ಅನಿರುದ್ಧ್ ಜತ್ಕರ್ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಅಭಿನಯಿಸಿದ ಚಿತ್ರವೊಂದು ಬಿಡುಗಡೆಯಾಗಿ ಐದು ವರ್ಷಗಳೇ ಆಗಿವೆ. ’ರಾಜಾ ಸಿಂಹ’ ನಂತರ ಇದೀಗ ‘Chef ಚಿದಂಬರ’ ಚಿತ್ರದಲ್ಲಿ ನಟಿಸಿದ್ದು, ಚಿತ್ರ ಜೂನ್ 14ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ರೂಪ ಡಿ.ಎನ್ ನಿರ್ಮಾಣದ ಹಾಗೂ ಆನಂದರಾಜ್ ಎಂ ನಿರ್ದೇಶಿಸಿರುವ ‘Chef ಚಿದಂಬರ’ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ರಮೇಶ್ ಅರವಿಂದ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಡಾ.ವಿಷ್ಣುವರ್ಧನ್ ಹಾಗೂ ತಮ್ಮ ನಡುವಿವ ಒಡನಾಟವನ್ನು ನೆನಪಿಸಿಕೊಂಡು ಮಾತು ಆರಂಭಿಸಿದ ರಮೇಶ್ ಅರವಿಂದ್, ‘ಅನಿರುದ್ದ್ ನನ್ನ ನಿರ್ದೇಶನದ ‘ರಾಮ ಶ್ಯಾಮ ಭಾಮ’ ಮತ್ತು ‘ಸತ್ಯವಾನ್ ಸಾವಿತ್ರಿ’ ಚಿತ್ರಗಳನಲ್ಲಿ ಅಭಿನಯಿಸಿದ್ದರು,. ಅವರೊಬ್ಬ ಪ್ರತಿಭಾವಂತ ನಟ. ಈ ಚಿತ್ರದ ಟ್ರೇಲರ್ ಚೆನ್ನಾಗಿದೆ. ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರದ ಟ್ರೇಲರ್ ಕುತೂಹಲ ಮೂಡಿಸಿದೆ. ಚಿತ್ರ ಯಶಸ್ವಿಯಾಗಲಿ’ ಎಂದು ಹಾರೈಸಿದರು.

ನಿರ್ಮಾಪಕಿ ರೂಪ ಅವರ ಪತಿ ಸರ್ವೋತಮ್ ಹಾಗೂ ಅನಿರುದ್ಧ್ ಬಹಳ ವರ್ಷಗಳ ಸ್ನೇಹಿತರಂತೆ. ‘ಸರ್ವೋತ್ತಮ್ ಒಮದು ಚಿತ್ರ ಮಾಡೋಣ ಎಂದಾಗ ಸಾಕಷ್ಟು ಕಥೆಗಳನ್ನು ಕೇಳಿದ್ದ. ಆನಂದರಾಜ್ ಅವರು ಹೇಳಿದ ಈ ಕಥೆ ಇಷ್ಟವಾಯಿತು. ನಂತರ ಡಾ. ವಿಷ್ಣುವರ್ಧನ್ ಸ್ಮಾರಕದ ಬಳಿ ಸ್ಕ್ರಿಪ್ಟ್ ಪೂಜೆ ಮಾಡಲಾಯಿತು. ಮುಹೂರ್ತದ ದಿನ ಭಾರತಿ ವಿಷ್ಣುವರ್ಧನ್ ಅವರು ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದರು. ಕಿಚ್ಚ ಸುದೀಪ್ ಟೀಸರ್‍ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದರು. ಈಗ ರಮೇಶ್ ಅರವಿಂದ್ ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಎಲ್ಲರಿಗೂ ಧನ್ಯವಾದಗಳು’ ಎಂದರು.
‘Chef ಚಿದಂಬರ’ ಚಿತ್ರದ ಚಿತ್ರೀಕರಣ ಕೇವಲ 29 ದಿನಗಳಲ್ಲಿ ಮುಗಿದಿದೆ ಎಂದು ಮಾತು ಶುರು ಮಾಡಿದ ಆನಂದರಾಜ್, ‘ಚಿತ್ರದಲ್ಲಿ ಮೂರು ಹಾಡುಗಳಿದೆ. ಅದರಲ್ಲಿ ಒಂದು ಹಾಡನ್ನು ಅನಿರುದ್ದ್ ಅವರೆ ಹಾಡಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು ನಿರ್ದೇಶಕ ಆನಂದರಾಜ್.
‘Chef ಚಿದಂಬರ’ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಶರತ್ ಲೋಹಿತಾಶ್ವ, ಶಿವಮಣಿ, ಮಹಾಂತೇಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಸಂಗೀತ ಮತ್ತು ಉದಯ್ ಲೀಲಾ ಛಾಯಾಗ್ರಹಣವಿದೆ.


