• ಚೇತನ್ ನಾಡಿಗೇರ್
ಚಿತ್ರ: ಅನ್‍ಲಾಕ್ ರಾಘವ
ನಿರ್ದೇಶನ: ದೀಪಕ್ ಮಧುನವನಹಳ್ಳಿ
ನಿರ್ಮಾಣ: ಮಂಜುನಾಥ್ ದಾಸೇಗೌಡ
ತಾರಾಗಣ: ಮಿಲಿಂದ್, ರಚೆಲ್ ಡೇವಿಡ್, ಅವಿನಾಶ್, ಸಾಧು ಕೋಕಿಲ, ಶೋಭರಾಜ್, ಭೂಮಿ ಶೆಟ್ಟಿ, ವೀಣಾ ಸುಂದರ್ ಮುಂತಾದವರು
ಒಮ್ಮೆ ಬೀಗಕ್ಕೆ ಕಿವಿ ಇಟ್ಟು ಒಳಗಿನ ಧ್ವನಿ ಕೇಳಿದರೆ ಮುಗಿಯಿತು, ಎಂಥಾ ಬೀಗವನ್ನಾದರೂ ಆತ ಸಲೀಸಾಗಿ ಬೀಗ ತೆಗೆಯುತ್ತಿರುತ್ತಾನೆ. ಇಂಥಾ ಕಲಾಕಾರನಿಗೆ ಜಾನಕಿ ಒಂದು ಕೆಲಸ ಒಪ್ಪಿಸುತ್ತಾಳೆ. ಅವನು ಬಾಲ್ಯದ ಗೆಳತಿ. ತಂದೆಗೆ ವರ್ಗಾವಣೆಯಾಗಿದ್ದರಿಂದ ಅವನನ್ನು ಬಿಟ್ಟು ಹೋಗಿರುತ್ತಾಳೆ. ಎಷ್ಟೋ ವರ್ಷಗಳ ನಂತರ ಪುನಃ ಬಂದರೂ, ರಾಘವನಿಗೆ ಅವಳು ತನ್ನ ಜಾನಕಿ ಎಂದು ಗೊತ್ತಾಗುವುದಿಲ್ಲ. ಗೊತ್ತಾಗಬೇಕು ಎನ್ನುವಷ್ಟರಲ್ಲೇ, ಒಂದು ಜಮೀನನಲ್ಲಿ ಒಂದು ನಿಧಿ ಸಿಗುತ್ತದೆ. ಅದನ್ನು ಉಳಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಜಾನಕಿ ಕಳೆದು ಹೋಗುತ್ತಾಳೆ. ಬೇರೆಯವರು ಲಾಕ್, ಆದಾಗ ಅವರನ್ನು ಪಾರು ಮಾಡಿ ನಿರಾಳನ್ನಾಗಿಸುವ ರಾಘವ, ಈಗ ತಾನೇ ಲಾಕ್ ಆಗುತ್ತಾನೆ. ಈ ಸಮಸ್ಯೆಯನ್ನು ರಾಘವ ಹೇಗೆ ಅನ್‍ಲಾಕ್ ಮಾಡುತ್ತಾನೆ? ಎನ್ನುವುದೇ ಚಿತ್ರದ ಕಥೆ.
‘ಅನ್‍ಲಾಕ್ ರಾಘವ್’ ಒಂದು ಮನರಂಜನೆಯ ಚಿತ್ರ. ಅದರಲ್ಲೂ ಒಬ್ಬ ಹೊಸ ಹುಡುಗನನ್ನು ಗಮನದಲ್ಲಿಟ್ಟುಕೊಂಡೇ ಕಥೆ ಹೆಣೆಯಲಾಗಿದೆ. ಅದಕ್ಕೆ ಬೇಕಾದ ಏನೆಲ್ಲಾ ಅಂಶಗಳು ಬೇಕೋ ಅದೆಲ್ಲವನ್ನೂ ಚಿತ್ರದಲ್ಲಿ ಸೇರಿಸಲಾಗಿದೆ. ವಿಶೇಷವೆಂದರೆ, ಚಿತ್ರಕ್ಕೆ ರಾಮಾಯಣದ ಹಿನ್ನೆಲೆಯೂ ಇದೆ. ರಾಘವ, ಜಾನಕಿಯ ಜೊತೆಗೆ ಇಲ್ಲೊಬ್ಬ ರಾವಣನೂ ಇದ್ದಾನೆ. ಅವನ್ಯಾಕೆ ಬರುತ್ತಾನೆ, ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸುತ್ತಾನೆ ಎಂಬುದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.
ಜನರನ್ನು ನಗಿಸುವ ಮೂಲಕ ಮನರಂಜಿಸಬೇಕು ಎಂದು ಚಿತ್ರತಂಡ ಮೊದಲೇ ನಿರ್ಧರಿಸಿಬಿಟ್ಟಿರುವುದರಿಂದ, ಇಲ್ಲಿ ಲಾಜಿಕ್‍ಗೆ ಬೆಲೆಯಿಲ್ಲ. ಅದರಲ್ಲೂ ಸಾಧು ಕೋಕಿಲ ತಲೆಗೆ ಪೆಟ್ಟು ಬಿದ್ದು, ಹಳೆಯದನ್ನು ಮರೆತು, ಜಾಪನೀಸ್ ಭಾಷೆ ಮಾತನಾಡುವ ದೃಶ್ಯಗಳು, ಅವರ ಅಭಿಮಾನಿಗಳಿಗೆ ಖುಷಿ ಕೊಡುತ್ತದೆ. ಮಿಕ್ಕಂತೆ ಧರ್ಮಣ್ಣ, ಮೂಗು ಸುರೇಶ್ ಮುಂತಾದವರೆಲ್ಲಾ ನಗಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಪ್ರೇಕ್ಷಕರು ಎಷ್ಟು ನಗುತ್ತಾರೆ ಎನ್ನುವುದು ಅವರಿಗೆ ಬಿಟ್ಟಿದ್ದು.
ಜನಕ್ಕೆ ಬೋರ್ ಮಾಡಬಾರದು ಎಂದು ನಿರ್ದೇಶಕ ದೀಪಕ್‍ಗೆ ಚೆನ್ನಾಗಿ ಗೊತ್ತಾಗಿದೆ. ಹಾಗಾಗಿ, ಚಿತ್ರದಲ್ಲಿ ಅವರು ಆಗಿಂದ್ದಾಗ್ಗೆ ಹಲವು ತಿರುವುಗಳನ್ನು ತರುತ್ತಾರೆ. ಅದರ ನಡುವೆಯೂ ಚಿತ್ರ ಕೆಲವೊಮ್ಮೆ ನಿಧಾನಕ್ಕೆ ಸಾಗುತ್ತದೆ. ಹಾಗಂತ ಈ ತಿರುವುಗಳು ಊಹಿಸಲಾರದ್ದೇನೂ ಅಲ್ಲ, ಅಂದುಕೊಂಡಂತೆಯೇ ಚಿತ್ರ ಸಾಗುತ್ತದೆ, ಅಂದುಕೊಂಡಂತೆಯೇ ಮುಗಿಯುತ್ತದೆ. ಹಾಗಂತ ಚಿತ್ರ ಮುಗಿದಿದೆ ಎಂದು ಹೇಳುವುದು ತಪ್ಪಾಗುತ್ತದೆ. ಒಂದು ನಿರ್ಣಾಯಕ ಹಂತಕ್ಕೆ ತಂದು ನಿಲ್ಲಿಸಲಾಗಿದೆ. ಈ ಚಿತ್ರ ಗೆದ್ದರೆ ‘ಅನ್‍ಲಾಕ್ ರಾಘವ 2’ ಬಂದರೂ ಆಶ್ಚರ್ಯವಿಲ್ಲ.
ಇಲ್ಲಿ ಲಾಕ್ ಎನ್ನುವುದು ಬರೀ ಬೀಗವಷ್ಟೇ ಅಲ್ಲ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಪರಿಸ್ಥಿತಿಯಲ್ಲಿ ಸಿಕ್ಕಿ, ಅದರಿಂದ ಹೊರಬರುವುದಕ್ಕೆ ಒದ್ದಾಡುತ್ತಿರುತ್ತಾರೆ. ಆ ಬೀಗ ತೆಗೆದು, ಜನರನ್ನು ಅನ್‍ಲಾಕ್ ಮಾಡುವ ಒಳಾರ್ಥವೂ ಚಿತ್ರದಲ್ಲಿದೆ. ಆದರೆ, ಅದು ಬಾಯ್ಮಾತಿನಲ್ಲಿ ಕೇಳಿಬರುತ್ತದಾದರೂ, ಚಿತ್ರದಲ್ಲಿ ಅದಕ್ಕೊಂದು ಸಮಂಜಸ ವಿವರಣೆ ಇಲ್ಲ. ಕಮರ್ಷಿಯಲ್ ಅಂಶಗಳ ಎದುರು ಚಿತ್ರದ ಒಳಾರ್ಥಗಳು, ಪದರಗಳು ಗೌಣವಾಗುತ್ತವೆ.
ಮಿಲಿಂದ್ ಈ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ಮತ್ತು ಹಾಡುಗಳಲ್ಲಿ ಗಮನಸೆಳೆಯುತ್ತಾರೆ. ಮುಂದೊಮ್ಮೆ ಅವರು ಮಾಸ್ ಹೀರೋ ಆಗಿ ಮಿಂಚುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಮಿಕ್ಕಂತೆ, ಒಬ್ಬ ನಟನನ್ನಾಗಿ ಸಾಬೀತುಪಡಿಸಿಕೊಳ್ಳುವುದಕ್ಕೆ ಅವರಿಗೆ ಹೆಚ್ಚು ದೃಶ್ಯಗಳಿಲ್ಲ. ರಾಚೆಲ್ ಡೇವಿಡ್ ಮುದ್ದಾಗಿ ಕಾಣಿಸುತ್ತಾರೆ. ರಾಘವ ಮತ್ತು ಜಾನಕಿಯ ಪ್ರೇಮಕಥೆ ತೀವ್ರವಾಗಿರದಿದ್ದರೂ, ಅವರಿಬ್ಬರ ನಡುವಿನ ಕೆಮಿಸ್ಟ್ರಿ ಚೆನ್ನಾಗಿದೆ. ಚಿತ್ರದ ನಿಜವಾದ ಸರ್‍ಪ್ರೈಸ್ ಎಂದರೆ ಶೋಭರಾಜ್. ಬಹಳ ದಿನಗಳ ನಂತರ ಶೋಭರಾಜ್ ಸಿಕ್ಸರ್ ಬಾರಿಸಿದ್ದಾರೆ. ಅವಿನಾಶ್, ರಮೇಶ್ ಭಟ್, ಭೂಮಿ ಶೆಟ್ಟಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ.
ಒಟ್ಟಿನಲ್ಲಿ ಮನರಂಜನೆಯ ಮೂಲಕ, ನಗುವಿನ ಮೂಲಕ ಪ್ರೇಕ್ಷಕರನ್ನು ಅನ್‍ಲಾಕ್ ಆಗಿಸುವ ಪ್ರಯತ್ನವನ್ನು ‘ಅನ್‍ಲಾಕ್ ರಾಘವ’ ಚಿತ್ರದಲ್ಲಿ ಮಾಡಲಾಗಿದೆ. ಪ್ರೇಕ್ಷಕರು ಹಗುರಾದರೆ, ಇನ್ನೊಂದು ಅನ್‍ಲಾಕ್ ಪ್ರಯತ್ನವಾಗಬಹುದು.


