ಇದುವರೆಗೂ ಕನ್ನಡದಲ್ಲಿ ಹಲವು ವಿಭಿನ್ನ ಮಕ್ಕಳ ಸಿನಿಮಾಗಳು ಬಂದಿವೆ. ಈಗ ಚಿತ್ರೀಕರಣ ಮುಗಿದಿದರುವ ‘ಜರ್ನಿ ಆಫ್ ಬೆಳ್ಳಿ’ ಕೂಡಾ ಅದೇ ಸಾಲಿಗೆ ಸೇರಲು ಸಜ್ಜಾಗಿದೆ. ಒಬ್ಬ ಪುಟ್ಟ ಹುಡುಗಿಯ ಸುತ್ತ ಸುತ್ತುವ ಕಥೆ ಇರುವ ಚಿತ್ರ ಇದಾಗಿದ್ದು, ಪುಟ್ಟ ಹುಡುಗಿಯೊಬ್ಬಳ ದೃಷ್ಟಿಕೋನದಲ್ಲಿ, ಆರ್ಮಿ ಫ್ಯಾಮಿಲಿಯ ಒಡನಾಟದಲ್ಲಿ ತೆರೆದುಕೊಳ್ಳುವ ಕಥೆಯೇ ಈ ‘ಜರ್ನಿ ಆಫ್ ಬೆಳ್ಳಿ’.
ಈ ಹಿಂದೆ ಜೀ ಕನ್ನಡ ವಾಹಿನಿಯ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಗೌರಿ ಶ್ರೀನಿವಾಸ್, ಆ ನಂತರ ಹಲವಾರು ದಿಕ್ಕುಗಳಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮದೇ ಲಿಚಿ ಫಿಲಂಸ್ ಸಂಸ್ಥೆ ಕಟ್ಟಿದವರು. ಅದಾದ ಬಳಿಕ ಒಂದಷ್ಟು ಸಾಕ್ಷ್ಯಚಿತ್ರಗಳು, ಕಾಪೋರೇಟ್ ಜಾಹೀರಾತುಗಳನ್ನು ಸೃಷ್ಟಿಸುವ ಮೂಲಕ ಅನುಭವ ಜಗತ್ತನ್ನು ವಿಸ್ತರಿಸಿಕೊಂಡವರು. ಇವರೇ ನಿರ್ಮಾಣ ಮಾಡಿದ್ದ ಮದ್ಯಪ್ರದೇಶದ ಹ್ಯಾಂಡ್ಲೂಮ್ ಉದ್ಯಮದ ಕುರಿತಾದ `The Woven Motifs of Chanderi’ ಎಂಬ ಸಾಕ್ಷ್ಯಚಿತ್ರಕ್ಕೆ ಇತ್ತೀಚೆಗಷ್ಟೇ ಪ್ರಶಸ್ತಿ ಲಭಿಸಿದೆ. ಇಷ್ಟೆಲ್ಲ ಅನುಭವ ಪಡೆದುಕೊಂಡ ನಂತರ ಅವರು ‘ಜರ್ನಿ ಆಫ್ ಬೆಳ್ಳಿ’ ಕಥೆ ಮಾಡಿಕೊಂಡು, ಚಿತ್ರ ಮುಗಿಸಿದ್ದಾರೆ.
ಸಮನ್ವಿ ಪಾಟೀಲ್ ಈ ಚಿತ್ರದ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾಳೆ. ಮಕ್ಕಳಲ್ಲಿ ಹೊಸಾ ಆಲೋಚನೆ ತುಂಬಬಲ್ಲ, ಎಳೆಯ ಮನಸುಗಳ ಭಾವಲೋಕದಲ್ಲಿ ಸಮ್ಮೋಹಕವಾದ ಛಾಪುಮೂಡಿಸಬಲ್ಲ ಈ ಸಿನಿಮಾ, ಎಲ್ಲ ವಯೋಮಾನದವರಿಗೂ ಹಿಡಿಸುವಂತಿದೆ ಎಂಬುದು ಚಿತ್ರತಂಡದ ಭರವಸೆ. ಇದುವರೆಗೂ ಹೆಮ್ಮೆಯ ಸೈನಿಕರ ಜೀವನಗಾಥೆಯ ನಾನಾ ಮಜಲುಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ, ಪುಟ್ಟ ಮಗುವೊಂದರ ಕಣ್ಣುಗಳಲ್ಲಿ ಕದಲೋ ಕಥೆ ಕನ್ನಡದ ಮಟ್ಟಿಗೆ ಹೊಸದು. ಅಂಥಾದ್ದೊಂದು ಪ್ರಯತ್ನ ಈ ಚಿತ್ರದಲ್ಲಾಗಿದೆ.
ಈ ಹಿಂದೆ, ತುಳು ಭಾಷೆಯಲ್ಲಿ ‘ಕಾರ್ನಿಕೊದ ಕಲ್ಲುರ್ಟಿ’ ಚಿತ್ರ ನಿರ್ಮಿಸಿದ್ದ ಮಹೇಂದ್ರ ಕುಮಾರ್, ‘ಜರ್ನಿ ಆಫ್ ಬೆಳ್ಳಿ’ಯ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿದ್ದು, ಸದ್ಯದಲ್ಲೇ ಈ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಹೊರಬೀಳಲಿವೆ.


