ಪುನೀತ್ ರಾಜಕುಮಾರ್ ತಮ್ಮ ಪಿ.ಆರ್.ಕೆ. ಪ್ರೊಡಕ್ಷನ್ಸ್ನಿಂದ ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಪೈಕಿ ಅವರು ಕೇಳಿ ಮೆಚ್ಚಿ ನಿರ್ಮಿಸಿದ ಕೊನೆಯ ಕಥೆ ಇದೇ ಏಪ್ರಿಲ್ 19ಕ್ಕೆ ಬಿಡುಗಡೆಯಾಗುತ್ತಿದೆ. ಅದೇ ‘ಓ2’.
ಈ ಚಿತ್ರದ ಬಗ್ಗೆ ಚಿತ್ರತಂಡ ಇದುವರೆಗೂ ಹೆಚ್ಚು ಮಾತನಾಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಚಿತ್ರತಂಡದವರು ‘ಓ2’ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ರಾಜ್ ಹಾಗೂ ರಾಘವ್ ನಾಯಕ್ ಜೊತೆಯಾಗಿ ನಿರ್ದೇಶಿಸಿದರೆ, ರಾಘವ್ ನಾಯಕ್ ನಿರ್ದೇಶನದ ಜೊತೆಗ ಒಂದು ಮುಖ್ಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ಚಿತ್ರದ ಕುರಿತು ಮಾತನಾಡುವ ನಿರ್ದೇಶಕದ್ವಯರು, ‘’ಮಾಯಾಬಜಾರ್’ ಚಿತ್ರದ ರಾಧಾಕೃಷ್ಣ ಅವರ ಮೂಲಕ ನಮಗೆ ಪುನೀತ್ ರಾಜಕುಮಾರ್ ಅವರ ಪರಿಚಯವಾಯಿತು. ಈ ಚಿತ್ರದ ಕಥೆ ಕೇಳಿದ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಿರ್ಮಾಣಕ್ಕೆ ಮುಂದಾದರು. ‘O2’ ಒಂದು ಮೆಡಿಕಲ್ ಥ್ರಿಲ್ಲರ್ ಚಿತ್ರ. ಅದರ ಜೊತೆಗೆ ಪ್ರೀತಿ, ಅನಿರೀಕ್ಷಿತ ತಿರುವುಗಳು ಹಾಗೂ ಮನರಂಜನೆ ಕೂಡ ಇದೆ. ಕನ್ನಡದಲ್ಲಿ ಈ ರೀತಿಯ ಕಥೆ ವಿರಳ ಎನ್ನಬಹದು’ ಎಂದರು.
ಇದು ಅಪ್ಪು ಅವರು ಇದ್ದಾಗ ಕೇಳಿದ ಕಥೆ ಎಂದು ಮಾತನಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ‘ನಾನು ಹಾಗೂ ಅವರು ಇಬ್ಬರು ಒಟ್ಟಿಗೆ ಈ ಕಥೆ ಕೇಳಿದ್ದೆವು. ಇದು ಅಪ್ಪು ಅವರು ಕೇಳಿದ ಕೊನೆಯ ಕಥೆ. ‘O2’ ಈಗ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದ ಹಾಡು ಹಾಗೂ ಕ್ಕೈಮ್ಯಾಕ್ಸ್ ನನಗೆ ಬಹಳ ಇಷ್ಟವಾಯಿತು. ಏಪ್ರಿಲ್ 19ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ’ ಎಂದರು.
ಆಶಿಕಾ ಇಲ್ಲಿ ಶ್ರದ್ದಾ ಎಂಬ ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬ್ಯಾನರ್ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ ಎಂದರೆ, ಪುನೀತ್ ರಾಜಕುಮಾರ್ ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುವ ಆವಕಾಶ ಸಿಕ್ಕಾಗ ತುಂಬಾ ಸಂತೋಷವಾಯಿತು ಎಂದರು ಚಿತ್ರದಲ್ಲಿ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರವೀಣ್ ತೇಜ್.
‘ಓ2’ ಚಿತ್ರಕ್ಕೆ ವಿವಾನ್ ರಾಧಾಕೃಷ್ಣ, ಹಾಗೂ ನವೀನ್ ಕುಮಾರ್ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಆಶಿಕಾ ರಂಗನಾಥ್, ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ, ಪುನೀತ್ ಬಿ.ಎ ಮುಂತಾದವರು ನಟಿಸಿದ್ದಾರೆ.


