ಬಾಲಿವುಡ್‍ನ ಸರಣಿ ಚಿತ್ರಗಳ ಪೈಕಿ ಅತ್ಯಂತ ಜನಪ್ರಿಯ ಚಿತ್ರವೆಂದರೆ, ಅದು ‘ಹೌಸ್‍ಫುಲ’. ಈಗಾಗಲೇ ‘ಹೌಸ್‍ಫುಲ್’ ಸರಣಿಯಲ್ಲಿ ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದು, ಜೂನ್ 06ರಂದು ಐದನೇ ಚಿತ್ರ ಬಿಡುಗಡೆಯಾಗಲಿದೆ. ಬಹುತಾರಾಗಣವಿರುವ ‘ಹೌಸ್‍ಫುಲ್ 5’ ಚಿತ್ರದ ವಿಶೇಷತೆಯೆಂದರೆ, ಈ ಚಿತ್ರವು ಎರಡು ಚಿತ್ರಗಳಾಗಿ ಬಿಡುಗಡೆಯಾಗುತ್ತಿದೆ. ಎರಡೂ ಚಿತ್ರಗಳಲ್ಲಿ ಎರಡು ವಿಭಿನ್ನ ಕ್ಲೈಮ್ಯಾಕ್ಸ್ಗಳಿದ್ದು, ಚಿತ್ರಕ್ಕೆ ‘ಹೌಸ್‍ಫುಲ್ 5 A’ ಮತ್ತು ‘ಹೌಸ್‍ಫುಲ್ 5 B’ ಎಂದು ಹೆಸರಿಡಲಾಗಿದೆ. ಈ ಎರಡೂ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ.
ಹೌದು, ‘ಹೌಸ್‍ಫುಲ್ 5’ ಚಿತ್ರವು ‘ಹೌಸ್‍ಫುಲ್ 5 A’ ಮತ್ತು ‘ಹೌಸ್‍ಫುಲ್ 5 B’ ಎಂಬ ಎರಡು ಹೆಸರುಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೊಂದು ಮರ್ಡರ್ ಮಿಸ್ಟ್ರಿ ಚಿತ್ರವಾಗಲಿದ್ದು, ಎರಡೂ ಚಿತ್ರಗಳಲ್ಲಿ ಇಬ್ಬರು ವಿಭಿನ್ನ ಕೊಲೆಗಾರರು ಇರುತ್ತಾರಂತೆ. ಮಿಕ್ಕಂತೆ ಕಥೆ, ಪಾತ್ರಗಳೆಲ್ಲವೂ ಒಂದೇ. ಚಿತ್ರದ ಬಹುತೇಕ ಭಾಗ ಒಂದೇ ಆಗಿದ್ದರೂ, ಕ್ಲೈಮ್ಯಾಕ್ಸ್ ಮಾತ್ರ ಬೇರೆಯಾಗಿರುತ್ತದೆ. ‘ಹೌಸ್‍ಫುಲ್ 5 A’ ಚಿತ್ರದಲ್ಲಿ ಒಬ್ಬ ಕೊಲೆಗಾರನಾದರೆ, ‘ಹೌಸ್‍ಫುಲ್ 5 B’ ಚಿತ್ರದಲ್ಲಿ ಇನ್ನೊಬ್ಬ ಕೊಲೆಗಾರನಾಗಿರುತ್ತಾನೆ. ಹಾಗಾಗಿ, ‘ಹೌಸ್‍ಫುಲ್ 5’ ಒಂದೇ ಚಿತ್ರವಾದರೂ, ಎರಡು ವಿಭಿನ್ನ ಚಿತ್ರಗಳಾಗಿರಲಿವೆ. ಈ ತರಹದ ಪ್ರಯತ್ನ ಜಗತ್ತಿನಲ್ಲೇ ಮೊದಲ ಬಾರಿಗೆ ಆಗಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ‘ಹೌಸ್‍ಫುಲ್ 5 A’ ಮತ್ತು ‘ಹೌಸ್‍ಫುಲ್ 5 B’ ಎರಡೂ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಎರಡೂ ಚಿತ್ರಗಳಿಗೆ ಬೇರೆ ಬೇರೆ ಪ್ರದರ್ಶನಗಳನ್ನು ನಿಗದಿಪಡಿಸಲಾಗಿದೆ. ‘ಹೌಸ್‍ಫುಲ್ 5 A’ ಮತ್ತು ‘ಹೌಸ್‍ಫುಲ್ 5 B’ ಪೈಕಿ ಯಾವುದನ್ನು ನೋಡಬೇಕು ಅಥವಾ ಎರಡೂ ಚಿತ್ರಗಳನ್ನು ನೋಡಬೇಕಾ? ಎಂಬ ವಿಷಯ ಇದೀಗ ಪ್ರೇಕ್ಷಕರಿಗೆ ಬಿಟ್ಟಿದ್ದು.
‘ಹೌಸ್‍ಫುಲ್ 5 A’ ಮತ್ತು ‘ಹೌಸ್‍ಫುಲ್ 5 B’ ಚಿತ್ರಗಳಲ್ಲಿ ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ಅಭಿಷೇಕ್ ಬಚ್ಚನ್, ಜಾಕ್ವೆಲಿನ್ ಫರ್ನಾಂಡಿಸ್, ಸೋನಮ್ ಬಜ್ವಾ, ನರ್ಗಿಸ್ ಫಕ್ರಿ, ಸಂಜಯ್ ದತ್, ಜಾಕಿ ಶ್ರಾಫ್, ನಾನಾ ಪಟೇಕರ್, ಚಂಕಿ ಪಾಂಡೆ, ಫರ್ದೀನ್ ಖಾನ್, ಶ್ರೇಯಸ್ ತಲ್ಪಾಡೆ, ಜಾನಿ ಲಿವರ್, ರಂಜೀತ್, ಚಿತ್ರಾಂಗದಾ ಸಿಂಗ್ ಮುಂತಾದವರು ನಟಿಸಿದ್ದಾರೆ.
ಈ ಚಿತ್ರಗಳನ್ನು ತರುಣ್ ಮನ್ಸುಖಾನಿ ನಿರ್ದೇಶನ ಮಾಡಿದರೆ, ಸಾಜಿದ್ ನಡಿಯಾಡ್ವಾಲ ಕಥೆ ಬರೆಯುವುದರ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.


