ಎರಡು ಚಾನಲ್‍ಗಳಲ್ಲಿ ಒಂದೇ ಕಾರ್ಯಕ್ರಮ; ಅ.16ರಿಂದ ‘ಫಿಟ್‍ ಬಾಸ್‍’

ಕಿರುತೆರೆ, ಚಂದನವನ, ಸಿನಿ ಸುದ್ದಿ

ಸಾಮಾನ್ಯವಾಗಿ ಒಂದು ಹೊಸ ಕಾರ್ಯಕ್ರಮವು ಒಂದೇ ಚಾನಲ್‍ನಲ್ಲಿ ಪ್ರಸಾರವಾಗುವುದು ವಾಡಿಕೆ. ಇದೇ ಮೊದಲ ಬಾರಿಗೆ ಒಂದು ಹೊಸ ಕಾರ್ಯಕ್ರಮವು ಎರಡೆರಡು ಚಾನಲ್‍ಗಳಲ್ಲಿ ಅರ್ಧ ಗಂಟೆಯ ಅಂತರದಲ್ಲಿ ಪ್ರಸಾರವಾಗುವುದಕ್ಕೆ ಸಜ್ಜಾಗಿದ. ಆ ಕಾರ್ಯಕ್ರಮದ ಹೆಸರು ‘ಫಿಟ್‍ ಬಾಸ್‍’.

ಕನ್ನಡದ ಮೊದಲ ಆರೋಗ್ಯದ ಕುರಿತಾದ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಫಿಟ್‍ ಬಾಸ್‍’, ಆಯುಷ್‍ ಟಿವಿ ಹಾಗೂ ಸಿರಿ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರ (ಕ್ಷೇಮವನ) ಸಹ ಕೈಜೋಡಿದೆ.

ಈ ಕಾರ್ಯಕ್ರಮದ ಕುರಿತು ಮಾತನಾಡುವ ಸಿರಿಕನ್ನಡ ವಾಹಿನಿ ಸಂಸ್ಥಾಪಕ ನಿರ್ದೇಶಕ ಸಂಜಯ್ ಶಿಂಧೆ, ‘ಕಳೆದ ಕೆಲವು ವರ್ಷಗಳಿಂದ ನಮ್ಮ ಸಿರಿಕನ್ನಡ ವಾಹಿನಿ ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆ ಪಡೆದಿದೆ. ಪ್ರಸ್ತುತ ಆಯುಷ್ ಟಿವಿಯ ‘ಫಿಟ್ ಬಾಸ್’ ರಿಯಾಲಿಟಿ ಶೋ ಜೊತೆಗೆ ಸಿರಿಕನ್ನಡ ವಾಹಿನಿ ಕೈ ಜೋಡಿಸಿದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಈ ರಿಯಾಲಿಟಿ ಶೋ, ಅಕ್ಟೋಬರ್ 16 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಆಯುಷ್ ಟಿವಿಯಲ್ಲಿ ಸಂಜೆ 7 ಕ್ಕೆ ಹಾಗೂ ಸಿರಿಕನ್ನಡ ವಾಹಿನಿಯಲ್ಲಿ ರಾತ್ರಿ 8 ಕ್ಕೆ ಪ್ರಸಾರವಾಗಲಿದೆ’ ಎಂದು ಮಾಹಿತಿ ನೀಡಿದರು.

ಈ ರಿಯಾಲಿಟಿ ಶೋ‌ನ ಆಡಿಷನ್ ನಲ್ಲಿ  ಸುಮಾರು ಎರಡು ಸಾವಿರ ಜನ ಪಾಲ್ಗೊಂಡಿದ್ದು, ಅದರಲ್ಲಿ ಸುಮಾರು 100 ಕೆಜಿ ಗಿಂತ ಹೆಚ್ಚು ತೂಕವಿರುವ  21 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ‘ಈ 21 ಜನ, 21 ದಿನಗಳ ಕಾಲ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಆರೋಗ್ಯದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಪರಿಹಿರಿಸಕೊಳ್ಳುವುದರ ಜೊತೆಗೆ ಆಟ, ಮೋಜು, ಮಸ್ತಿ ಮತ್ತು ಸ್ನೇಹ ಸಂಬಂಧಗಳ ಮೌಲ್ಯಗಳನ್ನು ಈ ರಿಯಾಲಿಟಿ ಶೋನಲ್ಲಿ ಕಲಿತಿದ್ದಾರೆ. ‘ಗೋಲ್ಡನ್ ಸ್ಟಾರ್’ ಗಣೇಶ್, ಅಮೂಲ್ಯ, ರೂಪಿಕಾ, ನಿರೂಪಕ ಮುರಳಿ, ಆರ್ಯನ್ ಶಾಮ್ ಮುಂತಾದ ಗಣ್ಯರು ಗ್ರ್ಯಾಂಡ್ ಫಿನಾಲೆಗೆ ಆಗಮಿಸಿ ಸ್ಪರ್ಧಿಗಳಿಗೆ ಶುಭ ಕೋರಿದ್ದಾರೆ. ಗೆದ್ದ ಸ್ಪರ್ಧಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ’ ಎಂದು ‘ಫಿಟ್ ಬಾಸ್’ ರಿಯಾಲಿಟಿ ಶೋ‌ ನಿರ್ದೇಶಕ ಬಾಲಕೃಷ್ಣ ತಿಳಿಸಿದರು.

‘ಫಿಟ್ ಬಾಸ್’ ರಿಯಾಲಿಟಿ ಶೋನ ಆರಂಭದ ದಿನ ಹಾಗೂ ಫಿನಾಲೆ ದಿನ ನಿರೂಪಕನಾಗಿ ಪ್ರಶಾಂತ್‍ ಸಂಬರ್ಗಿ ಕೆಲಸ ಮಾಡಿದ್ದಾರೆ.

ಇತ್ತೀಚೆಗೆ ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಆಯುಷ್‍ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಹರಿಕೃಷ್ಣ, ಆಯುಷ್‍ ಟಿವಿಯ ಉಪಾಧ್ಯಕ್ಷ ಅರುಣಾಚಲಂ, ಸಿರಿ ಕನ್ನಡ ವಾಹಿನಿಯ ಮುಖ್ಯಸ್ಥ ರಾಜೇಶ್‍ ರಾಜಘಟ್ಟ ಮುಂತಾದವರು ಹಾಜರಿದ್ದರು.

https://indiascreens.in/shooting-for-chef-chidambara-concludes/

Discover more from KannadaScreens

Subscribe now to keep reading and get access to the full archive.

Continue reading