‘ಭುವನಂ ಗಗನಂ’ ಚಿತ್ರ ವಿಮಶ್ರೆ: ಎರಡು ವ್ಯತಿರಿಕ್ತ ಜೀವಗಳ ಪಯಣ

ಚಂದನವನ, ಚಿತ್ರ ವಿಮರ್ಶೆ, ಸಿನಿ ಸುದ್ದಿ

• ಚೇತನ್‍ ನಾಡಿಗೇರ್

ಚಿತ್ರ: ಭುವನಂ ಗಗನಂ
ನಿರ್ಮಾಣ: ಮುನೀಗೌಡ
ನಿರ್ದೇಶನ: ಗಿರೀಶ್‍ ಮೂಲಿಮುನಿ
ತಾರಾಗಣ: ಪ್ರಮೋದ್‍, ಪೃಥ್ವಿ ಅಂಬರ್, ರಾಚೆಲ್‍ ಡೇವಿಡ್‍, ಅಶ್ವಥಿ, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು ಮುಂತಾದವರು

ಅವರಿಬ್ಬರೂ ಸೇರಬೇಕಾದ ಸ್ಥಳ ಕನ್ಯಾಕುಮಾರಿ. ಇಬ್ಬರ ಹಿನ್ನೆಲೆ ಮತ್ತು ಸಾಗಿ ಬಂದ ದಾರಿ ಮಾತ್ರ ಬೇರೆಬೇರೆ. ಹೀಗೆ ಜತೆಯಾಗಿ ಪ್ರಯಾಣ ಮಾಡುತ್ತಾ ಇಬ್ಬರೂ ತಮ್ತಮ್ಮ ಕಥೆಗಳನ್ನು ಹೇಳಿಕೊಳ್ಳುತ್ತಾರೆ. ಒಬ್ಬನಿಗೆ ತನ್ನಿಂದ ದೂರಾದ ಪತ್ನಿಯನ್ನು ಅಲ್ಲಿಂದ ವಾಪಸ್ಸು ಕರೆದುಕೊಂಡು ಬರುವ ಯೋಚನೆ. ಇನ್ನೊಬ್ಬನಿಗೆ ತಾನು ಇಷ್ಟಪಟ್ಟವಳನ್ನು ಅಲ್ಲಿಗೆ ಸೇರಿಸುವ ಯೋಚನೆ. ಒಂದು ಜಗಳದಿಂದ ಪ್ರಾರಂಭವಾಗುವ ಈ ಪ್ರಯಾಣ, ಕೊನೆಗೆ ಇಬ್ಬರೂ ಹತ್ತಿರವಾಗುವ ಮೂಲಕ ಮುಕ್ತಾಯವಾಗುತ್ತದೆ. ಈ ಮಧ್ಯೆ, ಏನೆಲ್ಲಾ ಆಗುತ್ತದೆ ಎಂಬುದೇ ‘ಭುವನಂ ಗಗನಂ’ ಚಿತ್ರದ ಕಥೆ.

‘ಭುವನಂ ಗಗನಂ’ ಪ್ರೀತಿ ಮತ್ತು ಸಂಬಂಧಗಳ ಕುರಿತಾದ ಚಿತ್ರ. ಕ್ಲಾಸ್‍ ಮತ್ತು ಮಾಸ್‍ ವರ್ಗವನ್ನು ಪ್ರತಿನಿಧಿಸುವ ಚಿತ್ರ. ಎರಡು ವ್ಯತಿರಿಕ್ತ ಜೀವಗಳ ಕುರಿತಾದ ಚಿತ್ರ. ಎರಡರಲ್ಲೂ ಒಂದೊಂದು ಪ್ರೇಮಕಥೆಗಳಿವೆ. ಒಬ್ಬ ತನ್ನ ಪ್ರೀತಿಗಾಗಿ ಹೋರಾಟ ಮಾಡಿದರೆ, ಇನ್ನೊಬ್ಬ ಪ್ರೀತಿಸಿ, ಮದುವೆಯಾದವಳನ್ನು ಉಳಿಸಿಕೊಳ್ಳುವುದಕ್ಕೆ ಏನೆಲ್ಲಾ ಹೋರಾಟ ಮಾಡುತ್ತಾನೆ ಎನ್ನುವುದೇ ಚಿತ್ರದ ಕಥೆ. ಈ ಎರಡೂ ಕಥೆಗಳನ್ನೂ ಒಂದೇ ಚಿತ್ರದಲ್ಲಿ ಕಟ್ಟಿಕೊಡುವ ಮೂಲಕ ಪ್ರೀತಿ ಮತ್ತು ಸಂಬಂಧಗಳ ಬೆಲೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಗಿರೀಶ್‍ ಮೂಲಿಮನಿ.

ಇಡೀ ಚಿತ್ರದಲ್ಲಿ ಫ್ಲಾಶ್‍ಬ್ಯಾಕ್‍ ಅಂಶಗಳೇ ಜಾಸ್ತಿ ಇದೆ. ಪ್ರಯಾಣ ಮಾಡುತ್ತಲೇ ಅಭಿ ಮತ್ತು ರಾಮ್‍ ತಮ್ತಮ್ಮ ಕಥೆಗಳನ್ನು ಹೇಳಿಕೊಳ್ಳುತ್ತಾರೆ. ಮೊದಲಾರ್ಧ ಪೂರಾ ಅಭಿ (ಪ್ರಮೋದ್‍) ಜೀವನ ಬಿಚ್ಚಿಕೊಂಡರೆ, ದ್ವಿತೀಯಾರ್ಧದಲ್ಲಿ ರಾಮ್‍ (ಪೃಥ್ವಿ ಅಂಬಾರ್‍) ಕಥೆ ತೆರೆದುಕೊಳ್ಳುತ್ತದೆ. ಇವೆರಡನ್ನೂ ಬ್ಯಾಲೆನ್ಸ್ ಮಾಡುತ್ತಲೇ ‘ಭುವನಂ ಗಗನಂ’ ನಿರೂಪಿಸುತ್ತಾ ಹೋಗುತ್ತಾರೆ ಗಿರೀಶ್‍. ಇದೊಂದು ಒಳ್ಳೆಯ ಫೀಲ್‍ ಗುಡ್‍ ಚಿತ್ರ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ. ಆದರೆ, ಚಿತ್ರದ ದೊಡ್ಡ ಮೈನಸ್‍ ಎಂದರೆ ಚಿತ್ರದ ವೇಗ.

ಒಂದೊಳ್ಳೆಯ ಕಥೆ ಮಾಡಿಕೊಂಡಿರುವ ಗಿರೀಶ್‍, ಚಿತ್ರಕಥೆಯ ಬಗ್ಗೆಯೂ ಒಂದಿಷ್ಟು ಗಮನಹರಿಸಬೇಕಿತ್ತು. ಎರಡು ವಿಭಿನ್ನ ಹಿನ್ನಲೆಯ ಕಥೆಗಳನ್ನು ಒಂದೇ ಚಿತ್ರದಲ್ಲಿ ದಡ ಮುಟ್ಟಿಸುವುದು ಅಷ್ಟು ಸುಲಭದ ವಿಷಯವಲ್ಲ. ಎರಡೂ ಕಥೆಗಳಿಗೆ ನ್ಯಾಯ ಒದಗಿಸುವುದಕ್ಕೆ ಗಿರೀಶ್‍ ಪ್ರಯತ್ನಸಿದ್ದು, ಅದರಲ್ಲಿ ತಕ್ಕ ಮಟ್ಟಿಗೆ ಗೆಲ್ಲುತ್ತಾರೆ. ಚಿತ್ರ ಎಳೆದಂತಾಗಿದೆ. 157 ನಿಮಿಷದ ಚಿತ್ರವನ್ನು ಇನ್ನಷ್ಟು ಟ್ರಿಮ್‍ ಮಾಡುವ ಅಗತ್ಯತೆ ಇತ್ತು. ಮೊದಲಾರ್ಧ ಹೆಚ್ಚೇನೂ ಆಗುವುದಿಲ್ಲ. ಅಭಿ-ನಂದಿನಿ ಭೇಟಿ, ಅವರ ನಡುವಿನ ಪ್ರೀತಿ, ಮದುವೆ ಮತ್ತು ಆ ನಂತರದ ಸಂಘರ್ಷಗಳೇ ಹೆಚ್ಚಾಗಿ ತೆರೆಯ ಮೇಲೆ ಕಾಣುತ್ತದೆ. ಈ ಭಾಗವನ್ನು ಚೆನ್ನಾಗಿ ಕಟ್ಟಿಕೊಡಲಾಗಿದೆಯಾದರೂ ಅಷ್ಟೇನೂ ವಿಶೇಷವಿಲ್ಲ. ದ್ವಿತೀಯಾರ್ಧದಲ್ಲಿ ಚಿತ್ರ ವೇಗ ಪಡೆದುಕೊಳ್ಳುತ್ತದೆ. ಅದರಲ್ಲೂ ಕೊನೆಯ 20 ನಿಮಿಷಗಳನ್ನು ಮನಮುಟ್ಟುವಂತೆ ಚಿತ್ರೀಕರಿಸಲಾಗಿದೆ. ಪ್ರೇಕ್ಷಕರು ಭಾವುಕರಾಗುವಂತೆ ಕಟ್ಟಿಕೊಡಲಾಗಿದೆ.

ಅಭಿಯಾಗಿ ಪ್ರಮೋದ್‍ ಇಷ್ಟವಾಗುತ್ತಾರೆ. ಬರೀ ಹಾಡು ಮತ್ತು ಫೈಟುಗಳಷ್ಟೇ ಅಲ್ಲ, ಭಾವುಕ ದೃಶ್ಯಗಳನ್ನು ಪ್ರಮೋದ್‍ ನಿರ್ವಹಿಸಿರುವ ರೀತಿ ಖುಷಿಕೊಡುತ್ತದೆ. ಒಂದು ‘ವಿಶೇಷ’ ಪಾತ್ರವನ್ನು ಪೃಥ್ವಿ ಮಾಡುವುದಕ್ಕೆ ಪ್ರಯತ್ನಿದ್ದಾರೆ ಎಂಬುದಕ್ಕೆ ಖುಷಿಪಡಬೇಕಾದರೂ, ಅವರ ಸಾಮರ್ಥ್ಯ ಪರಿಪೂರ್ಣವಾಗಿ ಹೊರಬಂದಿಲ್ಲ. ಹಿರಿಯರಾದ ಶರತ್‍ ಲೋಹಿತಾಶ್ವ, ಅಚ್ಯುತ್‍ ಕುಮಾರ್‍, ‘ಸಿದ್ಲಿಂಗು’ ಶ್ರೀಧರ್‍ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಮತ್ತು ಗುಮ್ಮಿನೇನಿ ವಿಜಯ್ ಸಂಗೀತ ಈ ಚಿತ್ರವನ್ನು ಇನ್ನಷ್ಟು ಚೆಂದಗಾಣಿಸುತ್ತದೆ.

ಪ್ರೀತಿ ಮಾಡುವುದು ಸುಲಭವಲ್ಲ, ಅದನ್ನು ಉಳಿಸಿಕೊಳ್ಳುವುದು ಕಷ್ಟ ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದು ಸಾರುವ ಈ ಚಿತ್ರವನ್ನು ಪ್ರೀತಿಸುವವರು ಮತ್ತು ಪ್ರೀತಿಸಿ ಮದುವೆಯಾದವರು ನೋಡಲೇಬೇಕು.

‘ನಮ್ ಪೈಕಿ ಒಬ್ಬ ಹೋಗ್ಬುಟ …’ ಅಂತಿದ್ದಾರೆ ಯೋಗರಾಜ್ ಭಟ್‍

Latest Posts

Discover more from KannadaScreens

Subscribe now to keep reading and get access to the full archive.

Continue reading