ಸೋಮಾರಿ ಸಹೋದರರ ಕಥೆ ‘ರಮೇಶ್‍ ಸುರೇಶ್‍’ …

ಚಂದನವನ, ಸಿನಿ ಸುದ್ದಿ

ಕ್ಯಾಡ್ಬರಿ ಜಾಹೀರಾತಿನಲ್ಲಿ ರಮೇಶ, ಸುರೇಶ ಎಂಬ ಪಾತ್ರಗಳನ್ನು ನೆನಪಿರಬಹುದು. ಈ ಜಾಹೀರಾತುಗಳು ಕೆಲವು ವರ್ಷಗಳ ಹಿಂದೆ ಕಿರುತೆರೆಯಲ್ಲಿ ಕಾಣಿಸಿಕೊಂಡಾಗ, ಬಹಳ ಜನಪ್ರಿಯವಾಗಿದ್ದವು. ಈಗ ಅದೇ ರಮೇಶ ಮತ್ತು ಸುರೇಶ ಎಂಬ ಪಾತ್ರಗಳ ಹೆಸರಿಟ್ಟುಕೊಂಡು, ‘ರಮೇಶ್‍ ಸುರೇಶ್‍’ ಎಂಬ ಚಿತ್ರ ಮಾಡಲಾಗಿದೆ.

ಆರ್‍.ಕೆ. ಟಾಕೀಸ್‍ ಬ್ಯಾನರ್‍ನಡಿ ಪಿ. ಕೃಷ್ಣ ಮತ್ತು ಬಿ. ಶಂಕರ್‍ ನಿರ್ಮಿಸಿರುವ ಈ ಚಿತ್ರವು ಜೂನ್‍ 21ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಟ್ರೇಲರ್‍ ಬಿಡುಗಡೆ ಆಗಿದೆ. ಗುಬ್ಬಿ ವೀರಣ್ಣನವರ ಮರಿಮೊಮ್ಮಗ ಬೆನಕ್‍ ಗುಬ್ಬಿ ವೀರಣ್ಣ ಹಾಗೂ ಯಶು ರಾಜ್‍ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ನಾಗರಾಜ್‍ ಮಾಳೇನಹಳ್ಳಿ  ಮತ್ತು ರಘುರಾಜ್‍ ಗೌಡ ಈ ಚಿತ್ರವನ್ನು ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ನಾಗರಾಜ್‍, ‘ಎರಡು ಪಾತ್ರಗಳ ಸುತ್ತ ಸುತ್ತುವ ಚಿತ್ರ ಇದು. ಎರಡೂ ಪಾತ್ರಗಳಿಗೆ ಯಾವುದೇ ಗುರಿ ಇಲ್ಲ. ಕೆಲಸ ಮಾಡುವುದಕ್ಕೆ ಇಷ್ಟ ಇಲ್ಲ. ಎಲ್ಲರ ಹತ್ತಿರ ಸಾಲ ಮಾಡಿಕೊಂಡು, ಮೋಸ ಮಾಡಿಕೊಂಡು ಬದುಕುವ ಈ ಸೋಮಾರಿ ಸಹೋದರರ ಮೇಲೆ ಜವಾಬ್ದಾರಿ ಬಿದ್ದಾಗ, ಅವರು ಅದನ್ನು ಹೇಗೆ ನಿಭಾಯಿಸುತ್ತಾರೆ, ಸಮಸ್ಯೆಗಳಿಗೆ ಹೇಗೆ ಪರಿಹಾರ ಹುಡುಕುತ್ತಾರೆ ಎಂದು ಹೇಳುವ ಚಿತ್ರವಿದು. ಇದೊಂದು ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್‍ ಚಿತ್ರವಾಗಿದ್ದು, ಹಾರರ್‍ ಅಂಶಗಳೂ ಇವೆ’ ಎಂದರು.

ಗುಬ್ಬಿ ವೀರಣ್ಣನವರ ಮರಿಮೊಮ್ಮಗ ಬೆನಕ್‍ ಗುಬ್ಬಿ ವೀರಣ್ಣ, ಟೆಂಟ್‍ ಸಿನಿಮಾ ಶಾಲೆಯಲ್‍ಲಿ ಕಲಿತು ಬಂದವರಂತೆ. ‘ಇದೊಂದು ವಿಭಿನ್ನ ಪ್ರಯೋಗ. ಚಿತ್ರ ನೋಡಿದವರಿಗೆ ಖಂಡಿತಾ ಖುಷಿಯಾಗುತ್ತದೆ. ಕಾಮಿಡಿ, ಥ್ರಿಲ್ಲರ್‍ ಅಂಶಗಳಿವೆ’ ಎಂದರೆ, ಮತ್ತೊಬ್ಬ ನಾಯಕ ಯಶು ರಾಜ್‍ ಮಾತನಾಡಿ, ‘ಚಿತ್ರ ಎಲ್ಲೂ ಬೋರ್‍ ಆಗುವುದಿಲ್ಲ. ಚೆನ್ನಾಗಿ ನೋಡಿಸಿಕೊಂಡು ಹೋಗುತ್ತದೆ’ ಎಂದರು.

‘ರಮೇಶ್‍ ಸುರೇಶ್‍’ ಚಿತ್ರದಲ್ಲಿ ಬೆನಕ್‍ ಮತ್ತು ಯಶು ಜೊತೆಗೆ ಸಾಧು ಕೋಕಿಲ, ಮೋಹನ್‍ ಜನೇಜ, ರಂಗನಾಥ್‍ ನೀನಾಸಂ, ಉಮಾ, ಚೆನ್ನಕೇಶವ, ಸತ್ಯಪ್ರಕಾಶ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಶ್ವಜಿತ್‍ ರಾವ್‍ ಛಾಯಾಗ್ರಹಣ ಮತ್ತು ನವನೀತ್‍ ಚಾರಿ ಅವರ ಸಂಗೀತವಿದೆ.

ಕುಂದಾಪುರಕ್ಕೆ ಶಿಫ್ಟ್ ಆದ ರಿಷಭ್‍; ಕಾರಣ ‘ಕಾಂತಾರ 1’

Discover more from KannadaScreens

Subscribe now to keep reading and get access to the full archive.

Continue reading