ಸುದೀಪ್ ಅಭಿನಯದ ‘ಮ್ಯಾಕ್ಸ್ 2’ ಚಿತ್ರದ ಚಿತ್ರೀಕರಣ ಜುಲೈ ಮೊದಲ ವಾರದಿಂದ ಪ್ರಾರಂಭವಾಗಲಿದೆ. ಈ ಚಿತ್ರಕ್ಕೆ ಸುದೀಪ್‍ಗೆ ನಾಯಕಿಯಾಗಿ ಬಹುಭಾಷಾ ನಟಿ ಮಾಳವಿಕಾ ಮೋಹನನ್ ಆಯ್ಕೆಯಾಗಿದ್ದಾರೆ ಎಂದು ಸುದ್ದಿಯೊಂದು ಕೇಳಿಬರುತ್ತಿದೆ.
ಸದ್ಯ ಪ್ರಭಾಸ್ ಅಭಿನಯದ ‘ದಿ ರಾಜ ಸಾಬ್’ ಮತ್ತು ‘ಸರ್ದಾರ್ 2’ ಚಿತ್ರಗಳಲ್ಲಿ ನಟಿಸುತ್ತಿರುವ ಮಾಳವಿಕಾ ಮೋಹನನ್, ಈಗ ಮೊದಲ ಬಾರಿಗೆ ಸುದೀಪ್ ಜೊತೆಗೆ ಅಭಿನಯಿಸುತ್ತಿದ್ದಾರೆ. ಹಾಗಂತ ಇದು ಅವರ ಮೊದಲ ಕನ್ನಡ ಚಿತ್ರವೇನಲ್ಲ. 2016ರಲ್ಲಿ ಬಿಡುಗಡೆಯಾದ ಪ್ರೀತಂ ಗುಬ್ಬಿ ನಿರ್ದೇಶನದ ‘ನಾನು ಮತ್ತು ವರಲಕ್ಷ್ಮೀ’ ಚಿತ್ರದಲ್ಲಿ ಮಾಳವಿಕಾ ನಟಿಸಿದ್ದರು. ಆ ನಂತರ ಯಾವುದೇ ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಈಗ ‘ಮ್ಯಾಕ್ಸ್ 2’ ಮೂಲಕ ಕನ್ನಡಕ್ಕೆ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
‘ಮ್ಯಾಕ್ಸ್ 2’ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ಚಿತ್ರವನ್ನು ಮೊದಲ ಭಾಗ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ತಮ್ಮ ಮಹಾಕ್ಷಯ್ ಪಾತ್ರವನ್ನು ಮುಂದುವರೆಸಲಿದ್ದಾರೆ. ಮೊದಲ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ಮಾಪಕ ಕಲೈಪುಲಿ ಎಸ್. ಧನು ಮತ್ತು ಸುದೀಪ್ ಜೊತೆಯಾಗಿ ನಿರ್ಮಾಣ ಮಾಡಿದ್ದರು. ‘ಮ್ಯಾಕ್ಸ್ 2’ ಚಿತ್ರವನ್ನು ಸತ್ಯಜ್ಯೋತಿ ಫಿಲಂಸ್ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ. ಇದಕ್ಕೂ ಮೊದಲು ಸತ್ಯಜ್ಯೋತಿ ಫಿಲಂಸ್ ನಿರ್ಮಾಣದ ಮತ್ತು ಸುದೀಪ್ ಅಭಿನಯದ ಚಿತ್ರವೊಂದನ್ನು ತಮಿಳಿನ ಜನಪ್ರಿಯ ನಿರ್ದೇಶಕ ಚೇರನ್ ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಈಗ ಚೇರನ್ ಚಿತ್ರವನ್ನು ಬಿಟ್ಟು ವಿಜಯ್ ಕಾರ್ತಿಕೇಯ ನಿರ್ದೇಶನದ ಚಿತ್ರವನ್ನು ಸತ್ಯಜ್ಯೋತಿ ಫಿಲಂಸ್ ಕೈಗೆತ್ತಿಕೊಂಡಿದೆ.
‘ಮ್ಯಾಕ್ಸ್ 2’ ಎಂಬ ಹೆಸರು ಕೇಳುತ್ತಿದ್ದಂತೆಯೇ ಇದು ‘ಮ್ಯಾಕ್ಸ್’ ಚಿತ್ರದ ಮುಂದುವರೆದ ಭಾಗ ಎಂದನಿಸಬಹುದು. ಆದರೆ, ಇದು ಸೀಕ್ವೆಲ್ ಅಲ್ಲ. ಅದರ ಪ್ರೀಕ್ವೆಲ್ ಎಂದು ಹೇಳಲಾಗುತ್ತಿದೆ. ‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಸಸ್ಪೆಂಡ್ ಆಗಿ ನಂತರ ಡ್ಯೂಟಿಗೆ ಮರಳಿರುತ್ತಾರೆ. ‘ಮ್ಯಾಕ್ಸ್ 2’ನಲ್ಲಿ ಅದರ ಹಿಂದಿನ ಕಥೆಯನ್ನು ಹೇಳಲಾಗುತ್ತದಂತೆ. ಸುದೀಪ್ ಅವರ ಮಹಾಕ್ಷಯ್ ಪಾತ್ರ ಯಾಕೆ ಸಸ್ಪೆಂಡ್ ಆಗಿರುತ್ತದೆ ಮತ್ತು ಅದರ ಹಿಂದೆ ಏನೆಲ್ಲಾ ಘಟನೆಗಳು ನಡೆದಿರುತ್ತವೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದಂತೆ. ಈ ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಮುಂದುವರೆಯಲಿದ್ದು, ಮಿಕ್ಕಂತೆ ಬಹಳಷ್ಟು ಹೊಸ ಪಾತ್ರಗಳು ಸೇರಿಕೊಳ್ಳಲಿವೆ. ‘ಮ್ಯಾಕ್ಸ್’ ಚಿತ್ರದ ಚಿತ್ರೀಕರಣ ಹೆಚ್ಚಾಗಿ ಮಹಾಬಲಿಪುರಂನಲ್ಲಿ ನಡೆದಿತ್ತು. ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಚೆನ್ನೈ ಮುಂತಾದ ಕಡೆ ನಡೆಯಲಿದೆ.
‘ಮ್ಯಾಕ್ಸ್ 2’ ಚಿತ್ರದ ಚಿತ್ರೀಕರಣ ಸತತವಾಗಿ ನಡೆದು ಮುಕ್ತಾಯವಾಗಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


