ಕನ್ನಡ ಚಿತ್ರರಂಗ ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ, ಸ್ಯಾಟಿಲೈಟ್ ಹಕ್ಕುಗಳನ್ನು ಯಾರೂ ಕೊಳ್ಳುತ್ತಿಲ್ಲ, ಪ್ರಮುಖವಾಗಿ ಹೀರೋಗಳು ಎರಡ್ಮೂರು ವರ್ಷಕ್ಕೊಂದು ಚಿತ್ರ ಮಾಡುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಇದುವರೆಗೂ ಎಲ್ಲರೂ ಮಾತಾಡುತ್ತಿದ್ದರೇ ಹೊರತು, ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ ಇದೇ ಮೊದಲ ಬಾರಿಗೆ ಹೆಜ್ಜೆ ಇಟ್ಟಿದ್ದು, ಮುಂದಿನ ಒಂದು ತಿಂಗಳೊಳಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೆಜ್ಜೆ ಇಟ್ಟಿದೆ. ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಚಿತ್ರಮಂದಿರಗಳು ಬಂದ್ ಆಗುವ ಸಾಧ್ಯತೆ ಇದೆ.
ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಡೆದಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಚಿತ್ರರಂಗದ ಹಲವರು ಭಾಗವಹಿಸಿದ್ದಾರೆ.
ಈ ಸಭೆಯಲ್ಲಿ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಹಿರಿಯ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಇದ್ದರು. ಈ ಸಭೆಯಲ್ಲಿ ಚಿತ್ರರಂಗದ ಹಲವು ಸಮಸ್ಯೆಗಳ ಕುರಿತು ಚರ್ಚೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಚರ್ಚಿಸಲಾಯಿತು. ಪ್ರಮುಖವಾಗಿ ಕನ್ನಡ ಚಿತ್ರರಂಗದ ಹಲವು ಅಂಗಸಂಸ್ಥೆಗಳ ಜೊತೆಗೆ ಮಾತನಾಡಬೇಕು ಮತ್ತು ಪರಿಹಾರ ಕಂಡುಕೊಳ್ಳಬೇಕು ಎಂದು ಚರ್ಚಿಸಲಾಗಿದೆ.
ಪ್ರಮುಖವಾಗಿ ಸ್ಟಾರ್ ನಟರು ವರ್ಷಕ್ಕೆ ಎರಡ್ಮೂರು ಚಿತ್ರಗಳಲ್ಲಿ ನಟಿಸಬೇಕು ಎಂಬುದನ್ನು ಕಲಾವಿದರ ಸಂಘಕ್ಕೆ ಮನವಿ ಮಾಡಲಾಗುತ್ತದಂತೆ. ಒಂದು ತಿಂಗಳೊಳಗೆ ಎಲ್ಲರೂ ಸ್ಪಂದಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಒಂದು ಪಕ್ಷ ಸೂಕ್ತ ಸ್ಪಂದನೆ ಸಿಗದಿದ್ದರೆ, ಜೂನ್ 20ರಿಂದ ಚಿತ್ರಮಂದಿರಗಳನ್ನು ಬಂದ್ ಮಾಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಮಂಡಳಿಯ ಈ ಹೆಜ್ಜೆಗೆ ಚಿತ್ರಂಗದ ಬೇರೆ ವಲಯಗಳು ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.


