- ಚೇತನ್ ನಾಡಿಗೇರ್
ಚಿತ್ರ: ತೀರ್ಥರೂಪ ತಂದೆಯವರಿಗೆ
ನಿರ್ಮಾಣ: ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್
ನಿರ್ದೇಶನ: ರಾಮೇನಹಳ್ಳಿ ಜಗನ್ನಾಥ
ತಾರಾಗಣ: ನಿಹಾರ್ ಮುಕೇಶ್, ರಚನಾ ಇಂದರ್, ರವೀಂದ್ರ ವಿಜಯ್, ಸಿತಾರಾ, ರಾಜೇಶ್ ನಟರಂಗ, ಅಜಿತ್ ಹಂದೆ ಮುಂತಾದವರು
‘ಇರುವ ಭಾಗ್ಯವ ನೆನೆದು, ಬಾರೆನೆಂಬುದನ್ನು ಬಿಡು, ಹರುಷಕ್ಕಿದೆ ದಾರಿ …’
ಡಾ.ಡಿ.ವಿ. ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ದ ಜನಪ್ರಿಯ ಸಾಲುಗಳು ಇವು. ಇರುವ ಅದೃಷ್ಟವನ್ನು ನೆನೆ, ಬೇರೆ ಯಾವುದೋ ಭಾಗ್ಯವನ್ನು ಬಯಸುವುದನ್ನು ಬಿಡು, ಸಂತೋಷಕ್ಕೆ ಇದೇ ನಿಜವಾದ ದಾರಿ … ಎಂದು ಸಾರುವ ಈ ಪದ್ಯವನ್ನು ಆಧರಿಸಿ ರಾಮೇನಹಳ್ಳಿ ಜಗನ್ನಾಥ ಇದೀಗ ‘ತೀರ್ಥರೂಪ ತಂದೆಯವರಿಗೆ’ ಚಿತ್ರ ಮಾಡಿದ್ದಾರೆ.
ಹೆಸರು ಕೇಳಿದ ತಕ್ಷಣ ಇದು ತಂದೆ-ಮಗನ ಬಾಂಧವ್ಯದ ಕುರಿತಾದ ಚಿತ್ರ ಎಂದನಿಸುವುದು ಸಹಜ. ಹೌದು, ಇದು ತಂದೆ-ಮಗನ ಬಾಂಧವ್ಯದ ಕಥೆ ಇರುವ ಚಿತ್ರವೇ. ಆದರೆ, ಇಲ್ಲಿ ತಂದೆ ಕಾರಣಾಂತರಗಳಿಂದ ದೂರವಾಗಿದ್ದಾರೆ. ಆತ ಎಲ್ಲಿದ್ದಾರೆ? ಹೇಗಿದ್ದಾರೆ? ಎಂಬುದು ಗೊತ್ತಿಲ್ಲ. ಅಂತಹ ತಂದೆಯ ಹುಡುಕುತ್ತಾ ಮಗ ಹೊರಡುತ್ತಾನೆ. ಅಂತಿಮವಾಗಿ ಅವನಿಗೆ ತಂದೆ ಸಿಗುತ್ತಾರಾ? ಇಷ್ಟಕ್ಕೂ ಅವರು, ಅವನ ಮತ್ತು ಇಡೀ ಕುಟುಂಬದಿಂದ ಏಕೆ ದೂರವಾಗಿರುತ್ತಾರೆ ಎಂಬುದು ಚಿತ್ರದ ಕಥೆ.
ಇದು ಹುಡುಕಾಟದ ಕಥೆಯಾದರೂ, ಬರೀ ತಂದೆಯ ಹುಡುಕಾಟಕ್ಕೆ ಮಾತ್ರ ಮಾತ್ರವಲ್ಲ. ತಂದೆಯ ಹುಡುಕಾಟ ಜೊತೆಗೆ ಮಗ ತನ್ನ ಅಸ್ತಿತ್ವಕ್ಕಾಗಿ ಹುಡುಕಾಟ ನಡೆಸುತ್ತಾನೆ. ಈ ಹುಡುಕಾಟದ ಕಥೆಗೂ, ಕಗ್ಗದ ಸಾಲುಗಳಿಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಚಿತ್ರದ ಆತ್ಮ ಇರುವುದೇ ಇಲ್ಲಿ. ಅದನ್ನು ಹೇಳುವುದು ಸುಲಭ. ಆದರೆ, ಅದನ್ನು ಅನುಭವಿಸುವುದಕ್ಕಾದರೂ ಚಿತ್ರ ನೋಡಬೇಕು.
ಇದೊಂದು ಕೌಟುಂಬಿಕ ಚಿತ್ರ. ಭಾವನೆಗಳಿಗೆ ಹೆಚ್ಚು ಒತ್ತು ಕೊಟ್ಟಿರುವ ಚಿತ್ರ. ಯುವ ನಾಯಕನಿರುವುದರಿಂದ ಕಮರ್ಷಿಯಲ್ ಅಂಶಗಳು ಒಂದಿಷ್ಟು ಸಹಜವಾಗಿಯೇ ಇದೆ. ಆದರೆ, ಅದನ್ನೇ ಎಳದಾಡದೆ, ಟ್ರಾಕಿಗೆ ಬರುತ್ತಾರೆ ಜಗನ್ನಾಥ. ಆದರೂ ಚಿತ್ರ ಮೊದಲಾರ್ಧ ನಿಧಾನವಾಗುತ್ತಿದೆ, ಸುಧೀರ್ಘವಾಗುತ್ತಿದೆ ಎಂದನಿಸುವುದು ಹೌದು. ದ್ವಿತೀಯಾರ್ಧದಲ್ಲಿ ಹುಡುಕಾಟ ತೀವ್ರವದಾಗ, ಕುತೂಹಲವೂ ಹೆಚ್ಚುತ್ತದೆ. ಮುಂದೇನಾಗಬಹುದು ಎಂಬ ಕುತೂಹಲದಿಂದಲೇ ಚಿತ್ರ ಸಾಗುತ್ತದೆ. ಕೊನೆಗೆ ಒಂದು ನೆಮ್ಮದಿಯ ನಿಟ್ಟುಸಿರಿನೊಂದಿಗೆ ಚಿತ್ರ ಅಂತ್ಯವಾಗುತ್ತದೆ.
ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ಒಂದು ನೈಜ ಘಟನೆಯನ್ನು ಇಟ್ಟುಕೊಂಡು, ಅದರ ಸುತ್ತ ಒಂದು ಕಾಲ್ಪನಿಕ ಕಥೆ ಹೆಣೆದಿದ್ದಾರೆ ಜಗನ್ನಾಥ. ಒಂದು ತಪ್ಪಿನಿಂದ ಒಂದು ಕುಟುಂಬ ಹೇಗೆ ಛಿದ್ರವಾಗುತ್ತದೆ ಎಂಬುದನ್ನು ಅವರು ತೋರಿಸಿದ್ದಾರೆ. ಕೆಲವು ನೈಜ ವ್ಯಕ್ತಿಗಳನ್ನು ನೆನಪಿಸುವ ಪಾತ್ರ ಮತ್ತು ಸನ್ನಿವೇಶಗಳೂ ಚಿತ್ರದಲ್ಲಿವೆ. ಜೊತೆಗೆ ಪತ್ರಕರ್ತರ ಜವಾಬ್ದಾರಿಗಳ ಕುರಿತೂ ಪರೋಕ್ಷವಾಗಿ ಚರ್ಚೆ ಮಾಡುತ್ತಾರೆ. ಕೆಲವು ಸನ್ನಿವೇಶಗಳಲ್ಲಿ ಸಮಂಜಸವಾದ ಉತ್ತರಗಳು ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಇನ್ನಷ್ಟು ಚಿತ್ರಕಥೆ ಇನ್ನಷ್ಟು ಗಟ್ಟಿ ಮಾಡುವ ಅವಕಾಶವಿತ್ತು. ಅದೇ ರೀತಿ ಮೊದಲಾರ್ಧದಲ್ಲಿ ಚಿತ್ರಕ್ಕೆ ಇನ್ನಷ್ಟು ಕತ್ತರಿ ಆಡಿಸಿ, ಚುರುಕಾಗಿಸುವ ಪ್ರಯತ್ನವನ್ನೂ ಮಾಡಬಹುದಿತ್ತು. ಇಂಥ ಒಂದೆರಡು ಕೊರತೆಗಳ ಹೊರತಾಗಿ, ಕುಟುಂಬ ಸಮೇತ ನೋಡಬಹುದಾದ ಭಾವನಾತ್ಮಕ ಚಿತ್ರವನ್ನು ಜಗನ್ನಾಥ ಕಟ್ಟಿಕೊಟ್ಟಿದ್ದಾರೆ.
ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗಮನಸೆಳೆಯುವುದು ನಟ ರವೀಂದ್ರ ವಿಜಯ್. ರವೀಂದ್ರ ಅವರ ಎಂಟ್ರಿ ತಡವಾದರೂ, ಇರುವ ಕೆಲವೇ ಸಮಯದಲ್ಲಿ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಏಳು ವರ್ಷಗಳ ನಂತರ ಕನ್ನಡಕ್ಕೆ ವಾಪಸ್ಸಾಗಿರುವ ಸಿತಾರಾ, ಮಾತಿಗಿಂಥ ಮೌನದಲ್ಲೇ ಹೆಚ್ಚು ಇಷ್ಟವಾಗುತ್ತಾರೆ. ರಾಜೇಶ್ ನಟರಂಗ ಅಭಿನಯದ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಅಜಿತ್ ಹಂದೆ ಅಭಿನಯ ಅಚ್ಚುಕಟ್ಟಾಗಿದೆ. ಹಿರಿತೆರೆಗೆ ನಿಹಾರ್ ಮುಕೇಶ್ ಹೊಸಬರಾದರೂ, ಕಿರುತೆರೆಗೆ ಹಳಬರು. ಮೊದಲ ಚಿತ್ರದಲ್ಲೇ ತಮ್ಮ ಅಭಿನಯದಿಂದ ಗಮನಸೆಳೆಯುತ್ತಾರೆ. ರಚನಾ ಇಂದರ್ ಲವಲವಿಕೆಯಿಂದ ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದಾರೆ. ದೀಪಕ್ ಯರಗೆರಾ ಛಾಯಾಗ್ರಹಣ ಮತ್ತು ಜೋ ಕೋಸ್ಟಾ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ.
ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಎಲ್ಲರಿಗೂ ಆಪ್ತವಾಗಬಲ್ಲಂತಹ ಒಂದು ಫೀಲ್ ಗುಡ್ ಚಿತ್ರ ‘ತೀರ್ಥರೂಪ ತಂದೆಯವರಿಗೆ’. ಹೃದಯಸ್ಪರ್ಶಿ ಚಿತ್ರಗಳನ್ನು ನೋಡಲು ಬಯಸುವವರಿಗೆ ಈ ಚಿತ್ರ.


