- ಚೇತನ್ ನಾಡಿಗೇರ್
ಚಿತ್ರ: 45
ನಿರ್ಮಾಣ: ರಮೇಶ್ ರೆಡ್ಡಿ
ನಿರ್ದೇಶನ: ಅರ್ಜುನ್ ಜನ್ಯ
ತಾರಾಗಣ: ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ, ಶೆಟ್ಟಿ, ಕೌಸ್ತುಭ ಮಣಿ, ಮಾನಸಿ ಸುಧೀರ್ ಮುಂತಾದವರು
‘ಸಾವಿನ ಭಯ ಹೋಗಬೇಕೆಂದರೆ, ಅದನ್ನು ಮುಖಾಮುಖಿ ಎದುರಿಸು. ಅದು ನಿನ್ನ ಹುಡುಕಿಕೊಂಡು ಬರುವಷ್ಟರಲ್ಲಿ, ನೀನೇ ಅದನ್ನು ಹುಡುಕಿಕೊಂಡು ಹೋಗು …’ ಎಂದು ಧೈರ್ಯ ತುಂಬುತ್ತಾನೆ ಶಿವಪ್ಪ. ಆತನ ಮಾತನ್ನು ಕೇಳಿ ಸಾವನ್ನು ಹುಡುಕಿಕೊಂಡು ಅವನು ಹೋಗುತ್ತಾನೆ. ಕೊನೆಗೆ ಅವನು ಸಾವನು ಗೆಲ್ಲುತ್ತಾನಾ? ಅಥವಾ ಸಾವು ಅವನನ್ನು ಗೆಲ್ಲುತ್ತದಾ?
‘45’ ಚಿತ್ರದ ಕಥೆ ಏನು? ಎಂಬ ಪ್ರಶ್ನೆಗೆ ನಿರ್ದೇಶಕ ಅರ್ಜುನ್ ಜನ್ಯ ಯಾವತ್ತೂ ಉತ್ತರಿಸಿರಲಿಲ್ಲ. ಚಿತ್ರಮಂದಿರದಲ್ಲೇ ನೋಡಿ ಎಂದಿದ್ದರು. ಆದರೂ ಪ್ರೇಕ್ಷಕರು ಇದು ಹುಟ್ಟು ಮತ್ತು ಸಾವಿನ ಕುರಿತಾದ ಕಥೆ ಎಂದು ಗೆಸ್ ಮಾಡಿದ್ದರು. ಅದು ನಿಜ. ಇದೊಂದು ದೈವಿಕ ಫ್ಯಾಂಟಸಿ ಸಿನಿಮಾ. ಜನನ ಮತ್ತು ಮರಣದ ನಡುವಿನ ಒಂದು ಡ್ಯಾಶ್ ಇದೆಯಲ್ಲ. ಅದರ ಕುರಿತಾದ ಸಿನಿಮಾ. ಆ ಡ್ಯಾಶ್‍ನಲ್ಲಿ ಹೇಗಿರಬೇಕು, ಒಳ್ಳೆಯ ಕರ್ಮ ಮಾಡಿದರೆ ಏನಾಗುತ್ತದೆ, ಕೆಟ್ಟ ಕರ್ಮ ಮಾಡಿದರೆ ಏನಾಗುತ್ತದೆ ಎಂದು ಸಾರುವ ಸಿನಿಮಾ. ಬದುಕಿನ ದೊಡ್ಡ ಫಿಲಾಸಫಿಯನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ. ಅದಕ್ಕಾಗಿ ಒಂದು ಹೊಸ ಲೋಕವನ್ನೇ ಸೃಷ್ಟಿ ಮಾಡಿದ್ದಾರೆ ಅರ್ಜುನ್ ಜನ್ಯ.
‘45’ ಮೂರು ಪ್ರಮುಖ ಪಾತ್ರಗಳ ಸುತ್ತ ಸುತ್ತುವ ಚಿತ್ರ. ಒಬ್ಬ ಕಾಯುವವನು, ಇನ್ನೊಬ್ಬ ಕೊಲ್ಲುವವನು. ಅವರಿಬ್ಬರ ಮಧ್ಯೆ ಒಬ್ಬ ಸಾಮಾನ್ಯ ಮನುಷ್ಯ. ಕೊಲ್ಲುವವನ ಭಯದಿಂದ ತತ್ತರಿಸಿರುವ ಸಾಮಾನ್ಯ ಮನುಷ್ಯನ ನೆರವಿಗೆ ಕಾಯುವವನು ಬರುತ್ತಾನೆ. ಅವನನ್ನು ಕಾಯುವುದರ ಜೊತೆಗೆ, ಬದುಕಿನ ಕುರಿತು ಪಾಠ ಮಾಡುತ್ತಾನೆ. ಮನುಷ್ಯನ ಹುಟ್ಟು-ಸಾವು, ಮಧ್ಯದ ಪಯಣ, ಪಾಪ-ಕರ್ಮ ಮುಂತಾದವುಗಳ ಬಗ್ಗೆ ಅರ್ಥ ಮಾಡಿಸುತ್ತಾನೆ. ಇಷ್ಟಕ್ಕೂ ಏನನ್ನು, ಹೇಗೆ ಅರ್ಥ ಮಾಡಿಸುತ್ತಾನೆ ಎನ್ನುವುದನ್ನು ಚಿತ್ರಮಂದಿರದಲ್ಲೇ ನೋಡಬೇಕು.
ಕಥೆ ಸರಳವಾದರೂ, ಅದನ್ನು ಬೇರೆ ರೀತಿಯಲ್ಲೇ ಕಟ್ಟಿಕೊಟ್ಟಿದ್ದಾರೆ ಅರ್ಜುನ್ ಜನ್ಯ. ಒಂದು ಕಡೆ ಹೇಗೆ ಬದುಕಬೇಕು ಎಂದು ಹೇಳುತ್ತಲೇ, ಇನ್ನೊಂದು ಕಡೆ ಸತ್ತ ನಂತರ ಆತ್ಮ ಏನೆಲ್ಲಾ ಹಂತಗಳನ್ನು ದಾಟುತ್ತದೆ ಎಂದು ಸಹ ಹೇಳಿದ್ದಾರೆ. ಸಾವಿನವರೆಗೂ ಒಂದು ಪಯಣವಾದರೆ, ಸಾವಿನ ನಂತರದ ಪಯಣವನ್ನೂ ಅವರು ಕಟ್ಟಿಕೊಟ್ಟಿದ್ದಾರೆ. ಈ ಚಿತ್ರಕ್ಕೆ ಒಂದು ಹೊಸ ಪ್ರಪಂಚವನ್ನೇ ಸೃಷ್ಟಿ ಮಾಡಿದ್ದಾರೆ ಅರ್ಜುನ್. ಆ ಪ್ರಪಂಚಕ್ಕೆ ನಿರ್ಮಾಪಕ ರಮೇಶ್ ರೆಡ್ಡಿ ಹೇರಳವಾಗಿ ಹಣ ಸುರಿದಿದ್ದಾರೆ. ಆ ಪ್ರಪಂಚದಲ್ಲಿ ಎಲ್ಲರಿಗೂ ಸಲ್ಲುವ ಕಥೆ ಹೇಳಿದ್ದಾರೆ ಅರ್ಜುನ್ ಜನ್ಯ.
ಕೆಲವು ಪಾತ್ರಗಳನ್ನು ರೂಪಕವನ್ನಾಗಿ ಬಳಸಿಕೊಂಡು ಬದುಕಿನ ಫಿಲಾಸಫಿಯನ್ನು ಅವರು ಹೇಳಿದ್ದಾರೆ. ಇಲ್ಲಿ ಅರ್ಜುನ್ ಜನ್ಯ ಕಥೆ ಬಿಟ್ಟು ಆಚೆ ಹೋಗಬಾರದು ಎಂದು ಪ್ರಯತ್ನಪಟ್ಟಿದ್ದಾರೆ. ಮೂಲತಃ ಸಂಗೀತ ನಿರ್ದೇಶಕರಾದರೂ, ಕಥೆಗೆ ಪೂರಕವಾಗಿಲ್ಲ ಎಂದು ಹಾಡುಗಳನ್ನೇ ಇಟ್ಟಿಲ್ಲ. ಆದರೂ ಚಿತ್ರ ಕೆಲವೊಮ್ಮೆ ಸಣ್ಣಗೆ ಕವಲೊಡೆಯುತ್ತದೆ. ಅಲ್ಲಲ್ಲಿ ನಿಧಾನವಾಗುತ್ತದೆ. ಕೆಲವೊಮ್ಮೆ ಎಳೆದಂತಾಗುತ್ತದೆ. ಸುಧಾರಾಣಿ ಅವರ ಪಾತ್ರ ಬೇಕಿರಲಿಲ್ಲ ಎಂದನಿಸುವುದು ಹೌದು. ಬದುಕಿನ ವೇದಾಂತದ ಜೊತೆಗೆ ಒಂದು ಪ್ರೇಮಕಥೆ, ತಾಯಿ ಸೆಂಟಿಮೆಂಟ್ ಎಲ್ಲವನ್ನೂ ಚಿತ್ರದಲ್ಲಿ ಹೇಳಲಾಗಿದೆ.
ಇಲ್ಲಿ ಚಿತ್ರದ ಆತ್ಮ ಮತ್ತು ಆಶಯವೇನೋ ಚೆನ್ನಾಗಿದೆ. ಅದನ್ನು ಗೊಂದಲವಿಲ್ಲದೆ ಹೇಳುವ ಅವಶ್ಯಕತೆ ಇತ್ತು. ಕೊನೆಯಲ್ಲಿ ಸಿನಿಮಾದಲ್ಲೊಂದು ಸಿನಿಮಾ ಎಂಬ ಪರಿಕಲ್ಪನೆ ಗೊಂದಲಗೊಳಿಸುತ್ತದೆ. ಬದುಕಿನ ಕುರಿತಾದ ದೊಡ್ಡ ಪಾಠ ಹೇಳುವ ಜನ್ಯ, ಕೊನೆಗೆ ಹೆಲ್ಮೆಟ್ ಹಾಕಿಕೊಳ್ಳಿ, ವಾಹನ ಚಲಿಸುವಾಗ ಮೊಬೈಲ್ ಬಳಸಬೇಡಿ, ಮನುಷ್ಯತ್ವ ಮೆರೆಯಿರಿ … ಎಂಬ ಸಂದೇಶಗಳನ್ನೂ ಕೊಡುತ್ತಾರೆ. ಇದನ್ನು ಹೇಳುವುದಕ್ಕೆ ಅಷ್ಟೆಲ್ಲಾ ಮಾಡಿದರಾ ಎಂದನಿಸಿದರೆ ಆಶ್ಚರ್ಯವಿಲ್ಲ. ಇದರ ಹೊರತಾಗಿ ಮೊದಲ ಪ್ರಯತ್ನದಲ್ಲೇ ದೊಡ್ಡದೊಂದು ಪ್ರಯೋಗ ಮಾಡಿರುವುದಕ್ಕೆ, ಮೂರು ಪ್ರಮುಖ ನಟರಿಂದ ಬೇರೇನೋ ಮಾಡಿಸಿರುವುದಕ್ಕೆ ಅವರನ್ನು ಮೆಚ್ಚದೆ ಸಾಧ್ಯವಿಲ್ಲ.
ಇಲ್ಲಿ ಅರ್ಜುನ್, ತಂತ್ರಜ್ಞಾನಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಅದರಲ್ಲೂ VFX ಬಹಳ ಮುಖ್ಯ ಪಾತ್ರ ವಹಿಸುತ್ತದೆ. ವಿನಯ್, ಶಿವಪ್ಪ ಮತ್ತು ರಾಯಪ್ಪ ಮೂರು ಪಾತ್ರಗಳು ಹೇಗೋ, VFX ಸಹ ನಾಲ್ಕನೆಯ ಪಾತ್ರವಾಗಿದೆ. ಅಲ್ಲಲ್ಲಿ ಬರುವ ಗರುಡ ಪುರಾಣದ ಜೊತೆಗೆ, ಕೊನೆಯ 20 ನಿಮಿಷಗಳಲ್ಲಿ VFX ಆವರಿಸಿಕೊಳ್ಳುತ್ತದೆ. ಚಿತ್ರದ ಶ್ರೀಮಂತಿಕೆಯನ್ನು ಗ್ರಾಫಿಕ್ಸ್ ಹೆಚ್ಚಿಸಿದೆ. ಕೊನೆಯ 20 ನಿಮಿಷಗಳ ಜೊತೆಗೆ, ಚೇಸಿಂಗ್ ದೃಶ್ಯಗಳು, ಮಾರ್ಕೆಟ್‍ನಲ್ಲಿ ಶೂಟೌಟ್ ಮತ್ತು ಶಿವಪ್ಪ ಹಾಗೂ ರಾಯಪ್ಪನ ಮುಖಾಮುಖಿಯ ದೃಶ್ಯಗಳು ಸಹ ಚಿತ್ರದ ಹೈಲೈಟ್ ಎಂದರೆ ತಪ್ಪಿಲ್ಲ.
ಇಡೀ ಚಿತ್ರ ಸುತ್ತುವುದು ರಾಜ್ ಬಿ. ಶೆಟ್ಟಿ ಅವರ ಪಾತ್ರದ ಸುತ್ತ. ಸಾವಿಗೆ ಹೆದರಿ ಓಡುವ ಮುಗ್ಧ ಮಾನವನ ಪಾತ್ರವನ್ನು ರಾಜ್ ಸಮರ್ಥವಾಗಿ ನಿಭಾಯಿಸಿದ್ದಾರೆ. ತಮ್ಮ ಅಭಿನಯದಿಂದ ಪ್ರೇಕ್ಷಕರ ಸಿಂಪಥಿ ಗಿಟ್ಟಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಪಾತ್ರ ಎಷ್ಟು ಮುಖ್ಯವೋ, ಉಪೇಂದ್ರ ಅವರ ಪಾತ್ರವೂ ಮಹತ್ವದ್ದು. ರಾಯಪ್ಪನಾಗಿ ಅವರ ಮ್ಯಾನರಿಸಂ, ಅಭಿನಯ, ಗೆಟಪ್‍ಗಳು ಎಲ್ಲವೂ ವಿಭಿನ್ನವಾಗಿವೆ. ಮೊದಲಾರ್ಧ ಇಬ್ಬರೂ ಆವರಿಸಿಕೊಳ್ಳುತ್ತಾರೆ. ಶಿವರಾಜಕುಮಾರ್ ಬರುವುದು ಮಧ್ಯಂತರದ ನಂತರ. ಅಲ್ಲಿಂದ ಚಿತ್ರದ ದಿಕ್ಕೇ ಬದಲಾಗುತ್ತದೆ. ಟ್ರೇಲರ್ ನೋಡಿದವರು ಅವರ ಅರ್ಧನಾರೀಶ್ವರನ ಅವತಾರ ನೋಡಿ ಖುಷಿಯಾಗಿದ್ದರು. ಬರೀ ಅದೊಂದೇ ಅಲ್ಲ, ಇನ್ನೂ ಹಲವು ಅವತಾರಗಳಲ್ಲಿ ಶಿವರಾಜಕುಮಾರ್ ತಮ್ಮ ಅಭಿಮಾನಿಗಳಿಗೆ ಥ್ರಿಲ್ ಕೊಡುತ್ತಾರೆ. ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತೊಯ್ಯುತ್ತಾರೆ. ಮೊಟ್ಟೆ ರಾಜೇಂದ್ರನ್, ಪ್ರಮೋದ್ ಶೆಟ್ಟಿ, ಕೌಸ್ತುಭ ಮಣಿ, ಮಾನಸಿ ಸುಧೀರ್, ಜಾಫರ್ ಸಿದ್ದೀಖ್ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಮೊದಲೇ ಹೇಳಿದಂತೆ ಚಿತ್ರ ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬಂದಿದೆ. ಅದರಲ್ಲೂ ಛಾಯಾಗ್ರಾಹಕ ಸತ್ಯ ಹೆಗಡೆ ಅವರ ಕೆಲಸವನ್ನು ಮರೆಯುವ ಹಾಗಿಲ್ಲ. ಅವರು ಮೂವರೂ ನಾಯಕರಿಗೆ ಒಂದೊಂದು ಕಲರ್ ಕೋಡ್ ಕೊಟ್ಟಿದ್ದಾರೆ. ಶಿವರಾಜಕುಮಾರ್ ಇದ್ದಾಗ ಹಳದಿ, ಉಪೇಂದ್ರ ಬಂದಾಗ ಹಿನ್ನೆಲೆಯಲ್ಲಿ ಕೆಂಪು ಬಣ್ಣ ಇರುತ್ತದೆ. ಒಟ್ಟಾರೆ ಇಡೀ ಪರಿಸರವನ್ನು ತಮ್ಮ ಛಾಯಾಗ್ರಹಣದಿಂದ ಅವರು ಚಂದಗಾಣಿಸಿದ್ದಾರೆ. ಚಿತ್ರದಲ್ಲಿ ಹಾಡುಗಳಿಲ್ಲದಿದ್ದರೂ, ಹಳೆಯ ಹಾಡುಗಳನ್ನು ಸಂದರ್ಭೋಚಿತವಾಗಿ ಬಳಸಿಕೊಳ್ಳಲಾಗಿದೆ. ಹಾಡುಗಳಿಲ್ಲದಿದ್ದರೂ ಹಿನ್ನೆಲೆ ಸಂಗೀತದಲ್ಲೇ ಗಮನಸೆಳೆಯುತ್ತಾರೆ ಅರ್ಜುನ್ ಜನ್ಯ. ಸಾಹಸ ಸನ್ನಿವೇಶಗಳು ಚಿತ್ರದ ಹೈಲೈಟ್. ಇಂಥಾ ಚಿತ್ರಕ್ಕೆ ತಲೆ ಕಡಿಯುವ, ಕ್ರೌರ್ಯದ ಸನ್ನಿವೇಶಗಳ ಅವಶ್ಯಕತೆ ಇರಲಿಲ್ಲ. ಇಂಥಾ ಸನ್ನಿವೇಶಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಬೇಕಿತ್ತು.
ತಮ್ಮ ಮೊದಲ ಪ್ರಯತ್ನದಲ್ಲೇ ಎಲ್ಲಾ ರೀತಿಯಲ್ಲೂ ದೊಡ್ಡ ಪ್ರಯತ್ನ ಮಾಡಿದ್ದಾರೆ ಅರ್ಜುನ್ ಜನ್ಯ. ಈ ಚಿತ್ರ ಮೂವರು ನಟರ ಅಭಿಮಾನಿಗಳಿಗಷ್ಟೇ ಅಲ್ಲ, ಎಲ್ಲರಿಗೂ ಬದುಕಿನ ಪಾಠ ಹೇಳುವ ಒಂದು ಪ್ರಯತ್ನ. ಕಲಿಯುವ ಆಸಕ್ತಿ ಇರುವವರು ಖಂಡಿತಾ ಕ್ಲಾಸ್‍ಗೆ ಹೋಗಬಹುದು.


