ಧನುಶ್ ಬ್ಯಾನ್‍: ನಟನ ಪರ ನಿಂತ ತಮಿಳಿನ ಕಲಾವಿದರ ಸಂಘ

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ನಟ ಧನುಶ್‍ ಅವರಿಗೆ ರೆಡ್‍ ಕಾರ್ಡ್‍ ಕೊಡಬೇಕು ಎಂದು ತಮಿಳು ಚಿತ್ರ ನಿರ್ಮಾಪಕರ ಕೌನ್ಸಿಲ್‍ ನಿರ್ಧಾರಕ್ಕೆ ನಡಿಗರ್‍ ಸಂಘಂ (ತಮಿಳು ಚಲನಚಿತ್ರ ಕಲಾವಿದರ ಸಂಘ ಆಕ್ಷೇಪಣೆ ಎತ್ತಿದೆ. ತಮ್ಮನ್ನು ಕೇಳದೆ ಇಂಥದ್ದೊಂದು ನಿರ್ಧಾರಕ್ಕೆ ಬಂದಿರುವುದರಿಂದ, ಯಾವುದೇ ಕಾರಣಕ್ಕೂ ಧನುಶ್‍ ಅವರನ್ನು ಬ್ಯಾನ್ ‍ಮಾಡುವುದಕ್ಕೆ ಒಪ್ಪುವುದಿಲ್ಲ ಎಂದು ಖಡಕ್‍ ಆಗಿ ಹೇಳಿದೆ.

ಸತತ ಸೋಲು ಮತ್ತು ನಷ್ಟಗಳಿಂದ ಕಂಗೆಟ್ಟಿರುವ ತಮಿಳು ಚಿತ್ರರಂಗವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ತಮಿಳು ಚಿತ್ರ ನಿರ್ಮಾಪಕರ ಕೌನ್ಸಿಲ್ (TNPC) ಇತ್ತೀಚೆಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿತ್ತು. ತಮಿಳು ನಾಡು ಚಿತ್ರಮಂದಿರಗಳ ಸಂಘ, ತಮಿಳು ನಾಡು ಮಲ್ಟಿಪ್ಲೆಕ್ಸ್ ಮಾಲೀಕರ ಸಂಘ ಮತ್ತು ತಮಿಳು ನಾಡು ವಿತರಕರ ಸಂಘದ ಪ್ರತಿನಿಧಿಗಳು ಸಹ ಈ ಸಭೆಯಲ್ಲಿ ಹಾಜರಿದ್ದು, ಅವರೆಲ್ಲರ ಸಮ್ಮುಖದಲ್ಲಿ ಒಕ್ಕೊರಲ ತೀರ್ಮಾನ ತೆಗೆದುಕೊಳ್ಳಲಾಗಿತ್ತು

ಅದರಂತೆ ಆಗಸ್ಟ್ 16ರಿಂದ ಯಾವೊಂದು ಹೊಸ ಚಿತ್ರವು ಪ್ರಾರಂಭವಾಗುವಂತಿಲ್ಲ. ಅದಕ್ಕೂ ಮೊದಲೇ ಚಿತ್ರದ ಕೆಲಸಗಳು ಶುರುವಾಗಬೇಕು. ಹಾಗೆಯೇ ಈಗ ಚಾಲ್ತಿಯಲ್ಲಿರುವ ಚಿತ್ರೀಕರಣ ಚಟುವಟಿಕೆಗಳನ್ನು ಅಕ್ಟೋಬರ್ 30ರೊಳಗೆ ಮುಗಿಸಬೇಕು. ಆ ನಂತರ ನವೆಂಬರ್‍ ಒಂದರಿಂದ ಚಿತ್ರೀಕರಣ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ ಎಂದು ಹೇಳಲಾಗಿದೆ. ಹಾಗೆಯೇ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಎಂಟು ವಾರಗಳ ನಂತರವೇ ಓಟಿಟಿಯಲ್ಲಿ ಬಿಡುಗಡೆ ಆಗಬೇಕೆಂದು ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಈ ಸಭೆಯಲ್ಲಿ ಕೆಲವು ನಿರ್ಮಾಪಕರು ನಟ ಧನುಶ್ ಬಗ್ಗೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೇಳಿಕೊಂಡಿದ್ದರು. ಧನುಶ್‍ ಹಲವು ನಿರ್ಮಾಪಕರಿಂದ ಮುಂಗಡ ಪಡೆದು ಚಿತ್ರ ಮಾಡಿಕೊಟ್ಟಿಲ್ಲ ಎಂಬ ಆರೋಪ ಅವರ ಮೇಲಿದೆ. ಹಾಗಾಗಿ, ಧನುಶ್‍ ಜೊತೆಗೆ ಚಿತ್ರ ಮಾಡುವುದಕ್ಕೆ ಮುಂದಾಗಿರುವವರು ಮೊದಲು ನಿರ್ಮಾಪಕರ ಸಂಘದವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಆ ನಂತರ ಮುಂದುವರೆಯಬೇಕೆಂದು ಕೋರಲಾಗಿದೆ.

ಈ ವಿಚಾರವಾಗಿ ಕಲಾವಿದರ ಸಂಘ ಆಕ್ಷೇಪಣೆ ಎತ್ತಿದೆ. ಸಂಘದ ಪರವಾಗಿ ಪತ್ರಿಕಾಗೋಷ್ಠಿ ನಡೆಸಿರುವ ನಟ ಮತ್ತು ಕಾರ್ಯದರ್ಶಿ ಕಾರ್ತಿ, ಧನುಶ್‍ ಅವರಿಗೆ ರೆಡ್‍ ಕಾರ್ಡ್ ಕೊಟ್ಟಿರುವ ಬಗ್ಗೆ ಸಂಘದ ಆಕ್ಷೇಪವಿದೆ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಯಾವುದೇ ವಿಷಯವಾದರೂ ಸಮಗ್ರವಾಗಿ ಎಲ್ಲರ ಜೊತೆಗೆ ಚರ್ಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಆದರೆ, ಧನುಶ್‍ ವಿಚಾರ ನಮ್ಮ ಸಭೆಯಲ್ಲಿ ಪ್ರಸ್ತಾಪವೇ ಆಗಿಲ್ಲ. ಧನುಶ್‍ ಅವರನ್ನು ಬ್ಯಾನ್‍ ಮಾಡುವ ಕುರಿತು ನಮಗೆ ಒಪ್ಪಿಗೆ ಇಲ್ಲ. ಸಮಸ್ಯೆ ಇದ್ದರೆ ಕೂತು ಬಗೆಹರಿಸಿಕೊಳ್ಳಬಹುದು. ಹಾಗಂತ ಬ್ಯಾನ್ ಮಾಡುವುದು ಎಷ್ಟು ಸರಿ?’ ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನು, ಚಿತ್ರೀಕರಣ ಚಟುವಟಿಕೆಗಳನ್ನು ನಿಲ್ಲಿಸುವ ಬಗ್ಗೆಯೂ ಸಂಘದ ಒಪ್ಪಿಗೆ ಇಲ್ಲ ಎಂದು ಕಾರ್ತಿ ಹೇಳಿದ್ದಾರೆ. ‘ನವೆಂಬರ್‍ ಒಂದರಿಂದ ಚಿತ್ರೀಕರಣ ನಿಲ್ಲಿಸುವ ಬಗ್ಗೆಯೂ ನಮಗೆ ಒಪ್ಪಿಗೆ ಇಲ್ಲ. ಈ ವಿಷಯ ಸಹ ಚರ್ಚೆ ಆಗಿಲ್ಲ. ಸಿನಿಮಾ ಎಂದರೆ ಬರೀ ಕಲಾವಿದರಷ್ಟೇ, ತೆರೆಯ ಹಿಂದೆ ಸಾವಿರಾರು ಜನ ಕೆಲಸ ಮಾಡುತ್ತಿರುತ್ತಾರೆ. ಚಿತ್ರೀಕರಣ ನಿಲ್ಲಿಸಿದರೆ ಅವರ ಕಥೆಯೇನು? ಹಾಗಾಗಿ, ನಾವು ಇದನ್ನು ಒಪ್ಪುವುದಿಲ್ಲ. ಈ ಕುರಿತು ಚರ್ಚೆಗಳಾಗಿ, ಆ ನಂತರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.

ಅರೇಬಿಕ್‍ ಭಾಷೆಗೆ ಡಬ್‍ ಆಯ್ತು ರಾಜ್‍ ಬಿ. ಶೆಟ್ಟಿ ಅಭಿನಯದ ಚಿತ್ರ …

Latest Posts

Discover more from KannadaScreens

Subscribe now to keep reading and get access to the full archive.

Continue reading