನೆ ಹುಡುಗಿ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ರುಕ್ಮಿಣಿ, ಮೊದಲ ಬಾರಿಗೆ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಜನವರಿ 08ರಂದು ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇನ್ನು, ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವು 2026ರ ಮಾರ್ಚ್ 19ರಂದು ಯುಗಾದ ಹಬ್ಬದ ಸಂದರ್ಭದಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ ಬಿಡುಗಡೆ ಆಗಲಿದೆ.
‘ಟಾಕ್ಸಿಕ್’ ಚಿತ್ರಕ್ಕೆ ಯಶ್ ಮತ್ತು ಗೀತು ಮೋಹಂದಾಸ್ ಕಥೆ ಬರೆದಿದ್ದು, ಈ ಚಿತ್ರವು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ರಾಜೀವ್ ರವಿ ಅವರ ಛಾಯಾಗ್ರಹಣ, ರವಿ ಬಸ್ರೂರು ಅವರ ಸಂಗೀತ, ಉಜ್ವಲ್ ಕುಲ್ಕರ್ಣಿ ಅವರ ಸಂಕಲನ ಹಾಗೂ ಟಿ.ಪಿ. ಅಬಿದ್ ಅವರ ಕಲಾ ನಿರ್ದೇಶನವಿದೆ. ಹಾಲಿವುಡ್‍ನ ಜನಪ್ರಿಯ ಸಾಹಸ ನಿರ್ದೇಶಕ ಜೆ.ಜೆ. ಪೆರಿ (‘ಜಾನ್ ವಿಕ್’ ಖ್ಯಾತಿ) ಅವರೊಂದಿಗೆ ಅನ್ಬರಿವ್ ಜೋಡಿ ಹಾಗೂ ಕೀಚಾ ಖಾಂಪಕ್‌ಡಿ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾಂಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‍ಗಳ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸಿರುವ ‘ಟಾಕ್ಸಿಕ್’ ಚಿತ್ರವನ್ನು ಗೀತೂ ಮೋಹನ್ ದಾಸ್ ನಿರ್ದೇಶನ ಮಾಡಿದ್ದಾರೆ.
ಒಂದು ಚಿತ್ರ ನಿರ್ದೇಶಿಸಿದವರಿಗೆ ಚಿತ್ರ ಮಾಡುವ ಅವಕಾಶ ಕೊಟ್ಟ ರಜನಿಕಾಂತ್


